ಅಗಲಿದ ಮಗನ ನೆನಪಲ್ಲಿ ಬಡವರ ಹಸಿವು ನೀಗಿಸುತ್ತಿರೋ ಪುಣ್ಯಾತ್ಮರು..!
ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮನ್ನು ಕುಗ್ಗಿಸುತ್ತವೆ . ನಡೆಯಬಾರದ ಘಟನೆಗಳು ನಮ್ಮ ಜೀವನದಲ್ಲಿ ನಡೆದಾಗ ನಾವು ಬದುಕೇ ಸಾಕೆಂದು ಕೂರುತ್ತೇವೆ. ಆದರೆ ಈ ದಂಪತಿ ಹಾಗಲ್ಲ… ಇವರು ದುಃಖಕ್ಕೆ ಸೆಡ್ಡು ಹೊಡೆದವರು .
ಇವರು ಪ್ರದೀಪ್ ತನ್ನಾ ಮತ್ತು ಅವರ ಪತ್ನಿ ದಮಯಂತಿ ತನ್ನಾ . ಪುತ್ರನ ನೆನಪಲ್ಲಿ ದಿನವೂ ಬಡವರ ಹೊಟ್ಟೆ ತುಂಬಿಸುತ್ತಿರುವ ದಂಪತಿ. ಬಡವರ ಪಾಲಿನ ಅನ್ನದಾತರು. ಪ್ರತಿನಿತ್ಯ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ. ಜಾತಿ, ಧರ್ಮ, ಭಾಷೆ ಮೇರೆ ಮೀರಿ ಮಾನವೀಯತೆ ನೆಲೆಗಟ್ಟಿನಲ್ಲಿ ಈ ದಂಪತಿ ಅಪರೂಪದ ಕೆಲಸ ಮಾಡುತ್ತಿದ್ದಾರೆ.
ತಮ್ಮ ಮುದ್ದು ನಿಮೇಶ್ ತನ್ನಾ ಮಗನನ್ನು ಕಳೆದುಕೊಂಡ ನಂತರ ಅವನನ್ನು ಸ್ಮರಿಸುತ್ತಾ ಆತನ ಹೆಸರಿನಲ್ಲಿ ಅನಾಥರಿಗೆ, ಹಸಿದುಬಂದವರಿಗೆ, ಬಡವರು, ವೃದ್ಧರಿಗೆ, ಟಿಫಿನ್ ಸೆಂಟರ್ ನಡೆಸುತ್ತಿರೋ ಈ ಮುಂಬೈ ದಂಪತಿ ಪ್ರತಿನಿತ್ಯ ಬಡವರಿಗೆ ಹಾಗೂ ವೃದ್ಧರಿಗೆ ಪ್ರತಿದಿನ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ಈ ದಂಪತಿ ತಮ್ಮ ಮಗನ ಹೆಸರಿನಲ್ಲಿ ಒಂದು ಟ್ರಸ್ಟ್ ಅನ್ನು ಸ್ಥಾಪಿಸಿದ್ದು ಆ ಟ್ರಸ್ಟ್ ಮೂಲಕ ತಮ್ಮ ಮಗನ ಸ್ಮರಣೆ ಮಾಡುತ್ತಿದ್ದಾರೆ.
