ಮೂರು ಬೆಟ್ಟ ದಾಟಿ, 17 ಸಾವಿರ ಅಡಿ ಎತ್ತರ ಏರಿ ಮಕ್ಕಳ ಬಾಳಿಗೆ ಬೆಳಕಾದ ಪರ್ವತಾರೋಹಿ
ಪರ್ವತಾರೋಹಿ ಮಹಿಳೆಯ ಹೆಸರು ಸುಜಾತಾ ಸಾಹು. ಸುಜಾತಾ ತಂದೆ ವಾಯುಸೇನೆಯಲ್ಲಿ ಸೇವೆ. ಬಾಲ್ಯದಿಂದಲೂ ನಿಸರ್ಗ, ರಮ್ಯ ತಾಣಗಳಲ್ಲಿ ಸುತ್ತಾಡುವುದು, ಜೀವನವನ್ನು ಸುಂದರವಾಗಿ ಅನುಭವಿಸುವ ಮನೋಭಾವ ಇದ್ದಿದ್ದರಿಂದ ದೇಶದ ಯಾವುದೇ ಭಾಗಕ್ಕೆ ಹೋದರೂ ಬಿಂದಾಸ್ ಆಗಿ ಬದುಕುತ್ತ ಗೆಳತಿಯರ ಪಡೆಯನ್ನೇ ಕಟ್ಟಿಕೊಳ್ಳುತ್ತಿದ್ದರು. ಓದಿನಲ್ಲೂ ಜಾಣೆ. ಕಂಪ್ಯೂಟರ್ ಮತ್ತು ಗಣಿತ ಇಷ್ಟದ ಮತ್ತು ಕುತೂಹಲದ ಸಂಗತಿಗಳಾಗಿದ್ದವು.
ಕಂಪ್ಯೂಟರ್ ವಿಜ್ಞಾನದಲ್ಲೇ ಪದವಿ ಶಿಕ್ಷಣ ಪಡೆದ ಸುಜಾತಾಗೆ ಅಮೆರಿಕದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ 1991ರಲ್ಲಿ ಉದ್ಯೋಗ ಪ್ರಾಪ್ತವಾಯಿತು. 9 ವರ್ಷ ಅಮೆರಿಕದಲ್ಲೇ ಉದ್ಯೋಗ ನಿರ್ವಹಿಸಿದ ಇವರು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಭಾರತಕ್ಕೆ ಬಂದು ಬಂಧುಬಳಗ-ಸ್ನೇಹಿತರನ್ನೆಲ್ಲ ಭೇಟಿಯಾಗುತ್ತಿದ್ದರು. ಆಗೆಲ್ಲ ‘ಎಲ್ಲ ಬಿಟ್ಟು ಬಂದು ನನ್ನವರ ಮಧ್ಯೆ ಇದ್ದುಬಿಡಲೇ?’ ಎಂದು ಮನಸ್ಸು ಪ್ರಶ್ನಿಸುತ್ತಿತ್ತಾದರೂ ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಮರಳುತ್ತಿದ್ದರು. ದೆಹಲಿ ಮೂಲದ ಸಂದೀಪ್ ಸಾಹು ಅವರೊಡನೆ ಮದುವೆಯಾದ್ರು.
ಕೊನೆಗೆ ಸಾಹು, ಅವರಿಗೆ ದೆಹಲಿ ಕಾರ್ಯ ವಾಸಸ್ಥಳವಾಯಿತು. ಐಟಿ ರಂಗದಲ್ಲಿ ಕೆಲಸ ನಿರ್ವಹಿಸುವುದಕ್ಕಿಂತ ಸ್ವಂತ ಖುಷಿಗಾಗಿ ಏನಾದರೂ ಮಾಡಬೇಕು ಎಂದುಕೊಂಡು ಗುರುಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. ಆ ಕೆಲಸ ಭಾರಿ ಖುಷಿ ನೀಡಿತು. ಇನ್ನು ಪತಿ ಸಂದೀಪ್ ಸಾಹಸಿ ಚಾರಣಿಗ. ಆಗಾಗ ದೂರದ ಲಡಾಖ್ಗೆ ಹೋಗಿ ಚಾರಣ ಮಾಡುತ್ತಿದ್ದರೆ ಸುಜಾತಾ ಕೂಡ ಅವರಿಗೆ ಸಾಥ್ ನೀಡುತ್ತಿದ್ದರು. ಹೀಗೆ ಹಲವು ಬಾರಿ ಲಡಾಖ್ ಪ್ರವಾಸ ಮಾಡಿದ್ದ ಇವರಿಗೆ ಅಲ್ಲಿನ ಜನಜೀವನ, ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು ಈ ದಂಪತಿ.
ಅದು 2010ರ ಹೊತ್ತು. ಈ ಬಾರಿ ಸುಜಾತಾ ಒಬ್ಬರೇ ಲಡಾಖ್ಗೆ ಹೊರಟು ನಿಂತು, ಅಲ್ಲಿನ ದುರ್ಗಮ ಗ್ರಾಮಗಳ ಕಡೆಗೆ ಪ್ರಯಾಣ ಬೆಳೆಸಿದರು. ಹೀಗೆ ಸಾಗುವಾಗ ಅವರಿಗೆ ಎದುರಾದ ಇಬ್ಬರು ಶಿಕ್ಷಕಿಯರು ಮತ್ತು ಅವರು ಪಡುತ್ತಿದ್ದ ಪಡಿಪಾಟಲು ಕಂಡು ಮರುಗಿದರು. ಶಾಲೆಯೊಂದಕ್ಕೆ ಭೇಟಿ ನೀಡಿದರೆ ಅವರಿಗೆ ಅಚ್ಚರಿ ಕಾದಿತ್ತು. ಅಲ್ಲಿ ವಿದ್ಯುತ್ ಬಿಡಿ, ಕುಳಿತುಕೊಳ್ಳಲು ಬೆಂಚು, ಬರೆಯಲು ನೋಟ್ಪುಸ್ತಕ ಯಾವುದೂ ಇರಲಿಲ್ಲ. ಆಗ ‘ಆ ಮಕ್ಕಳಿಗೆ, ಆ ಶಾಲೆಗಳಿಗೆ ಏನಾದರೂ ಮಾಡ್ಬೇಕು ಎಂದು ನಿಶ್ಷಯಿಸಿದರು.
