ಕೊರೊನಾ ಸಂಕಷ್ಟದ ಸಮಯದಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೆಲಸ ನಿರ್ವಹಿಸಿ ಕರ್ತವ್ಯಪಾಲಿಸಿದ್ದಾರೆ. ಇದೀಗ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದ ಬಳಿಕವೂ ಪ್ಲಾಸ್ಮಾ ದಾನ ಮಾಡಿ ಕರ್ತವ್ಯ ಮೆರೆದಿದ್ದಾರೆ.
ಹೌದು, ಕೊರೊನಾ ಸೋಂಕಿನಿಂದ ಗುಣಮುಖರಾದ ಯಲಹಂಕ ವಿಭಾಗದ ಸಂಚಾರಿ ಠಾಣೆಯ ಎಸಿಪಿ ಸತೀಶ್ ಪ್ಲಾಸ್ಮಾ ದಾನ ಮಾಡಿ ಮತ್ತೊಬ್ಬ ಸೋಂಕಿತರ ಚಿಕಿತ್ಸೆಗೆ ನೆರವಾಗಿದ್ದಾರೆ. ಈ ಮೂಲಕ ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಿದ ರಾಜ್ಯದ ಮೊದಲ ಅಧಿಕಾರಿ ಅನ್ನೋದು ವಿಶೇಷ.
ಆತ್ಮವಿಶ್ವಾಸವಿದ್ದರೆ ಸೋಂಕು ಏನೂ ಮಾಡಲ್ಲ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಎಸಿಪಿ ಸತೀಶ್ ಸೋಂಕಿನಿಂದ ಮುಕ್ತರಾದವರು ಪ್ಲಾಸ್ಮಾ ದಾನ ಮಾಡಬಹುದು. ಕೊರೊನಾಗೆ ಅಂಜುವ ಅಗತ್ಯವಿಲ್ಲ, ಮನಸ್ಸಿನಲ್ಲಿ ಬಲವಾದ ಆತ್ಮವಿಶ್ವಾಸವಿದ್ದರೆ ಸೋಂಕು ಏನೂ ಮಾಡಲ್ಲ. ರೋಗದಿಂದ ಗುಣಮುಖರಾಗುವುದಷ್ಟೇ ಮುಖ್ಯವಲ್ಲ. ಪ್ರಸುತ್ತ ಸಂಕಷ್ಟದ ಪರಿಸ್ಥಿಯನ್ನರಿತು ಸೋಂಕು ಮುಕ್ತರಾದವರು ಪ್ಲಾಸ್ಮಾ ದಾನ ಮಾಡುವ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು.ಕಳೆದ ಜೂನ್ 28ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಶಂಕುಸ್ಥಾಪನೆ ಸಮಾರಂಭವಿತ್ತು. ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಆಯುಕ್ತರ ಕಚೇರಿಯಲ್ಲಿ ಸಭೆ ಮುಗಿಸಿ ಮನೆಗೆ ಹೋಗುವಾಗ ಚಳಿ ಕಾಣಿಸಿಕೊಂಡಿತು. ಹೀಗಾಗಿ ಮರುದಿನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೊಳಗಾಗಿದ್ದರು. ಐದು ದಿನಗಳ ಬಳಿಕ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಶ್ರೀ ರವಿಶಂಕರ ಗುರೂಜಿ ಆಶ್ರಮದ ಕೋವಿಡ್ ಆರೈಕೆ ಕೇಂದ್ರದಲ್ಲಿ ಒಂದು ವಾರ ಚಿಕಿತ್ಸೆ ಪಡೆದು, ನಂತರ ಹೋಂ ಐಸೋಲೇಷನ್‌ನಲ್ಲಿದ್ದರು. ಸಂಪೂರ್ಣವಾಗಿ ಸೋಂಕು ಮುಕ್ತನಾದರು. ಪ್ಲಾಸ್ಮಾ ದಾನಕ್ಕೆ ವೈದ್ಯಕೀಯ ಸಚಿವರು ಮನವಿ ಮಾಡಿದ್ದ ಸಂಗತಿ ತಿಳಿದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಪ್ಲಾಸ್ಮಾ ನೀಡಿದೆ. ಇದಕ್ಕೂ ಮುನ್ನ ನನ್ನ ದೇಹದಲ್ಲಿ ಸೋಂಕು ಮಣಿಸುವ ರೋಗ ನಿರೋಧಕ ಶಕ್ತಿ ಎಂದೇ ಎಂಬುದನ್ನು ವೈದ್ಯರು ಪರೀಕ್ಷೆ ನಡೆಸಿ ಖಾತ್ರಿ ಪಡಿಸಿಕೊಂಡರು.
ಸದ್ಯ ಕೊರೊನಾಗೆ ಇನ್ನು ಔಷಧ ಪತ್ತೆಯಾಗಿಲ್ಲ. ಪ್ಲಾಸ್ಮಾವೇ ಸದ್ಯದ ಮದ್ದಾಗಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಬಹುದು. ಒಬ್ಬ ವ್ಯಕ್ತಿ ಪ್ಲಾಸ್ಮಾದಿಂದ ಐಸಿಯುನಲ್ಲಿರುವ ಇಬ್ಬರು ಸೋಂಕಿತರು ಆರೈಕೆ ಮಾಡಬಹುದು.
ಏನಿದು ಪ್ಲಾಸ್ಮಾ ಚಿಕಿತ್ಸೆ..?
ರೋಗ ಉಂಟು ಮಾಡುವ ವೈರಾಣುಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ ಇರುತ್ತವೆ.
ರೋಗದಿಂದ ಗುಣಮುಖರಾದವರ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಹೀಗೆ ಒಬ್ಬ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಬಹುದಾಗಿದೆ. ಒಬ್ಬ ರೋಗಿಗೆ ಒಂದು ಡೋಸ್ ನೀಡಬೇಕಾಗುತ್ತದೆ. ಹೀಗಾಗಿ ಒಬ್ಬ ಗುಣಮುಖನಾದ ಸೋಂಕಿತನಿಂದ ಇಬ್ಬರು ರೋಗಿಗಳಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ.
ಒಟ್ಟಾರೆ ಲಸಿಕೆ ಮತ್ತು ಔಷಧಿ ಇಲ್ಲದ ಈ ಕೊರೋನಾ ವೈರಸ್ ಗೆ ಪ್ಲಾಸ್ಮಾ ಥೆರಪಿ ತಾತ್ಕಾಲಿಕ ಸಂಜೀವಿನಿಯಾಗಿದೆ.