ಇವರ ಪುತ್ರ ನಿಮೇಶ್ ತಮ್ಮ 2011ರಲ್ಲಿ ಮುಂಬೈನಲ್ಲಿ ಮೀಟಿಂಗ್ ವೊಂದಕ್ಕೆ ತೆರಳುತ್ತಿದ್ದಾಗ ಒಂದು ಸ್ಥಳೀಯ ರೈಲು ಅಪಘಾತದಲ್ಲಿ ಸ್ಥಳದಲ್ಲೇ ಮರಣ ಹೊಂದಿದ್ದರು. ತಮ್ಮ ಮಗನ ಸಾವಿನಿಂದ ತೀವ್ರ ಅಘಾತಗೊಂಡು ಪ್ರದೀಪ್ ತನ್ನಾ ದಂಪತಿ ತಮ್ಮ ಮಗನ ಹೆಸರು ಸದಾ ಕಾಲ ಚಿರಸ್ಮರಣಿಯಾಗಿರಬೇಕು ಎಂದು ಬಡವರಿಗೆ ಊಟ ಒದಗಿಸುವ ಉದ್ದೇಶದಿಂದ ದಂಪತಿ ಶ್ರೀ ನಿಮೇಶ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಉಚಿತ ದಾಸೋಹ ಮಾಡುತ್ತಿದ್ದಾರೆ.
ಆರಂಭದಲ್ಲಿ ತಮ್ಮ ಮನೆಯಲ್ಲೇ ಆಹಾರ ತಯಾರಿಸಿ ನಿತ್ಯ 30 ಮಂದಿಗೆ ಊಟ ಮಾಡುತ್ತಿದ್ದ ದಂಪತಿ ಈಗ ಒಂದು ಟಿಫಿನ್ ಸೆಂಟರ್ ಆರಂಭಿಸಿ 100 ಅನಾಥ ಕುಟುಂಬಗಳಿಗೆ ಹಾಗೂ ವೃದ್ಧರಿಗೆ ಉಚಿತ ಆಹಾರ ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಬಡ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕಗಳು ಹಾಗೂ ವೃದ್ಧರಿಗೆ ಔಷಧ ನೀಡುತ್ತಿದ್ದಾರೆ. ಸುಮಾರು 7 ಸಿಬ್ಬಂದಿ ಇಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
ಇನ್ನು ತನ್ನಾ ದಂಪತಿ ಮಗನ ಹೆಸರಿನಲ್ಲಿ ಪ್ರತಿವರ್ಷ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುತ್ತಾರೆ. ಆ ಮೂಲಕ ಮಗನ ಹೆಸರಿನಲ್ಲಿ ನಾನಾ ಪಾರಿತೋಷಕಗಳನ್ನು ಕ್ರೀಡಾಪಟುಗಳನ್ನು ನೀಡುತ್ತಾರೆ. ತಮ್ಮ ಮಗನ ವಯಸ್ಸಿನ ಮಕ್ಕಳು, ಬಡವರು, ಅಸಹಾಯಕರಿಗೆ ಕಣ್ಣಲ್ಲಿ ತಮ್ಮನ್ನು ಆಗಲಿದ ಮಗನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗಾಂತ ಈ ದಂಪತಿ ಶ್ರೀಮಂತರೇನಲ್ಲ. ಆದರೂ ಬಡವರಿಗೆ, ಹಸಿದವರಿಗೆ ದಿನವೂ ಅನ್ನ ಬಡಿಸುತ್ತಿದ್ದಾರೆ.
ಏನೇ ಹೇಳಿ, ಇದ್ದ ಒಬ್ಬ ಮಗನನ್ನು ಕಳೆದುಕೊಂಡ ನೋವಿನಲ್ಲೂ ಪ್ರದೀಪ್ ತನ್ನಾ ದಂಪತಿ, ಮಗನನ್ನು ಪ್ರತಿನಿತ್ಯ ಸ್ಮರಿಸುತ್ತಾ ಅವನ ನೆನಪಿನಲ್ಲಿ ಜನಮೆಚ್ಚುವ, ದೇವರು ಹೌದೆನ್ನುವ ಕೆಲಸವನ್ನು ಮಾಡುತ್ತಿದ್ದಾರೆ. ಇತರರಿಗೂ ಸ್ಫೂರ್ತಿಯಾಗಿದ್ದಾರೆ. ನೋಡಿ ಇಂತಹ ತಂದೆ ತಾಯಿಗಳಿಗೆ ನಮ್ಮೊದೊಂದು ಸಲಾಂ.