ಹಸಿದವರ ಹೊಟ್ಟೆ ತಣಿಸಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಕುಟುಂಬದವರನ್ನು ಕಳೆದುಕೊಂಡ ಅನಾಥರು, ಹೆತ್ತ ಮಕ್ಕಳಿಂದ ಹೊರಬಿದ್ದ ವಯೋವೃದ್ಧರು, ಒಂಟಿಯಾಗಿ ಬದುಕುತ್ತಿರುವ ಲಕ್ಷಾಂತರ ಮಂದಿ ನಮ್ಮೊಂದಿಗೆ ಇದ್ದಾರೆ. ಆದ್ರೆ, ಈ ಆಧುನಿಕ ಜಗತ್ತಿನಲ್ಲಿ ಸ್ವಾರ್ಥದ ಬದುಕು ನಡೆಸುತ್ತಿರುವವರೇ ಹೆಚ್ಚು. ತಮ್ಮದಲ್ಲದ ತಪ್ಪಿಗೆ ನಾನಾ ಕಾರಣಗಳಿಂದ ಒಂದೊತ್ತು ತುತ್ತಿಗಾಗಿಯೂ ಅಲೆಯುತ್ತಿರುವವರಿಗೆ ಸಹಾಯ ಮಾಡೋರು ತೀರ ವಿರಳ.
ಆದ್ರೆ, ಮುಂಬೈನಲ್ಲಿ ಒಬ್ರು ಅಪರೂಪ ವ್ಯಕ್ತಿತ್ವ ಹೊಂದಿರೋ ವ್ಯಕ್ತಿ ಇದ್ದಾರೆ. ಇವರು ವೃತ್ತಿಯಲ್ಲಿ ವೈದ್ಯರು. ವೃತ್ತಿಯೊಂದಿಗೆ ನೂರಾರು ಹಸಿದ ಹೊಟ್ಟೆ ತಣಿಸುತ್ತಿರುವ ಅನ್ನದಾತ ಇವರು. ವೃದ್ಧರನ್ನು ಸ್ವಂತಃ ತನ್ನ ತಂದೆ ತಾಯಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿರುವ ಮಹಾನೀಯ ಈತ. ಹಸಿದವರ ಪಾಲಿನ ದೇವರಾಗಿರುವ ಇವರ ಹೆಸರು ಡಾ. ಉದಯ್ ಮೋದಿ ಅಂತಾ.
ಡಾ. ಉದಯ್ ಮೋದಿಯವರು ನೂರಕ್ಕೂ ಹೆಚ್ಚು ಹಸಿದವರ ಹೊಟ್ಟೆ ತಣ್ಣಿಸುತ್ತಿಸುತ್ತಿದ್ದಾರೆ. ಇಂತಹ ಮಹತ್ಕಾರ್ಯವನ್ನು ಹಲವು ವರ್ಷಗಳಿಂದ ಎಡೆಬಿಡದೆ ಮಾಡಿಕೊಂಡು ಬರ್ತಿದ್ದಾರೆ. ಇದಕ್ಕಾಗಿಯೇ ಡಾ. ಉದಯ್ ಮೋದಿ “ಶ್ರವಣ್ ಟಿಫಿನ್ ಸೇವಾ ಸಂಸ್ಥೆ”ಯನ್ನು ತೆರೆದಿದ್ದಾರೆ. ಮುಂಬೈ ನಗರದ ಮಿರ ಭಯಂದರ್ ಏರಿಯಾದ ಸುಮಾರು 200ಕ್ಕೂ ಅಧಿಕ ಹಿರಿಯ ಜೀವಗಳಿಗೆ ಇವರು ಅನ್ನ ನೀಡುತ್ತಿದ್ದಾರೆ.
ಅರಂಭದಲ್ಲಿ ಉದಯ್ ಮೋದಿಯವರು ತಮ್ಮ ಆಸ್ಪತ್ರೆ ಬಳಿ ಅಡುಗೆ ಮಾಡಿಕೊಳ್ಳಲು ಅಶಕ್ತರಾಗಿದ್ದ ವೃದ್ಧ ದಂಪತಿಗಳಿಗೆ ಊಟ ನೀಡುವ ಕೆಲಸ ಶುರುಮಾಡಿದ್ರು. ಈ ಕೆಲಸ ಡಾ. ಉದಯ್ ಮೋದಿಗೆ ಸಾಕಷ್ಟು ತೃಪ್ತಿ ನೀಡಿತ್ತು. ಒಮ್ಮೆ ಇವರ ಕರುಳು ಕಿತ್ತು ಬಂರುವಂತ ಘಟನೆ ಕೇಳಿದ್ರು. ಇದರಿಂದ ತೀರ ನೊಂದುಕೊಂಡು ಬಿಟ್ರು. ಆ ಕಥೆಯೇ ಇಂದು ‘ಶ್ರವಣ್ ಟಿಫಿನ್ ಸೆಂಟರ್’ ಸಂಸ್ಥೆ ತೆರೆಯೋದಕ್ಕೆ ಕಾರಣವಾಗಿದೆ.
