ಅಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ..! ಈಶಾನ್ಯ ರಾಜ್ಯ ಅಸ್ಸಾಂನಲ್ಲೊಂದು ವಿಚಿತ್ರ..!
ಜೀವನ ಬೋರ್ ಆದಾಗ, ಸಾಲ ಹೆಚ್ಚಾದಾಗ ಕೆಲವರು ಆತ್ಮಹತ್ಯೆಯ ಮಾರ್ಗ ಹಿಡಿಯುತ್ತಾರೆ. ಅದು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಆದರೆ ಪ್ರಾಣಿ ಪಕ್ಷಿಗಳು ಎಂದಾದರೂ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿದ್ದೀರಾ..? ನೋಡಿದ್ದೀರಾ..? ಬಹುಶಃ ಇಲ್ಲ ಅನ್ನಿಸುತ್ತೆ. ಅದರಲ್ಲೂ ಈ ರೀತಿಯ ಪ್ರಶ್ನೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ. ಆದರೆ ಭಾರತದಲ್ಲೊಂದು ಪ್ರದೇಶ ಇದೆ. ಇಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ..! ಇದು ನೂರಕ್ಕೆ ನೂರರಷ್ಟು ಸತ್ಯ.
ಹೌದು.. ಈಶಾನ್ಯ ರಾಜ್ಯ ಅಸ್ಸಾಂನ ಜತಿಂಗ್ ಎಂಬಲ್ಲಿರುವ ಪಕ್ಷಿಧಾಮದಲ್ಲಿ ಇಂಥದ್ದೊಂದು ಪ್ರಕೃತಿ ವಿಚಿತ್ರ ಸಂಭವಿಸುತ್ತಿದೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಜತಿಂಗ್ ಗೆ ಬರುತ್ತಿದ್ದಾರೆ. ವಿಶೇಷವೆಂದರೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಬರುವ ಪಕ್ಷಿಗಳು ಇಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತವೆ.
ಪ್ರತಿವರ್ಷ 44ಕ್ಕೂ ಹೆಚ್ಚು ಪ್ರಭೇಧದ ಹಕ್ಕಿಗಳು ಇಲ್ಲಿಗೆ ಪ್ರವಾಸ ಬರುತ್ತವೆ. ಅದರಲ್ಲೂ ಕಿಂಗ್ಫಿಶರ್, ಇಂಡಿಯಾನಾ ಪಿಟ್ಟಾ, ಗ್ರೀನ್ ಬಿಟ್ಟೆಡ್ ಪಿಟ್ಟಾ, ಗ್ರೀನ್ ಪಿಜನ್, ಬ್ಲ್ಯಾಕ್ ಡ್ರಾಂಗೋ, ರಾಕೆಟ್, ಟೈಲ್ಡ್ ಡ್ರಾಂಗೊ, ವಿಸ್ಲಿಂಗ್ ಡಕ್, ಪಾರಿವಾಳಗಳು ಮತ್ತು ಗ್ರೀನ್ ಹೆರೋನ್ ಸೇರಿದಂತೆ ಹತ್ತಾರು ಜಾತೀಯ ಪ್ರಭೇದದ ಪಕ್ಷಿಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗೆ ಬರುವ ಹಕ್ಕಿಗಳು, ಸಂಜೆ ವೇಳೆಯಲ್ಲಿ ಏಕ ಕಾಲಕ್ಕೆ ಆಕಾಶದತ್ತ ಹಾರುತ್ತವೆ. ಬಳಿಕ ನೇರವಾಗಿ ಕಟ್ಟಡ ಹಾಗೂ ಬಂಡೆಗಳಿಗೆ ಗುದ್ದಿ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಈ ವಿಚಿತ್ರ ಘಟನೆ ನವೆಂಬರ್ ಮತ್ತು ಡಿಸೆಂಬರ್ ವೇಳೆಯಲ್ಲಿ ಮಾತ್ರ ಘಟಿಸುತ್ತದೆ. ಅದೂ ಕೂಡಾ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯ ನಡುವೆ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ.
ಈ ಭಯಾನಕ ಘಟನೆಯ ಹಿಂದೆ ಒಂದು ಕಥೆ ಇದೆ. 1988ರಲ್ಲಿ ಈ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಪ್ರವಾಹ ಬಂದು ಹಲವಾರು ಜನ ಸಾವನ್ನಪ್ಪಿದ್ದರಂತೆ. ಅದರ ನಂತರ ಅದೇ ಸ್ಥಳದಲ್ಲಿ ಹಲವಾರು ಸಂಖ್ಯೆಯಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಆರಂಭಿಸಿದವು ಎನ್ನಲಾಗಿದೆ. ಅದು ಇಂದಿಗೂ ಮುಂದುವರೆದುಕೊಂಡು ಬಂದಿದೆ. ಕೆಟ್ಟ ಆತ್ಮಗಳ ಸಂಚಾರದ ಪರಿಣಾಮವಾಗಿ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ಈ ಹಳ್ಳಿಯ ಜನ ಹೇಳುತ್ತಾರೆ. ವಾಸ್ತವವಾಗಿ ಹಕ್ಕಿಗಳು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ಸತ್ತ ಮನುಷ್ಯರ ಆತ್ಮಗಳು ಇವುಗಳು ಸಾಯಲು ಪ್ರೇರೇಪಿಸುತ್ತದೆ ಎಂದೂ ನಂಬಲಾಗಿದೆ.
ಆದರೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಿದರೆ ಪಕ್ಷಿಗಳು ಕತ್ತಲಿನ ಸಮಯದಲ್ಲಿ ಬೆಳಕನ್ನು ಹುಡುಕುತ್ತಾ, ಭೂಮಿಯತ್ತ ವೇಗವಾಗಿ ಬರುತ್ತವೆ. ಆ ವೇಳೆಯಲ್ಲಿ ಬಂಡೆ, ಕಟ್ಟಡ, ಮರಗಳಿಗೆ ನೇರವಾಗಿ ಅಪ್ಪಳಿಸಿ ಸಾವನ್ನಪ್ಪುತ್ತವೆ. ಇಲ್ಲದೇ ಹೋದಲ್ಲಿ ಪಕ್ಷಿಗಳೇಕೆ ಬೆಳಕು ಇರುವ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ವಿಜ್ಞಾನಿಗಳು ಕೇಳುತ್ತಾರೆ.
ಜತಿಂಗ್ ಎಂಬ ಈ ಊರು ಗುವಾಹಟಿಯಿಂದ 330 ಕಿಮೀ ದೂರದಲ್ಲಿದೆ. ಇಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಲು ವಾಚ್ ಟವರ್ ಗಳನ್ನು ನಿರ್ಮಿಸಲಾಗಿದೆ. ಕೆಲವೊಮ್ಮೆ ಪಕ್ಷಿಗಳು ವಾಚ್ ಟವರ್ ಗಳಿಗೂ ಅಪ್ಪಳಿಸಿ ಸಾವನ್ನಪ್ಪುವುದಿದೆಯಂತೆ..!