ಜಾರ್ಜ್ ಡಬ್ಲ್ಯು ಬುಷ್ ನ ಯುದ್ಧ ದಾಹ, ಲಾಡೆನ್ ಇಟ್ಟ ಭಗ್ನಿ ಗೂಟ – ಇವೆಲ್ಲದರಿಂದ ತಲೆಕೆಟ್ಟ ಅಮೇರಿಕನ್ನರು ಹೊಸ ಅಧ್ಯಕ್ಷನನ್ನು 2008ರಲ್ಲಿ ಚುನಾಯಿಸಿಯೇಬಿಟ್ಟಿದ್ದರು. ಬರಾಕ್ ಹುಸೈನ್ ಒಬಾಮ ಅಮೆರಿಕಾ ಗದ್ದುಗೆ ಹಿಡಿದಿದ್ದರು. 2008ರಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಒಬಾಮ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ, ಅವರ ಗೆಲುವು ಸ್ಪಷ್ಟವಾಗಿತ್ತು. ಸದ್ಧಾಂ ಹುಸೈನ್ ನನ್ನು ಹಣಿಯಲು ಹೊರಟ ರಿಪಬ್ಲಿಕ್ ಬುಷ್ ನ ಯುದ್ಧದಾಹ, ಅಮೇರಿಕಾದ ಫ್ರೀಡಂ, ಶಾಂತಿ ಮಂತ್ರವನ್ನ ತನ್ನ ಪ್ರಚಾರಕ್ಕೆ ಅಸ್ತ್ರವನ್ನಾಗಿ ಬಳಸಿಕೊಂಡರು. ಯಾವುದೇ ಅನುಮಾನವಿರಲಿಲ್ಲ. ಹೀ ವಾಸ್ ವನ್ ದ ಗೇಮ್.
ಮೊದಲ ನಾಲ್ಕು ವರ್ಷದ ಆಡಳಿತ, ಒಬಾಮ ಹಾಕಿದ ಫೌಂಡೇಷನ್ ಮೇಲೆ ನಿಜಕ್ಕೂ ಅಲ್ಲಿನ ಜನರಿಗೆ ನಂಬಿಕೆಗಳಿದ್ದವು. ವಿಶ್ವಾಸವಿತ್ತು. ಅದನ್ನು ಕಾರ್ಯರೂಪಕ್ಕೆ ತರಲು ಇನ್ನೊಂದು ಟರ್ಮ್ ಅವಕಾಶ ಕೊಡೋಣ ಅಂತ ನಿಧರ್ಾರ ಮಾಡಿದರು. ಎದುರಾಳಿಗಳಿಗೆ ಒಬಾಮ ವಿರುದ್ಧ ಪ್ರಚಾರಕ್ಕೆ ಬಳಸಲು ಯಾವುದೇ ನ್ಯೂನತೆಗಳೂ ಸಿಗಲಿಲ್ಲ. 2002ರ ಚುನಾವಣೆಯಲ್ಲೂ ಒಬಾಮ ಅಮೇರಿಕಾದ ಗದ್ದುಗೆ ಏರಿದರು. ಅವತ್ತು ಒಬಾಮ ವಿರುದ್ಧ ನಿಂತು ಗೆಲ್ಲುವ ಭರವಸೆ ಹೊತ್ತಿದ್ದ ಮಿಟ್ ರೊಮ್ನಿ ಅನಾಮತ್ತಾಗಿ ಪರಾಭವಗೊಂಡಿದ್ದರು. ಮಿಟ್ ರೊಮ್ನಿ’ಯ ಸೋಲು ಅವತ್ತೇ ಅಲ್ಲಿನ ಅನೇಕ ಅಮೆರಿಕನ್ನರಿಗೆ ಪಥ್ಯವಾಗಲಿಲ್ಲ. ನಿರಾಶೆ ಹೊತ್ತರು. ಕಣ್ಣೀರು ಹಾಕಿದರು.