ಒಮ್ಮೆ ವಯೋವೃದ್ಧರು ಒಬ್ಬರು ಇವರ ಆಸ್ಪತ್ರೆಗೆ ಪ್ಯಾರಾಲಿಟಿಕ್ ಸ್ಟ್ರೋಕ್ ಆಗಿದ್ದ ತನ್ನ ಹೆಂಡತಿಗೆ ಚಿಕಿತ್ಸೆ ನೀಡಲು ಕರ್ಕೊಂಡು ಬಂದಿದ್ರು. ಅವರು ಹೇಳಿದ ಕಥೆ ಕೇಳಿ ಇವ್ರಿಗೆ ಶಾಕ್ ಆಯಿತು. ಅಡುಗೆ ಮಾಡಿಕೊಳ್ಳಲು ಶಕ್ತಿ ಇಲ್ಲದ ವೃದ್ಧ ದಂಪತಿಗಳನ್ನು ಅವರ ಮಕ್ಕಳು ಮನೆಯಿಂದ ಹೊರಕ್ಕೆ ತಳ್ಳಿ ಬಿಟ್ಟಿದ್ರು. ಅವರ ಕಥೆ ಕೇಳಿ ಉದಯ್ ಮೋದಿಯವರ ಮನಸಿಗೆ ಘಾಸಿಯಾಗಿತ್ತು. ಆ ತಕ್ಷಣವೇ ಚಿಕಿತ್ಸೆ ನೀಡಿ ಹಸಿವು ನೀಗಿಸಿದ್ರು. ಆಗಲೇ ದೃಡ ನಿರ್ಧಾರ ಮಾಡಿದ್ರು ಇವರಿಗೆ ಮಾತ್ರವಲ್ಲಿ ಕಷ್ಟದಲ್ಲಿರುವ ವೃದ್ಧರಿಗೆಲ್ಲಾ ನನ್ನ ಕೈಲಾದ ಮಟ್ಟಿಗೆ ಊಟ ನೀಡಬೇಕು ಎಂದು ನಿರ್ಧಾರ ಮಾಡಿದ್ರು.
ಕೆಲವು ದಿನಗಳ ಕಾಲ ಆ ವೃದ್ಧ ದಂಪತಿಗಳಿಗೆ ಡಾ. ಉದಯ್ ಮೋದಿ ಊಟ ನೀಡಿ ಸಲುಹಿದ್ರು. ಈ ಮಧ್ಯೆ ಡಾ. ಉದಯ್ ಮೋದಿ ಪತ್ನಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ವಯಸ್ಸಾದವರ ಹೊಟ್ಟೆ ತುಂಬಿಸುವಂತೆ ಪ್ರೇರಣೆ ನೀಡಿದ್ರು. ಆರಂಭದ ದಿನಗಳಲ್ಲಿ ಉದಯ್ ಮೋದಿಯವರ ಪತ್ನಿ ಅಡುಗೆ ಕೆಲಸವನ್ನು ನಿಭಾಯಿಸುತ್ತಿದ್ರು. ಆಗ ಅಕ್ಕಪಕ್ಕದ ವೃದ್ಧರಿಗೆ ಊಟ ವ್ಯವಸ್ಥೆ ಮಾಡ್ತಿದ್ರು. ಆದ್ರೆ ಈಗ 200ಕ್ಕೂ ಅಧಿಕ ವಯಸ್ಸಾದವರಿಗೆ ಊಟ ನೀಡುವ ಕೆಲಸ ಮಾಡ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ಜನರಿಗೆ ಅಡುಗೆ ಮಾಡುವ ಸಲುವಾಗಿ ಕೆಲಗಾರರನ್ನು ನೇಮಿಸಿಕೊಂಡಿದ್ದಾರೆ.