ಇನ್ನು ಸುಜಾತಾ ಚಿಂತನೆಗಳಿಗೆ ಬೆಂಬಲ ನೀಡಿದ ಪತಿ ಸಂದೀಪ್ ‘ಮತ್ತೊಮ್ಮೆ ಲಡಾಖ್ಗೆ ಭೇಟಿನೀಡಿ ಅಲ್ಲೇನು ಮಾಡಬಹುದು ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸೋಣ’ ಎಂದರು. ಅಂತೆಯೇ, ಮತ್ತೊಮ್ಮೆ ಅವರ ಸವಾರಿ ಲಡಾಖ್ನತ್ತ ಹೊರಟಿತ್ತು. ಈ ಬಾರಿ ಖಾಲಿ ಕೈಯಿಂದ ಅಲ್ಲ, 2500 ನೋಟ್ಪುಸ್ತಕ ಮತ್ತು ಪಠ್ಯಪುಸ್ತಕ ತೆಗೆದುಕೊಂಡು ಹೊರಟಿದ್ದರು. ಲಡಾಖ್ನ ಲಿಂಗ್ಶೆಡ್ ಎಂಬ ಗ್ರಾಮ, ಅಲ್ಲಿನ ಶಾಲೆಯನ್ನು ತಲುಪಬೇಕಿತ್ತು. ಸತತ ಮೂರು ದಿನಗಳ ಪ್ರಯಾಣದ ನಂತರ ಮೂರೂ ಬೆಟ್ಟ ಹತ್ತಿ ಗ್ರಾಮವನ್ನು ತಲುಪಿದಾಗ ಅಲ್ಲಿನ ಮಕ್ಕಳು ಪುಸ್ತಕಗಳಿಗಾಗಿ ಕಾಯುತ್ತಿದ್ದರು! ಇವರನ್ನು ನೋಡಿದೊಡನೆಯೇ ಖುಷಿಯಿಂದ ಕೇಕೆಹಾಕಿದರು!
ಆಗ ಮಕ್ಕಳ ಮುಖದಲ್ಲಿ ಅರಳಿದ ನಗೆ ಕಂಡು ಸುಜಾತಾ ಮೊದಲ ಬಾರಿ ಖುಷಿಯಿಂದ ಕಣ್ಣೀರಿಟ್ಟರಂತೆ!! ಅವರು ತಲುಪಿದ ಎತ್ತರ 17 ಸಾವಿರ ಅಡಿಗಳಾಗಿತ್ತು. ಆಗಲೇ ಮಿಂಚಂತೆ ಹೊಸಚಿಂತನೆ ಹೊಳೆಯಿತು. ಅದೇನಂದ್ರೆ ಪ್ರಾಥಮಿಕ ಶಿಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸಬೇಕು, ಅದಕ್ಕಾಗಿ ಸಂಸ್ಥೆಯೊಂದನ್ನು ಹುಟ್ಟುಹಾಕಬೇಕು ಅನ್ನೋದು. ಅದಕ್ಕೇನು ಹೆಸರಿಡುವುದು ಅಂತ ಯೋಚಿಸುತ್ತಿರುವಾಗಲೇ ಹೊಳೆದದ್ದು 17000 ಫೀಟ್ ಫೌಂಡೇಷನ್ ಅಂತ.. 2012ರಲ್ಲಿ ಹುಟ್ಟಿಕೊಂಡ ಈ ಫೌಂಡೇಷನ್ ಲಡಾಖ್ನ 300 ಶಾಲೆಗಳನ್ನು ದತ್ತು ತೆಗೆದುಕೊಂಡು, ಅವುಗಳ ಸಮಗ್ರ ವಿಕಾಸಕ್ಕೆ ಶ್ರಮಿಸುತ್ತಿದೆ.
ನಮ್ಮಿಂದ ಏನೂ ಬದಲಾವಣೆ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತರೆ ಏನೂ ಮಾಡಲಾಗದು. ಅದೇ ಸಮುದಾಯಕ್ಕಾಗಿ ಒಳಿತನ್ನು ಮಾಡುವ ಇಚ್ಛಾಶಕ್ತಿ ಇದ್ದಲ್ಲಿ 17000 ಅಡಿ ಎತ್ತರದಲ್ಲೂ ಸಾಧನೆಯ ವಿಜಯ ಪತಾಕೆ ಹಾರಿಸಬಹುದು. ಅದಕ್ಕೆ ನೈಜಸಾಕ್ಷಿ ಸುಜಾತಾ ಸಾಹು ದಂಪತಿ. ಜೀವನದಲ್ಲಿ ಎಲ್ಲಕ್ಕಿಂತ ಅಮೂಲ್ಯ ಅಕ್ಷರದ ಹಸಿವು. ಈ ಹಸಿವಿಗೆ ಆಹಾರ ನೀಡಿದರೆ ವ್ಯಷ್ಟಿ, ಸಮಷ್ಟಿ ಎರಡೂ ಸಮೃದ್ಧವಾಗುತ್ತವೆ ಅಲ್ಲವೇ?