ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿನ ಕೊರೊನಾ ಪ್ರಕರಣಗಳ ಸಂಖ್ಯೆ ಹನ್ನೆರಡು ಲಕ್ಷ ದಾಟಿದ್ದರೆ, ಸಾವಿನ ಸಂಖ್ಯೆ ಮೂವತ್ತು ಸಾವಿರ ತಲುಪಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಇದ್ದರೂ ಸಹ ಜನರು ಕೇರ್ ಮಾಡುತ್ತಿಲ್ಲ.
ಸರ್ಕಾರ ಲಾಕ್ ಡೌನ್ ತೆಗೆದಿರೋದರಿಂದ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸೋದನ್ನೇ ಮರೆತು ಓಡಾಡುತ್ತಿದ್ದಾರೆ.
ಹೀಗಾಗಿ ಕೆಲ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾಸ್ಕ್ ಧರಿಸದೆ ಹೊರಬಂದರೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸುತ್ತಿವೆ. ಇದೀಗ ಜಾರ್ಖಂಡ್ ಸಹ ಇಂತಹದ್ದೇ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸದಿದ್ದರೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಜಾರ್ಖಂಡ್ ಸರ್ಕಾರ ಆದೇಶ ಹೊರಡಿಸಿದೆ.ಜಾರ್ಖಂಡ್‌ನಲ್ಲಿ ನಿನ್ನೆ 439 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 6,682 ಕ್ಕೆ ಏರಿದೆ. ಒಟ್ಟು 3,048 ಜನರು ಈವರೆಗೆ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.ಹೀಗಾಗಿ ಜಾರ್ಖಂಡ್ ಸರ್ಕಾರ, ಮಾಸ್ಕ್ ಧರಿಸದಿದ್ದರೆ 1 ಲಕ್ಷ ರೂಪಾಯಿ ದಂಡದ ಜೊತೆಗೆ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಜಾರ್ಖಂಡ್ ಕ್ಯಾಬಿನೆಟ್ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ (ಐಡಿಒ) 2020ನ್ನು ಹೊರಡಿಸಿದೆ. ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರು ಮತ್ತು ಮಾಸ್ಕ್ ಧರಿಸದವರು 1 ಲಕ್ಷ ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಐಡಿಒ 2020 ರಲ್ಲಿ ಜಾರ್ಖಂಡ್ ಸರ್ಕಾರ ಹೇಳಿದೆ.ಇನ್ನೂ ಕೋರೊನಾ ಕರಣಗಳಲ್ಲಿನ ಹೆಚ್ಚಳದಿಂದಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಇದನ್ನು ಅನುಸರಿಸಿ, ಈಗ ಖಾಸಗಿ ಆಸ್ಪತ್ರೆ ಮತ್ತು ಔತಣಕೂಟ ಸಭಾಂಗಣಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ವಸತಿ ಪ್ರದೇಶಗಳಲ್ಲಿ ಕೊರೊನಾ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ.
ಇನ್ನೂ ಗೋವಾ ಸರ್ಕಾರ ಸಹ ಇದೇ ರೀತಿಯ ಕಠಿಣ ನಿಯಮ ಜಾರಿಗೊಳಿಸಿತ್ತು. ಗೋವಾದಲ್ಲಿ ಜನರು ಮಾಸ್ಕ್ ಧರಿಸದೆ ಇದ್ದರೆ, ದಿನಸಿ ಸಾಮಾನುಗಳನ್ನು ಹಾಗೂ ಪೆಟ್ರೋಲ್ ನೀಡುವುದಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ರಾಜ್ಯದ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಯಾರಾದರು ಮಾಸ್ಕ್ ಹಾಕದೆ ಬಂದರೆ, ಅವರ ವಾಹನಗಳಿಗೆ ಪೆಟ್ರೋಲ್ ನೀಡದೆ ಇರಲು ತಿಳಿಸಲಾಗಿದೆ. ಅದೇ ರೀತಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಿನಸಿ ಅಂಗಡಿಗಳಲ್ಲಿ ದಿನಸಿ ಪದಾರ್ಥ ನೀಡಬಾರದು ಎಂದು ಆದೇಶಿತ್ತು.
ಅದರೊಂದಿಗೆ ಇಂದಿಗೂ ಸಹ ಸರ್ಕಾರ ‘no mask-no petrol’ (ಮಾಸ್ಕ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ) ‘no mask-no ration’ (ಮಾಸ್ಕ್ ಇಲ್ಲದಿದ್ದರೆ ದನಸಿ ಇಲ್ಲ) ಎಂದು ಅಭಿಯಾನ ಮಾಡುತ್ತಿದೆ. ಈ ಮೂಲಕ ಜನರಲ್ಲಿ ಮಾಸ್ಕ್ ಧರಿಸುವಂತೆ ಅರಿವು ಮೂಡಿಸುತ್ತಿದೆ. ಇದರೊಂದಿಗೆ ಮಾಸ್ಕ್ ಹಾಕದೆ ವಾಹನದಲ್ಲಿ ಬಂದರೆ ಪೊಲೀಸರು 1000 ರೂಪಾಯಿ ದಂಡ ತೆಗೆದುಕೊಳ್ಳುತ್ತಿದ್ದಾರೆ.