ಆದರೆ, ಎರಡನೇ ಅವಧಿಯಲ್ಲಿ ಒಬಾಮ ಅಮೇರಿಕನ್ನರ ಆಶಾವಾದ ಕುಸಿಯುವಂತೆ ಮಾಡಿದ್ದರು. ನಂಬಿಕೆ ಹುಸಿಯಾಗಿತ್ತು. ಒಬಾಮಗೆ ಮೊದಲ ಟರ್ಮ್ ನಲ್ಲಿದ್ದ ಆಸಕ್ತಿ, ಈ ಟರ್ಮ್ ನಲ್ಲಿಲ್ಲ ಎನ್ನಲಾಯಿತು. ನೀರಸ ಆಡಳಿತ, ಆರ್ಥಿಕ ಬಿಕ್ಕಟ್ಟು, ಯುದ್ಧ ದಾಹ ಎಲ್ಲಾ ಸೇರಿಕೊಂಡು ಒಬಾಮರನ್ನು ಎರಡನೇ ಅವಧಿಗೆ ಗೆಲ್ಲಿಸಬಾರದಿತ್ತು, ಸೋಲಿಸಬೇಕಿತ್ತು. ಮಿಟ್ ರೊಮ್ನಿಯನ್ನ ಗೆಲ್ಲಿಸಿದ್ದರೇ ಬಹುಶಃ ಆಡಳಿತ ಯಂತ್ರ ಚುರುಕಿರುತ್ತಿತ್ತೇನೋ..? ಯಾರನ್ನೇ ಆಗಲಿ ಒಂದೇ ಟರ್ಮ್ ಗೆ ಮಾತ್ರ ಗೆಲ್ಲಿಸಬೇಕು. ಬದಲಾವಣೆ ಜಗದ ನಿಯಮ. ಇಲ್ಲವೆಂದರೇ ವ್ಯವಸ್ಥೆ ಚುರುಕಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಅಮೆರಿಕನ್ನರು. ಬರಾಕ್ ಒಬಾಮ ಅತ್ಯಂತ ಕೆಟ್ಟ ಅಧ್ಯಕ್ಷ ಅಂತ ಶೇಕಡಾ 33%ರಷ್ಟು ಅಮೆರಿಕನ್ನರು ಹೇಳುತ್ತಾರೆ. ಒಬಾಮ ವಿರುದ್ಧ ಕೊಂಚ ಪ್ರೀತಿಯನ್ನಿಟ್ಟುಕೊಂಡವರ ಪೈಕಿ ಯೂತ್ಸ್ ಗಳ ಸಂಖ್ಯೆಯೇ ಅಧಿಕವಾಗಿದೆ. ಈ ಹಿಂದೆ ಅಮೇರಿಕಾದ ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯ ನಡೆಸಿರುವ ಸಮೀಕ್ಷೆಯಿಂದ ಒಬಾಮ ಅಮೆರಿಕಾ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷರಲ್ಲಿ ಒಬ್ಬರು ಎಂಬ ಸಂಗತಿ ಬಯಲಾಗಿತ್ತು. ಇದರಿಂದ ಒಬಾಮ ಶಾಂತಿಯ ಹರೀಕಾರ, ಜಗತ್ತಿಗೆ ಮಾದರಿ ಎಂದು ಭ್ರಮಿಸಿದವರಿಗೆಲ್ಲಾ ನಿರಾಶೆ ಆಗಿತ್ತು. ಒಬಾಮ ಎರಡನೇ ಮಹಾಯುದ್ಧದ ನಂತರ ಅಮೆರಿಕಾ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಎಂಬ ಅಪವಾದ ಹೊತ್ತುಕೊಂಡಿದ್ದಾರೆ. ಹಾಗಾದ್ರೆ ಒಬಾಮ ಎಡವಿದ್ದೆಲ್ಲಿ..? ಕ್ವಿನ್ನಿಪಿಯಾಕ್ ಯೂನಿವರ್ಸಿಟಿ ಸಮೀಕ್ಷೆ ಪ್ರಕಾರ ಅಮೆರಿಕಾದ ಅತ್ಯುತ್ತಮ ಅಧ್ಯಕ್ಷರು ಯಾರು..? ಅತೀ ಕಳಪೆ ಆಡಳಿತ ನಡೆಸಿದವರ್ಯಾರು..? ಎಲ್ಲವಕ್ಕೂ ಅವರ ಸಮೀಕ್ಷೆ ಉತ್ತರ ಕೊಟ್ಟಿದೆ.