ನಿತ್ಯವೂ ವೃದ್ಧರಿಗಾಗಿ ಪೌಷ್ಟಿಕ ಆಹಾರ ತಯಾರಾಗುತ್ತೆ. ವೃದ್ಧರಿಗೆ ಶಕ್ತಿ ನೀಡುವಂತ ಪ್ರೋಟಿನ್ಯುಕ್ತ ಆಹಾರವನ್ನು ತಯಾರಿಸಲಾಗುತ್ತೆ. ಡಯಾಬಿಟಿಕ್ ಪೇಶೆಂಟ್ಗಳಿಗಾಗಿ ವಿಶೇಷ ಅಡುಗೆಯೂ ತಯಾರಾಗುತ್ತೆ. ಇಲ್ಲಿಗೆ ಅಡುಗೆ ಕೆಲಸಕ್ಕೆ ಸೇರಿಕೊಂಡಿರುವವರು ಕೂಡ ವೃದ್ಧರು. ಅವರಿಗೆ ಕೆಲಸ ನೀಡುವ ಜೊತೆಗೆ ಮೂಲ ಸೌಕರ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಉದಯ್ ಮೋದಿಯವರು ಪ್ರತಿದಿನವೂ ತಮ್ಮ ಮನೆಯಲ್ಲಿ ತಯಾರಾಗುವ ಆಹಾರವನ್ನು ತಾವೇ ಖುದ್ದಾಗಿ ಪರಿಶೀಲನೆ ಮಾಡಿ, ಅದನ್ನು ಹಂಚಲು ಏರ್ಪಾಡು ಮಾಡ್ತಾರೆ.
ತಯಾರಾದ ಪೌಷ್ಟಿಕ ಆಹಾರವನ್ನು ಕ್ಯಾರಿಯರ್ಗಳಿಗೆ ತುಂಬಿ ಸಿದ್ಧ ಮಾಡುತ್ತಾರೆ. ಸುಮಾರು 8 ರಿಂದ 10 ಕಿಲೋ ಮೀಟರ್ ಸುತ್ತಮುತ್ತ ವೃದ್ಧರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಊಟದ ವಿತರಣೆಗಾಗಿಯೇ ಸೈಕಲ್, ಬೈಕ್ ಮತ್ತು ಒಂದು ಆಟೋವನ್ನು ಕೂಡ ಖರೀದಿ ಮಾಡಿದ್ದಾರೆ. ಅದ್ರಲ್ಲಿ ನಿತ್ಯವೂ ನಾಲ್ಕೈದು ಮಂದಿ ಊಟದ ಕ್ಯಾರಿಯರ್ ತೆಗೆದುಕೊಂಡು ಹೋಗಿ ವೃದ್ಧರ ಮನೆಗೆ ಕೊಟ್ಟು ಬರ್ತಾರೆ.
ಡಾ. ಉದಯ್ ಮೋದಿಯವರು ವೈದ್ಯ ವೃತ್ತಿಯಲ್ಲಿ ತೊಡಗಿ ಕೊಂಡಿದ್ರೂ ಬಿಡುವಿನ ವೇಳೆಯಲ್ಲಿ ಸ್ವತಃ ತಾವೇ ಖುದ್ದಾಗಿ ಊಟದ ಕ್ಯಾರಿಯರ್ನೊಂದಿಗೆ ವೃದ್ಧರ ಮನೆಗೆ ಭೇಟಿ ನೀಡ್ತಾರೆ. ಅದಷ್ಟೇ ಮಾತ್ರವಲ್ಲದೇ ಆರೋಗ್ಯವನ್ನು ವಿಚಾರಿಸಿ ಸೂಕ್ತ ಚಿಕಿತ್ಸೆಯನ್ನು ಸಹ ನೀಡ್ತಾರೆ. ಡಾ. ಉದಯ್ ಮೋದಿಯವರು ಇಂತಹ ಮಹತ್ಕಾರ್ಯವನ್ನು ಕಳೆದ 10 ವರ್ಷಗಳಿಂದ ಮಾಡಿಕೊಂಡು ಬರ್ತಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಹೋರಾಟಗಾರರ ನೆರವಿನಿಂದ ಆಪತ್ತಿನಲ್ಲಿರುವವರಿಗೆ ಚಿಕಿತ್ಸೆಯ ವ್ಯವಸ್ಥೆಯನ್ನು ಕೂಡ ಮಾಡ್ತಿದ್ದಾರೆ.
ಹೀಗೆ ಸ್ವಂತ ಖರ್ಚಿನಲ್ಲಿ ನೂರಾರು ಮಂದಿಗೆ ಹಸಿವನ್ನು ತಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ ಕಟ್ಟುವ ಕನಸು ಕಾಣುತ್ತಿದ್ದಾರೆ. ಆ ಕನಸು ಆದಷ್ಟು ಬೇಗ ನನಸಾಗಿ ಇನ್ನು ನೂರಾರು ಜನರಿಗೆ ಹಸಿವು ನೀಗಿಸಲಿ ಅನ್ನೋದೆ ನಮ್ಮ ಆಶಯ ಕೂಡ. ಇಂತಹ ನಿಸ್ವಾರ್ಥ ಸೇವೆ ಮಾಡ್ತಿರುವ ಡಾ. ಉದಯ್ ಮೋದಿಯವರಿಗೆ ನಮ್ಮದೊಂದು ಸಲಾಂ.