ಸೋದರ ಸಂಬಂಧ ಎಂದರೆ ಹಾಗೇ ಬಿಟ್ಟು ಬಿಡಲಾಗದ ನಂಟು.ಅದರಲ್ಲೂ ಅಕ್ಕ ತಮ್ಮಂದಿರ ನಡುವಿನ ಬಾಂಧವ್ಯ ತೀರಾ ವಿಶಿಷ್ಟ. ಹುಟ್ಟಿನಿಂದಲೂ ಜೊತೆ ಜೊತೆಗೆ ಬೆಳೆಯುವ ಅಕ್ಕತಮ್ಮದಿರು ಒಬ್ಬರ ಮೇಲೆ ಒಬ್ಬರು ಪ್ರಾಣ ಇಟ್ಟುಕೊಂಡಿರುತ್ತಾರೆ. ಅಂಥದರಲ್ಲಿ ತಮ್ಮನ ಜೀವ ಹೋಯಿತು ಅಂದರೆ ಆ ಸೋದರಿಯ ಜೀವಕ್ಕೆ ಹೇಗಾಗಬೇಡ. ಇಂತಹ ಮನಕಲುಕುವ ಘಟನೆ ನಮ್ಮ ಕರುನಾಡಿನಲ್ಲೇ ನಡೆದಿದೆ.
ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ದಿನದಿನಕ್ಕೂ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಏರುತ್ತಲೇ ಇದೆ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ನೋವಿನಿಂದ ನರಳಾಡಿ ಪ್ರಾಣಬಿಡುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗೇ ಇದೆ. ಇಂಥ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ದಾರುಣ ಘಟನೆ ನಡೆದಿದೆ.
ಹೌದು, ಚಿಕಿತ್ಸೆ ಸಿಗದೆ ಪ್ರಾಣ ತ್ಯಜಿಸಿದ ಸಹೋದರನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಇಬ್ಬರು ಸೋದರಿಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ಬಾರಿ ಮೂವರು ಒಡಹುಟ್ಟಿದವರ ಅಂತ್ಯಕ್ರಿಯೆ ನಡೆಸಬೇಕಾದ ಮನಕಲಕುವ ಘಟನೆ ಬೆಳಗಾವಿಯಲ್ಲಿ ಸಂಭವಿಸಿದೆ. ಇದರಿಂದಾಗಿ ಇಡೀ ಗ್ರಾಮವೇ ನೋವಿನಲ್ಲಿದೆ.
ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಅರವತ್ತೈದು ವರ್ಷದ ವಜೀದ್ ಜಮಾದಾರ್ ಅನಾರೋಗ್ಯದಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕ್ರೂರಿ ಕೊರೊನಾ ಹಾವಳಿಯಿಂದ ಜಮಾದಾರ್ ಅವರಿಗೆ ಸೂಕ್ತ ಚಿಕಿತ್ಸೆ ದೊರಕಲಿಲ್ಲ. ಪರಿಣಾಮ ಎರಡು ದಿನಗಳ ಕಾಲ ನೋವಿನಿಂದ ನರಳಾಡಿದ ಜಮಾದರ್
ಬುಧವಾರ ಮೃತಪಟ್ಟಿದ್ದಾರೆ.
ಇತ್ತ ತಮ್ಮನ ಸಾವಿನ ಸುದ್ದಿ ಕೇಳಿದ ಇಬ್ಬರು ಸಹೋದರಿಯರರ ಜೀವವೇ ಹೌಹಾರಿದೆ. ಸೋದರನ ಸಾವಿನ ಸುದ್ದಿ ಕೇಳಿದ ಸಹೋದರಿಯರ ಪ್ರಾಣಪಕ್ಷಿ ಹಾರಿ ಹೋಗಿದೆ. ಮೊದಲಿಗೆ ಜಮಾದರ್ ವಿಧಿವಶರಾದ ಸುದ್ದಿ ಕೇಳುತ್ತಲೇ ಹಿರಿಯ ಸಹೋದರಿ ಹುಸೇನ್ ಬಿ (68) ಸ್ಥಳದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತದ ನಂತರದಲ್ಲಿ ಅಕ್ಕ ಮತ್ತು ತಮ್ಮನ ನಿಧನದ ಸುದ್ದಿ ಕೇಳಿದ ಮತ್ತೊಬ್ಬ ಸಹೋದರಿ ಕೂಡ ಜೀವ ಬಿಟ್ಟಿದ್ದಾರೆ. ಸೋದರ ಹಾಗೂ ಸೋದರಿ ಇಬ್ಬರ ಸಾವಿನ ಸುದ್ದಿ ಕೇಳಿದ ಕಾಕತಿ ಗ್ರಾಮದಲ್ಲಿದ್ದ ಮತ್ತೊಬ್ಬ ಸಹೋದರಿ ಸಾರಾ ಸನದಿ (೬೬) ಕೂಡ ಸಹ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ವೈದ್ಯರನ್ನು ಕರೆಸಿ ಪರೀಕ್ಷೆ ಒಳಪಡಿಸಿದಾಗ ಆಕೆಯೂ ಮೃತಪಟ್ಟಿರುವುದು ತಿಳಿದು ಬಂದಿದೆ.
ಒಟ್ಟಾರೆ ಒಡ ಹುಟ್ಟಿದ ಮೂರು ಜೀವಗಳು ಸಾವಿನಲ್ಲೂ ಒಂದಾಗಿವೆ. ಸಹೋದರ, ಸಹೋದರಿಯರ ಸಾವು ಇಡೀ ಕುಟುಂಬಕ್ಕೆ ಇದೀಗ ದೊಡ್ಡ ಆಘಾತವನ್ನು ತಂದೊಡ್ಡಿದೆ. ಹಿರಿ ಜೀವಗಳ ಅಗಲಿಕೆಯಿಂದಾಗಿ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.
ಈ ಒಡಹುಟ್ಟಿದವರ ಹಠಾತ್ ಸಾವಿಗೆ ಪಂತ ಬಾಳೇಕುಂದ್ರಿ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಜೊತೆಗೆ ಮೂವರ ಅಂತ್ಯಕ್ರಿಯೆಯನ್ನು ಒಂದೇ ಕಡೆ
ಏಕಕಾಲದಲ್ಲಿ ನೆರವೇರಿಸಿದ್ದಾರೆ. ಸದ್ಯ ಮೂವರ ಸಾವಿನಿಂದಾಗಿ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.