ರೊನಾಲ್ಡ್ ರೇಗನ್. ಮೂಲತಃ ಸಿನಿಮಾ ನಟ, ಅಚಾನಕ್ಕಾಗಿ ರಾಜಕೀಯಕ್ಕೆ ಬಂದವರು. ಆಶಾವಾದವಿತ್ತು, ಜನರ ನಾಡಿಮಿಡಿತ ಅರ್ಥವಾಗಿತ್ತು. ರಿಪಬ್ಲಿಕ್ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಅಮೆರಿಕಾದ ನಲವತ್ತನೇ ಅಧ್ಯಕ್ಷರಾದರು. ಕ್ಯಾಲಿಫೋರ್ನಿಯಾದ 33ನೇ ರಾಜ್ಯಪಾಲರಾದರು. ಜೂನ್ 05, 2004ರಲ್ಲಿ ತನ್ನ ತೊಂಭತ್ತಮೂರನೇ ವಯಸ್ಸಿನಲ್ಲಿ ತೀರಿಹೋದ ರೊನಾಲ್ಡ್ ರೇಗನ್, ಎರಡನೇ ಮಹಾಯುದ್ಧದ ನಂತರ ಅಮೆರಿಕ ಕಂಡ ಅತ್ಯಂತ ಸಕ್ಸಸ್ಫುಲ್ ಪ್ರೆಸಿಡೆಂಟ್. 1981ರಿಂದ 89ರವರೆಗೆ ಎರಡೆರಡು ಟರ್ಮ್ ಅಮೆರಿಕಾವನ್ನು ಆಳಿದ ರೇಗನ್ ಅಲ್ಲಿನ ರಕ್ಷಣಾ ವ್ಯವಸ್ಥೆಯನ್ನು ಬಲಾಢ್ಯಗೊಳಿಸಿದ್ದರು. ಎಕಾನಮಿಯನ್ನು ಸುಧಾರಿಸಿದರು. ಕೋಲ್ಡ್ ವಾರ್ ನಡೆಸುತ್ತಿದ್ದ ಮುಜಾಹಿದೀನ್ಗಳ ಜೊತೆ ಶಾಂತಿಯ ಮಾತಾಡಿದರು. ಲೆಬನೀಸ್ ಸಿವಿಲ್ ವಾರ್ ನಿಭಾಯಿಸಿದರು. ಆಪರೇಷನ್ ಅರ್ಜೆಂಟ್ ಫ್ಯೂರಿಯಲ್ಲಿ ಯಶಸ್ವಿಯಾದರು. ಡ್ರಗ್ಸ್ ವಿರುದ್ಧ ಸೀರಿಯಸ್ಸಾಗಿ ಕ್ರಮ ಕೈಗೊಂಡು ಇಲ್ಲಿಗಲ್ ಇಮ್ಮಿಗ್ರಾಂಟ್ಸ್ ಆಕ್ಟ್ ಜಾರಿಗೆ ತಂದರು. ಅಮೇರಿಕಾವನ್ನು ಜಗತ್ತಿನಲ್ಲೇ ಬಲಿಷ್ಟವಾಗಿ ರೂಪಿಸಿದ್ದರು. ಎಲ್ಲದಕ್ಕಿಂತ ಮಿಗಿಲಾಗಿ ಸ್ವತಃ ತನ್ನ ದೇಶವನ್ನು ಸ್ನೇಹದಿಂದ ಕಂಡರು. ಅಲ್ಲಿನ ಜನರಿಗೆ ಸ್ನೇಹಿತರಾದರು. ಆ ಮೂಲಕ ಇವತ್ತಿಗೂ ಅಮೆರಿಕಾದ ನಂಬರ್ ಒನ್ ಪ್ರೆಸಿಡೆಂಟ್ ಎಂದು ಖ್ಯಾತರಾಗಿದ್ದಾರೆ.
