ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಜೀವನ ಮುಡಿಪಾಗಿಟ್ಟವರು..!
ಶಿಬುಲಾಲ್. ಬಡವರ, ಅನಾಥ ಮಕ್ಕಳ ಪಾಲಿನ ವಿದ್ಯಾದಾತೆ. ಶಿಕ್ಷಣದ ಮೂಲಕ ಸಾವಿರಾರು ಅನಾಥ ಮಕ್ಕಳ ಬದುಕು ಬದಲಾಯಿಸಿದರು. ಇವರು ಶಿಕ್ಷಣಕ್ಕೆ ನೀಡಿರುವ ಮಹತ್ವವನ್ನು ಬೇರ್ಯಾವುದಕ್ಕೂ ನೀಡಿಲ್ಲ. ಬಾಲ್ಯದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದ್ದರಿಂದ್ಲೇ ಕುಮಾರಿ 1999ರಲ್ಲಿ ಸರೋಜಿನಿ ದಾಮೋದರನ್ ಫೌಂಡೇಶನ್’ ಹಾಗೂ 2004ರಲ್ಲಿ ಅದ್ವೈತ್ ಫೌಂಡೇಶನ್’ ಅನ್ನು ಆರಂಭಿಸಿದ್ರು. ಅಷ್ಟೇ ಅಲ್ಲ ಅವರು 2007ರಲ್ಲಿ ಪ್ರಾರಂಭವಾದ ಸಂಹಿತ ಅಕಾಡೆಮಿಯ ಟ್ರಸ್ಟಿ ಕೂಡ.
ಕೇರಳದ ಪುಟ್ಟ ಗ್ರಾಮ ರಾಮಮಂಗಲಂನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು ಕುಮಾರಿ ಶಿಬುಲಾಲ್. ಮನೆಯಿಂದ ಕಿಲೋಮೀಟರ್ಗಟ್ಟಲೆ ದೂರವಿದ್ದ ಶಾಲೆಯಲ್ಲಿ ಅವರು ಪ್ರಾಥಮಿಕ ಶಿಕ್ಷಣ ಪಡೆದ್ರು. ಬಳಿಕ ಕೊಚ್ಚಿನ್ನಲ್ಲಿ ಪಿಯುಸಿ ಮುಗಿಸಿ, ಕೇರಳ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಬಿಎಸ್ಸಿ ಪದವಿ ಕೂಡ ಪಡೆದ್ರು. 24ರ ಹರೆಯದಲ್ಲೇ ಇನ್ಫೋಸಿಸ್ನ ಮಾಜಿ ಸಿಇಓ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಎಸ್.ಡಿ.ಶಿಬುಲಾಲ್ ಅವರೊಂದಿಗೆ ಕುಮಾರಿ ಅವರ ವಿವಾಹ ನೆರವೇರಿತು. ಕುಮಾರಿ ಅವರ ಪತಿ ಇನ್ಫೋಸಿಸ್ನ 7 ಮಂದಿ ಸಂಸ್ಥಾಪಕರಲ್ಲೊಬ್ಬರು.
ಮದುವೆ ಬಳಿಕ ಕುಮಾರಿ ಹಾಗೂ ಶಿಬುಲಾಲ್ ದಂಪತಿ ಮುಂಬೈಗೆ ಶಿಫ್ಟ್ ಆದ್ರು. ಆ ಸಮಯದಲ್ಲಿ ಇನ್ಫೋಸಿಸ್ ಇನ್ನೂ ಅಂಬೆಗಾಲಿಡುತ್ತಿತ್ತಷ್ಟೆ. ಸಂಸ್ಥಾಪಕರಲ್ಲೊಬ್ಬರಾದ ಶಿಬುಲಾಲ್ ಅವರ ಪತ್ನಿಯಾಗಿರೋದ್ರಿಂದ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಎದುರಾದ ಕಷ್ಟಗಳೆಲ್ಲವೂ ಕುಮಾರಿ ಅವರಿಗೆ ಗೊತ್ತು. ಕಂಪನಿಗಾಗಿ ಇದ್ದ ಹಣವನ್ನೆಲ್ಲ ವೆಚ್ಚ ಮಾಡಿದ್ದು, ಮಂಗಲಸೂತ್ರವನ್ನು ಕೂಡ ಅಡವಿಟ್ಟಿದ್ದರಂತೆ. ಮತ್ತೆ, ಇದ್ದ ಹಣವನ್ನೆಲ್ಲ ಕಂಪನಿಗೆ ಹಾಕಿದ್ರರಂತೆ.
ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಕನಸು ಕುಮಾರಿ ಹಾಗೂ ಶಿಬುಲಾಲ್ ದಂಪತಿಯಲ್ಲಿತ್ತು. ಹಣಕಾಸಿನ ವಿಚಾರದಲ್ಲಿ ಕೊಂಚ ಸುಸ್ಥಿತಿಗೆ ಬರುತ್ತಿದ್ದಂತೆ ಶಿಕ್ಷಣ ಕ್ಷೇತ್ರದತ್ತ ಗಮನಹರಿಸಲು ಅವರು ನಿರ್ಧರಿಸಿದ್ರು. ಶಿಕ್ಷಣದ ಮೂಲಕ ಬದುಕನ್ನೇ ಬದಲಾಯಿಸಲು ಆರಂಭವಾದ ಸಂಸ್ಥೆ ಸರೋಜಿಸಿ ದಾಮೋದರನ್ ಫೌಂಡೇಶನ್. ಈಗ ಈ ಪ್ರತಿಷ್ಠಾನ ಕೇರಳ ಹಾಗೂ ಕರ್ನಾಟಕದಲ್ಲಿ ಮೆಟ್ರಿಕ್ ಓದುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುತ್ತಿದೆ.
ವಿದ್ಯಾದಾನ್ ಹೆಸರಿನ ಈ ಯೋಜನೆಯಡಿ ಇದುವರೆಗೆ ಐದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗಿದೆ. ಪ್ರತಿ ವರ್ಷ ಖುದ್ದು ಕುಮಾರಿ ಅವರೇ ತೆರಳಿ ವಿದ್ಯಾರ್ಥಿಗಳ ಸಂದರ್ಶನ ಮಾಡ್ತಾರೆ. ಆರಂಭದಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿಂದ ಆರಂಭವಾದ ಈ ಯೋಜನೆ ಈಗ ಎರಡೂ ರಾಜ್ಯಗಳಲ್ಲಿ ವಿಸ್ತರಿಸಿದೆ. ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಅಷ್ಟೇ ಅಲ್ಲ ಅವರಿಗೆ ಬದುಕು ಕಟ್ಟಿಕೊಡುವ ಕಾರ್ಯವನ್ನೂ ಅದು ಮಾಡುತ್ತಿದೆ. ಇದರಿಂದ ಸಾವಿರಾರು ಮಕ್ಕಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.
ಕುಮಾರಿ ಶಿಬುಲಾಲ್ ಅವರು ಸಮಾನ ವಿಶ್ವ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ. ಅದ್ವೈತ್ ಫೌಂಡೇಶನ್ ಕೂಡ ಸಾಹಿತ್ಯ ಅಕಾಡೆಮಿಯಲ್ಲಿ ಅಂಕುರ್ ಯೋಜನೆಯ ಮೂಲಕ 123 ವಿದ್ಯಾರ್ಥಿಗಳಿಗೆ ರೆಸಿಡೆನ್ಷಿಯಲ್ ಶಿಕ್ಷಣ ನೀಡುತ್ತಿದೆ. ಕುಮಾರಿ ಅವರಿಗೆ ಶಾಲೆ ಆರಂಭಿಸುವ ಉದ್ದೇಶವಿರಲಿಲ್ಲ. ಆದ್ರೆ ಎಲ್ಲಾ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಸಮನಾದ ಅವಕಾಶ ಸಿಗುತ್ತಿಲ್ಲ ಅನ್ನೋ ವಿಚಾರ ಅವರಿಗೆ ಬೇಸರ ತಂದಿತ್ತು. ಅವರನ್ನೆಲ್ಲ ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕೆಂಬುದೇ ಆಸೆ. ಅದು ಸಾಧ್ಯವಾಗುತ್ತಿಲ್ಲ ಎಂಬುದು ಗೊತ್ತಾದಾಗ ಅವರು ನಮ್ಮದೇ ಶಾಲೆಯೊಂದನ್ನು ಆರಂಭಿಸಿದ್ರು.
ಇನ್ನು ಕೃಷಿ ಹಿನ್ನೆಲೆಯಲ್ಲಿ ಬೆಳೆದವರಾಗಿದ್ದರಿಂದ ಸಾವಯವ ಕೃಷಿ ಬಗ್ಗೆ ಕುಮಾರಿ ಅವರಿಗೆ ಆಸ್ಥೆಯಿದೆ. ಬಿಡುವಿನ ವೇಳೆಯಲ್ಲಿ ಕುಮಾರಿಯವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೇರಳದಲ್ಲಿ ಅವರು ಸಾವಯವ ಕೃಷಿಕರಿಗೆ ಅಕ್ಷಯ ಶ್ರೀ ಪ್ರಶಸ್ತಿಯನ್ನು ಕೂಡ ನೀಡುತ್ತಿದ್ದಾರೆ. 62ರ ಹರೆಯದ ಕುಮಾರಿ ಅವರು ಪರೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಗರ್ಭಿಣಿಯರ ಪೋಷಣೆ, ಪಿಂಚಣಿ ಯೋಜನೆಗಳು, ಸಾವಯವ ಕೃಷಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಕುಮಾರಿ ಶಿಬುಲಾಲ್ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು.