ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡುವ 26ರ ಪಾಕಪ್ರವೀಣ
ಸಂದೇಶ ಪೂಜಾರಿ… ಹುಟ್ಟಿದ್ದು ನಮ್ಮ ಕೃಷ್ಣನಗರಿ ಉಡುಪಿ ಸಮೀಪದ ಉಪ್ಪನೂರಿನಲ್ಲಿ. 26ರ ಹರೆಯದ ಇವರು, ಮೂಲತಃ ಉಡುಪಿಯವರಾದರೂ ತಮ್ಮ 19 ವರ್ಷಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಳೆದಿದ್ದಾರೆ. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು, ಬಾಲ್ಯದಲ್ಲೇ ಅಡುಗೆಯೊಂದಿಗೆ ಭಾರೀ ನಂಟು ಬೆಳೆಸಿಕೊಂಡವರು. ಗಂಗಾವತಿಯಲ್ಲಿ ತಂದೆ ನಡೆಸುತ್ತಿದ್ದ ಹೊಟೇಲ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರಿಂದ ಅಡುಗೆ ಬೇಗನೆ ಕರಗತವಾಗಿದೆ.
ಇನ್ನು ರುಚಿ ರುಚಿಯಾಗಿ ಅಡುಗೆ ಎನ್ನುವುದು ಒಂದು ಕಲೆ. ಆದರೆ, ಗಂಗಾವತಿಯ ಸಂದೇಶ ಪೂಜಾರಿಯವರು ಅಡುಗೆಯನ್ನೇ ಒಂದು ಸಾಧನೆಯನ್ನಾಗಿ ಮಾಡಿಕೊಂಡಿದ್ದಾರೆ. ಗಂಗಾವತಿಯಲ್ಲಿ ತಂದೆ ನಡೆಸುತ್ತಿದ್ದ ಹೊಟೇಲ್ ನ್ನು 5 ವರ್ಷಗಳ ಹಿಂದೆ ಕರಾವಳಿಯ ಗೋಬಿ ಸೆಂಟರ್ ಎಂದು ಪರಿವರ್ತಿಸಿ ಪಾಕಶಾಸ್ತ್ರದಲ್ಲಿ ಹೊಸದೊಂದು ಸಾಧನೆ ಬರೆಯಲು ಮುಂದಾಗಿದ್ದಾರೆ. ಅಡುಗೆಯಲ್ಲಿ ಏಕರೂಪದ ಕೆಲಸ ಬೋರಾಗುವುದರಿಂದ ಇವರು ಒಂದು ದಿಟ್ಟ ಹೆಜ್ಜೆ ಇಟ್ಟಿದ್ಧಾರೆ.
ಕಳೆದ ಮೂರು ವರ್ಷಗಳಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುತ್ತಿರುವ ಗಂಗಾವತಿಯ ಸಂದೇಶ ಪೂಜಾರಿ ಜನರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಅಡುಗೆಯಲ್ಲಿ ವೈವಿಧ್ಯತೆ ಇರಲಿ ಅನ್ನುವ ಕಾರಣಕ್ಕಾಗಿ ಇವರು ಮಾಡುವ ಕಣ್ ಕಟ್ ಅಡುಗೆ ಗ್ರಾಹಕರನ್ನು ವಿಶೇಷವಾಗಿ ಯುವಜನರನ್ನು ಆಕರ್ಷಿಸುತ್ತಿದೆ.
ಕಣ್ಣು ಬಿಟ್ಟುಕೊಂಡು ಅಡುಗೆ ಮಾಡುವಾಗಲೇ ಎಷ್ಟೊಂದು ಸಲ ರುಚಿ ಕೈ ಕೊಡುತ್ತದೆ. ಆದರೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇವರು ಮಾಡುವ ಅಡುಗೆ ಮಾಡುವ ಕಾಯಕದ ಹಿಂದೆ, ಮತ್ತೆ ಅಡುಗೆ ಬಗ್ಗೆ ಇವರಿಗಿರುವ ಅದಮ್ಯ ಪ್ರೀತಿ, ಸ್ವಷ್ಟತೆ ಮತ್ತು ಪಕ್ವತೆಯನ್ನ ಸಾಬೀತುಪಡಿಸುತ್ತದೆ. ಅದರಲ್ಲೂ ಚೈನೀಸ್ ಖಾದ್ಯದಲ್ಲಿ ಪ್ರಾವಿಣ್ಯತೆ ಪಡೆದಿರುವ ಇವರು ಗಂಗಾವತಿಯ ಗೋಬಿ ಹುಡುಗ ಎಂದೇ ಜನಜನಿತವಾಗಿದ್ದಾರೆ.
ಇನ್ನು ಅಡುಗೆ ಮನೆ ನೋಡದ ಹೆಣ್ಣು ಮಕ್ಕಳು, ಅಡುಗೆ ಮಾಡುವುದನ್ನು ಕಲಿಯಲಿ ಎಂಬ ಉದ್ದೇಶ ನನ್ನದು ಎನ್ನುತ್ತಾರೆ ಗಂಗಾವತಿಯ ಗೋಬಿ ಹುಡುಗ ಸಂದೇಶ ಪೂಜಾರಿ. ಅಡುಗೆ ಎಂದರೆ ಮಹಿಳೆಯರಿಗೆಯೇ ಸೀಮಿತ ಎಂಬ ಭಾರತೀಯ ಪರಂಪರೆಯಲ್ಲಿ ರುಚಿಕರ ಅಡುಗೆ ಗೆ ಮಾತ್ರ ನಳಪಾಕ ಎಂದು ಪ್ರಶಂಸಿಸುತ್ತಾರೆ. ಬಾಣಭಟ್ಟನಾಗಿ ಆ ಮಹಾಭಾರತದ ಭೀಮ ಪ್ರಸಿದ್ಧಿಯಾದರೆ, ಈಗ ಗಂಗಾವತಿಯ ಈ ಗೋಬಿ ಹುಡುಗ, ಪಾಕ ಪ್ರವೀಣನಾಗುತ್ತಿದ್ದಾನೆ.
ಇವರ ಕಣ್ ಕಟ್ ಅಡುಗೆಯ ಕೌಶಲ್ಯ ಹಾಗೂ ರುಚಿ ರುಚಿಯಾದ ಅಡುಗೆಯಿಂದ ಗ್ರಾಹಕರು ಅಧಿಕವಾಗುತ್ತಿದ್ದಾರೆ. ಇವರ ಕಣ್ ಕಟ್ ಅಡುಗೆಯ ಕೌಶಲ್ಯ ಕಂಡು ಕೆಲವು ಮಾಲ್ ಗಳಲ್ಲಿ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಿದ್ದು, ಅಪಾರ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ ಲಿಮ್ಕಾ ದಾಖಲೆಯನ್ನು ಮಾಡಿದ್ದು, ಮುಂದೆ ಗಿನ್ನಿಸ್ ದಾಖಲೆ ಬರೆಯುವ ಗುರಿ ಹೊಂದಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವುದು ಈ ಹಿಂದೆ ಎಲ್ಲೂ ನಡೆದಿಲ್ಲ ಎಂದು ಹೇಳುತ್ತಾರೆ ಜನರು.
ಕಣ್ ಕಟ್ ಅಡುಗೆ ಮಾಡುವ ಹುಡುಗ ಸಂದೇಶ ಪೂಜಾರಿಯ ಕನಸುಗಳೆಲ್ಲ ಈಡೇರಲಿ, ಪಾಕಕ್ಷೇತ್ರದಲ್ಲಿ ಹೊಸದೊಂದು ಭಾಷ್ಯ ಬರೆಯಲಿ ಎನ್ನುವುದು ಎಲ್ಲರ ಹಾರೈಕೆ. ಜೊತೆಗೆ ಈ ಪಾಕಪ್ರವೀಣನ ಸಾಧನೆ ಯುವಜನರಿಗೆ ಸ್ಫೂರ್ತಿಯೇ ಸರಿ.