ಜಾನ್ ಫಿಡ್ಜೆರಾಲ್ಡ್ ಕೆನಡಿ ಅಲಿಯಾಸ್ ಜೆಎಫ್ಕೆ. ಅಮೇರಿಕಾದ ಮಟ್ಟಿಗೆ ಇವರು ದಂತ ಕತೆ. ಮೆಜಾರಿಟಿ ಇದ್ದ ಪ್ರೊಟೆಸ್ಟಂಟ್ಗಳ ಮಧ್ಯೆ ಗೆದ್ದು ನಿಂತ ಏಕೈಕ ಕ್ಯಾಥೋಲಿಕ್ ಪ್ರೆಸಿಡೆಂಟ್ ಕೆನಡಿ. ಅಮೆರಿಕಾದ ಮೂವತ್ತೈದನೆ ಅಧ್ಯಕ್ಷರಾದ ಕೆನಡಿ, ಅಧಿಕಾರದಲ್ಲಿದ್ದಾಗಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಇವತ್ತಿಗೂ ಅವರ ಹತ್ಯೆಯ ಬಗ್ಗೆ ಅನೇಕ ಪ್ರಶ್ನೆಗಳಿದ್ದರೂ, ಅಧಿಕಾರದಲ್ಲಿದ್ದ ಎರಡು ವರ್ಷದಲ್ಲೇ ಅವರ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು. ಕೆನಡಿ ಫಾರೀನ್ ಪಾಲಿಸಿ, ಕಮ್ಯುನಿಸಂ, ನ್ಯೂಕ್ಲಿಯರ್ ಟೆಸ್ಟ್ ಬ್ಯಾನ್ ಜೊತೆಗೆ ಡೊಮೆಸ್ಟಿಕ್ ಪಾಲಿಸಿಯನ್ನ ತಂದರು. ಆರ್ಥಿಕತೆಯನ್ನ ಕಾಪಾಡಿಕೊಂಡರು. ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಟಗೊಳಿಸಿದರು. ಫೆಡರಲ್ ಅಂಡ್ ಡೆತ್ ಪೆನಾಲ್ಟಿ, ಸಿವಿಲ್ ರೈಟ್ಸ್ ಬಗ್ಗೆ ಮುತುವರ್ಜಿ ವಹಿಸಿದರು. ನಿಜಕ್ಕೂ `ಕೆನಡಿ’ ಸ್ವಚ್ಚಂದವಾದ ಸ್ಪಷ್ಟವಾದ ಆಡಳಿತ ನೀಡುತ್ತಿದ್ದಾರೆ ಅನ್ನುವಷ್ಟರಲ್ಲೇ ಅವರ ಹತ್ಯೆಯಾಗಿತ್ತು. ಅವರು ಅಮೆರಿಕನ್ನರ ಪ್ರಕಾರ ಎರಡನೇ ಅತ್ಯುತ್ತಮ ಅಧ್ಯಕ್ಷ.
ಹಾಸ್ಯ ಪ್ರವೃತ್ತಿ, ವಿಲಾಸಿ, ಮಾಡರ್ನ್- ಅದೆಷ್ಟೇ ಹೆಸರಿನಿಂದ ಕರೆದರೂ ಬಿಲ್ ಕ್ಲಿಂಟನ್ ಬಗ್ಗೆ ತೃಪ್ತಿಪಡುವುದಕ್ಕೆ ಸಾಧ್ಯವಿಲ್ಲ. ಅಮೇರಿಕಾದ ನಲವತ್ತೆರಡನೇ ಅಧ್ಯಕ್ಷರಾಗಿದ್ದ ಕ್ಲಿಂಟನ್, ಯುಎಸ್ಆರ್ ಕಾನ್ಸಸ್ನ ನಲವತ್ತು ಮತ್ತು ನಲವತ್ತೆರಡನೇ ಗವರ್ನರ್ ಆಗಿದ್ದರು. ಜನವರಿ 1993 ರಿಂದ 2001ರವರೆಗೆ ಅಮೇರಿಕಾದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಆಡಳಿತದಲ್ಲಿ ಸೊಗಸಿತ್ತು. ಪಬ್ಲಿಕ್ ಅಭಿಪ್ರಾಯಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದರು. ಇವರ ಆಡಳಿತದಲ್ಲೂ ರಕ್ಷಣಾ ವ್ಯವಸ್ಥೆಯನ್ನು ಬಲಾಢ್ಯಗೊಳಿಸಿದ್ದರು. ಕೆಲವೊಂದು ನ್ಯೂನತೆಗಳಿದ್ದರೂ ಬಿಲ್ ಕ್ಲಿಂಟನ್ ಆಡಳಿತದಲ್ಲಿ ಹಾಸು ಹೊಕ್ಕಾಗಿದ್ದ ಹಾಸ್ಯವನ್ನು ಯಾರೂ ಮರೆತಿಲ್ಲ. ಅಪ್ಪಿತಪ್ಪಿಯೂ ಕ್ಲಿಂಟನ್ ಯುದ್ಧದ ಬಗ್ಗೆ ಮಾತನಾಡಲಿಲ್ಲ. ಉಗ್ರರ ಉಪಟಳವನ್ನು ಶಾಂತಿಯಿಂದ ನಿಭಾಯಿಸಲು ಪ್ರಯತ್ನಿಸಿದರು. ಅಮೆರಿಕನ್ನರ ಪ್ರಕಾರ ಎರಡನೇ ಮಹಾಯುದ್ಧದ ತರುವಾಯ ಆ ದೇಶದ ಮೂರನೇ ಅತ್ಯುತ್ತಮ ಅಧ್ಯಕ್ಷ ಬಿಲ್ ಕ್ಲಿಂಟನ್.
ಅಮೆರಿಕಾದ ನಲವತ್ತೊಂದನೇ ಅಧ್ಯಕ್ಷರಾಗಿದ್ದ ಜಾರ್ಜ್ ಹೆಚ್ ಡಬ್ಲು ಬುಷ್, ಅಮೇರಿಕಾದ 43ನೆ ಉಪಾಧ್ಯಕ್ಷರಾಗಿದ್ದರು. ಇವರ ಅಧ್ಯಕ್ಷಗಿರಿ ಒಂದೇ ಟರ್ಮ್ ಅಂದರೇ ನಾಲಕ್ಕೇ ವರ್ಷಕ್ಕೆ ಕೊನೆಯಾಗಿತ್ತು. ಇವರು ಅಮೆರಿಕಾದ ಮೂಲಭೂತ ಸಮಸೈಗಳತ್ತ ಹೆಚ್ಚಿನ ಆಸ್ಥೆವಹಿಸಿದರು. ಎಕಾನಮಿಯನ್ನು ಬಲಿಷ್ಠಗೊಳಿಸಿದರು. ಆದರೆ ಜಾರ್ಜ್ ಹೆಚ್ ಡಬ್ಲ್ಯು ಬುಷ್ಗೆ ಯುದ್ಧದಾಹವಿತ್ತು. ಪನಾಮ, ಸೋವಿಯತ್ ಯೂನಿಯನ್, ಗಲ್ಫ್ ವಾರ್, ಸೋಮಾಲಿಯ ಸಿವಲ್ ವಾರ್ ಗಳಿಗೆಲ್ಲಾ ಮೂಗು ತೂರಿಸಿದರು. ಅಭಿವೃಧಿಯ ಜೊತೆಗೆ ಅವಾಂತರ ಮಾಡಿಕೊಂಡ ಹೆಚ್ ಡಬ್ಲ್ಯು ಬುಷ್ ಅಮೇರಿಕನ್ನರ ದೃಷ್ಟಿಯಲ್ಲಿ ನಂಬರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬಹಳ ನಿರೀಕ್ಷೆಯಿಟ್ಟುಕೊಂಡು ಚುನಾಯಿಸಲಾದ ಅಮೆರಿಕಾದ 44ನೇ ಅಧ್ಯಕ್ಷ. ನಲವತ್ತಮೂರನೆ ಅಧ್ಯಕ್ಷನಾಗಿದ್ದ ಜಾರ್ಜ್ ಬುಷ್ನ ಅತಿಯಾದ ಯುದ್ಧ ದಾಹ, ಅಮೇರಿಕಾದಲ್ಲಿ ಉಗ್ರರ ವಿಕಟಹಾಸ ಮುಂತಾದವೆಲ್ಲಾ ಡೆಮಾಕ್ರಟಿಕ್ ಅಭ್ಯರ್ಥಿ ಬರಾಕ್ ಒಬಾಮನಿಗೆ ಫಾಯಿದಾ ಆಗಿತ್ತು. 2008 ಹಾಗೂ 2012ರಲ್ಲಿ ಸತತ ಎರಡು ಬಾರಿ ಅಮೇರಿಕಾದ ಅಧ್ಯಕ್ಷರಾದರು. ಬರಾಕ್ ಒಬಾಮ ಮೇಲೆ ಅಂಥ ಆರೋಪವಿಲ್ಲದಿದ್ದರೂ ಇವರ ಆಡಳಿತದ ಸಮಯದಲ್ಲಿ ಅಮೆರಿಕಾ ಈವರೆಗಿಲ್ಲದಷ್ಟೂ ಆರ್ಥಿಕ ಬಿಕ್ಕಟ್ಟಿನಿಂದ ನರಳಿದೆ. ಜೊತೆಗ ಎರಡನೇ ಟರ್ಮ್ ನ ಒಬಾಮ ಆಡಳಿತ ಸಪ್ಪೆಯೆನಿಸಿದೆ. ಒಸಾಮ ಬಿನ್ ಲ್ಯಾಡೆನ್ನನ್ನು ಹೊಡೆದು ಹಾಕಿದ್ದು, ಸಿರಿಯಾ, ಲಿಬಿಯಾ, ಇನ್ನಿತರೆ ದೇಶಗಳ ಮೇಲೆ ಯುದ್ಧ ಮಾಡಿದ್ದು, ಇದೀಗ ಇದೀಗ ಉತ್ತರಕೊರಿಯಾ ಮೇಲೆ ಯುದ್ಧಕ್ಕೆ ಸಿದ್ದವಾಗಿರುವುದು, ಒಬಾಮ ಅಶಾಂತಿಪ್ರಿಯ ಎಂಬುದ್ದನ್ನು ಜಗಜ್ಜಾಹೀರುಗೊಳಿಸಿದೆ. ಒಬಾಮ ಅಮೆರಿಕಾದ ದಂತಕತೆಯಾಗುತ್ತಾರೆ ಅಂತ ಜಗತ್ತು ಭಾವಿಸಿತ್ತು. ಆದರೆ ಅಮೆರಿಕಾದ ಜನರು ಅವರಿಗೆ ಐದನೇ ಸ್ಥಾನ ಕೊಟ್ಟು, ಕೆಟ್ಟ ಅಧ್ಯಕ್ಷ ಅಂತ ಬಿರುದು ಕೊಟ್ಟಿದ್ದಾರೆ.
ಅಮೇರಿಕನ್ನರ ಅಭಿಪ್ರಾಯವನ್ನು ಸಂಗ್ರಹಿಸಿದ್ದ ಕ್ವಿನ್ನಿಪಿಯಾಕ್ ಯೂನಿವರ್ಸಿಟಿ, ಎರಡನೇ ಮಹಾಯುದ್ಧ ನಡೆದ ನಂತರದ ಅಧ್ಯಕ್ಷರಲ್ಲಿ ಒಟ್ಟು ಎಂಟು ಮಂದಿಗೆ ಪ್ರತ್ಯೇಕ ಸ್ಥಾನಗಳನ್ನು ಕೊಟ್ಟಿದ್ದಾರೆ, ಅವರಲ್ಲಿ ಕೆಲವರು ಅಮೇರಿಕಾದ ಆಡಳಿತದಲ್ಲಿ ಗೆದ್ದರೇ, ಕೆಲವರು ಅಮೇರಿಕನ್ನರ ಮನಸನ್ನೂ ಗೆದ್ದಿದ್ದಾರೆ. ಯು.ಎಸ್ ಚುನಾವಣೆಯ ಮೇಲೆ ಇಡೀ ಜಗತ್ತೇ ಕಣ್ಣಿಟ್ಟಿರುತ್ತೆ. ವಿಶ್ವದ ದೊಡ್ಡಣ್ಣನನ್ನು ಆಳುವವನನ್ನು ಇಡೀ ವಿಶ್ವವೇ ಹೆಮ್ಮೆಯಿಂದ ಸ್ವಾಗತಿಸುತ್ತದೆ. ಅವರ ಸ್ನೇಹಕ್ಕೆ ಕೈ ಚಾಚುತ್ತದೆ. ಯಾಕಂದ್ರೆ ಅಮೇರಿಕಾ ಅಂದ್ರೇ ಪವರ್, ಆ ಪವರ್ ಅನ್ನು ಇವತ್ತಿನವರೆಗೆ ಯಾರೂ ದೊಡ್ಡಮಟ್ಟದಲ್ಲಿ ನಾಶಮಾಡಲು ಆಗಿಲ್ಲ. ಆ ಕಾರಣಕ್ಕೆ ಅಲ್ಲಿನ ಆಡಳಿತವನ್ನು ನಿಭಾಯಿಸುವವನು, ಅಮೇರಿಕನ್ನರ ಪಾಲಿಗೆ ಅಸಲಿ ಹೀರೊ ಆಗಿರುತ್ತಾರೆ.
ಜಾರ್ಜ್ ಬುಷ್ ಅಮೇರಿಕಾದ ನಲವತ್ಮೂರನೇ ಅಧ್ಯಕ್ಷ, ನಲವತ್ತೊಂದನೇ ಅಧ್ಯಕ್ಷರಾಗಿದ್ದ ಜಾರ್ಜ್ ಹೆಚ್ ಡಬ್ಲ್ಯು ಅವರ ಸೋದರ. ಎಂಥಾ ಹಣೆಬರಹ ನೋಡಿ, ಅಣ್ಣ ಬುಷ್ ನಂತೆ ತಮ್ಮ ಬುಷ್ ಗೂ ಯುದ್ಧದ ಹಪಾಹಪಿ. ಎಷ್ಟರ ಮಟ್ಟಿಗಂದರೇ ಜಾರ್ಜ್ ಬುಷ್ ಆಡಳಿತ ವಹಿಸಿಕೊಂಡಿದ್ದು ಜನವರಿ 20, 2001ರಂದು, ಸೆಪ್ಟೆಂಬರ್ 11, 2001ರಂದು ಒಸಾಮ ಬಿನ್ ಲ್ಯಾಡೆನ್ನ ಲಷ್ಕರ್ ಎ ತೊಯ್ಬಾದ ಉಗ್ರರು ಅಮೇರಿಕಾದ ಅವಳಿ ಕಟ್ಟಡಗಳಿಗೆ ವಿಮಾನ ನುಗ್ಗಿಸಿದ್ದರು. ಸಾವಿರರು ಜನರ ಮಾರಣ ಹೋಮ ನಡೆಸಿದ್ದರು. ಇದಾದ ಮೇಲೆ ಬುಷ್ ಅಫ್ಗಾನಿಸ್ತಾನದ ಮೇಲೆ ಯುದ್ಧ ಘೋಷಿಸಿದರು. ಅಮೇರಿಕಾ ಸೈನ್ಯ ಅಫ್ಘಾನಿಸ್ತಾನದ ಮೇಲೆ ಮುರಕ್ಕೊಂಡು ಬಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಲ್ಯಾಡೆನ್ ಸುಳಿವೇ ಸಿಗದಂತೆ ಕಾಣೆಯಾಗಿದ್ದ. ಒಬಾಮ ಅವಧಿಯಲ್ಲಿ ಸತ್ತ ಎನ್ನಲಾಯಿತು. ಅಲ್ಲಿಗೇ ಬುಷ್ನ ಯುದ್ಧದಾಹ ತಣಿದಿರಲಿಲ್ಲ. 2003ರಲ್ಲಿ ಇರಾಕ್ ಮೇಲೆ ಯುದ್ಧ ಮಾಡಿ ಸದ್ದಾಂ ಹುಸೈನ್ನನ್ನು ಬಂಧಿಸಿದರು. ಆನಂತರ ಅವನನ್ನು ನೇಣು ಬಿಗಿದು ಕೊಲ್ಲಲಾಯಿತು. ಜಾರ್ಜ್ ಬುಷ್ನ ಆಡಳಿತದಲ್ಲಿ ಅಭಿವೃದ್ದಿ ಮಂತ್ರಕ್ಕಿಂತ, ಅಶಾಂತಿಯ ಮಂತ್ರವೇ ಜಾಸ್ತಿಯಾಗಿತ್ತು. ಈ ಹೊತ್ತಿಗೆ ಎರಡೆರಡು ಯುದ್ಧದಿಂದ ಬೇಸತ್ತಿದ್ದ ಅಮೆರಿಕಾದ ಜನರಿಗೆ ಮರೆಯಲಾಗದ ಏಟು ಕೊಟ್ಟಿದ್ದು ಪ್ರಕೃತಿ. ಕಟ್ರಿನಾ ಚಂಡಮಾರುತದ ದಾಳಿಗೆ ಅಮೆರಿಕಾ ತತ್ತರಿಸಿತ್ತು. ಬುಷ್ ಆಡಳಿತದಲ್ಲಿದ್ದ ಅನಾನುಕೂಲ, ಅರಾಜಕತೆಯಿಂದ ಬೆಂದಿದ್ದ ಜನರು ಬದಲಾವಣೆ ಬಯಸಿದ್ದರಲ್ಲೂ ಅರ್ಥವಿತ್ತು. ಆದರೂ ಶತ್ರುವನ್ನು ಹಿಮ್ಮಟ್ಟಿಸಿದ ಬುಷ್ ಕೆಟ್ಟ ಅಧ್ಯಕ್ಷನಾದರೂ, ಅಮೇರಿಕಾದ ಜನ ಅವರಿಗೆ 6ನೇ ಸ್ಥಾನವನ್ನು ಕೊಟ್ಟಿದ್ದಾರೆ. ಹಾಗೆಯೇ ಏಳನೇ ಸ್ಥಾನದಲ್ಲಿ ಮೂವತ್ತೇಳನೇ ಅಧ್ಯಕ್ಷ ರಿಚರ್ಡ್ ನಿಕ್ಸನ್, ಎಂಟನೇ ಸ್ಥಾನದಲ್ಲಿ ಮೂವತ್ತೊಂಬತ್ತನೇ ಅಧ್ಯಕ್ಷ ಜಿಮ್ಮಿ ಕಾರ್ಟರ್ ಇದ್ದಾರೆ.
ಇನ್ನು ಒಬಾಮ ತನ್ನ ಆಡಳಿತದಲ್ಲಿ ಒಸಾಮಾ ಬಿನ್ ಲ್ಯಾಡೆನ್ನನ್ನು ಹಣಿದರು, ಲಿಬಿಯಾದ ನರ ರಾಕ್ಷಸ ಗಡಾಫಿಯ ಹತ್ಯೆಗೆ ಸ್ಥಳಿಯ ಬಂಡುಕೋರರಿಗೆ ನೆರವಾದರು. ಒಬಾಮ ಆಡಳಿತದ ಮೊದಲರ್ಧ ನಿಜಕ್ಕೂ ಚೆನ್ನಾಗಿತ್ತು. ಆದರೆ ದ್ವಿತೀಯಾರ್ಧದಲ್ಲಿ ಅಮೇರಿಕನ್ನರ ನಿರೀಕ್ಷೆಯನ್ನು ಉಳಿಸಿಕೊಳ್ಳವಲ್ಲಿ ವಿಫಲವಾಗಿದ್ದಾರೆ. ಇದೀಗ ಅಮೆರಿಕಾದಲ್ಲಿ ಚುನಾವಣಾ ಸಮಯ. ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಜನರಿಗೆ ಡೋನಾಲ್ಡ್ ಟ್ರಂಪ್ ಗಿಂತ ಹಿಲರಿ ಕ್ಲಿಂಟನ್ ಹೆಚ್ಚು ಆಪ್ತವೆನಿಸಿಸುತ್ತಿದ್ದಾರೆ. ಯಾರೇ ಆದರೂ ಮುಂದಿನ ದಿನಗಳಲ್ಲಿ ಒಂದು ಅವಧಿಗೆ ಒಬ್ಬರೇ ಅಧ್ಯಕ್ಷ ಸಾಕೆಂಬ ತೀರ್ಮಾನಕ್ಕೆ ಅಮೆರಿಕ್ಕನ್ನರು ಬಂದಿದ್ದಾರೆ. ಯಾವುದಕ್ಕೂ ಉತ್ತರ ಹೇಳಬೇಕಿರುವುದು ಕಾಲ. ಕಾದುನೋಡಬೇಕಷ್ಟೆ.
POPULAR STORIES :
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