ಹಸಿರೇ ನಮ್ಮ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ ಅಂತನ್ನೋ ಪದಗಳನ್ನ ನಾವು ನೀವೆಲ್ಲಾ ಕೇಳಿರುತ್ತೇವೆ. ಇದು ಕೇವಲ ಘೋಷವಾಕ್ಯಗಳಾಗದೇ ನಮ್ಮ ಧ್ಯೇಯವಾಗಬೇಕು. ನಮ್ಮ ಸುತ್ತಲಿನ ವಾತವರಣವನ್ನು ಹಸಿರಾಗಿಟ್ಟು ಕೊಳ್ಳಬೇಕಾದುದು ನಮ್ಮ ಕರ್ತವ್ಯ.
ಆದರೆ, ನಾವು ನೀವೆಲ್ಲ ಇತ್ತೀಚಿಗೆ ಈ ಮಾತನ್ನೇ ಮರೆತುಹೋಗಿದ್ದೇವೆ. ಬಹುತೇಕ ಮಂದಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಜೊತೆಗೆ ಇರೋ ಕಾಡುಗಳನ್ನು ನಾಶ ಮಾಡುತ್ತಾ ಬರುತ್ತಿದ್ದೇವೆ. ಹೀಗಾಗಿ
ಸರ್ಕಾರವು ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಪ್ರಾರಂಭಿಸಿದೆ.
ಮುಂಗಾರು ಮಳೆಯ ಹಂಗಾಮಿನ ಸಂದರ್ಭದಲ್ಲಿ ರೈತರು ತಮ್ಮ ಜಮೀನುಗಳಲ್ಲಿ, ಜಮೀನಿನ ಸುತ್ತಲು ವಿವಿಧ ರೀತಿಯ ಸಸಿಗಳನ್ನು ನೆಡಲು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ.
ಮಾನ್ವಿ ತಾಲೂಕಿನಲ್ಲಿ ಕಪಗಲ್, ನೀರಮಾನ್ವಿ, ಹರವಿ, ಭೋಗಾವತಿ, ಪೋತ್ನಾಳ, ಖರಾಬದಿನ್ನಿ, ಮುದ್ದಂಗುಡ್ಡಿ ಸೇರಿದಂತೆ ವಿವಿಧ ಗ್ರಾಮಗಳ 200 ಹೆಕ್ಟೇರ್ ಪ್ರದೇಶದಲ್ಲಿ ಈ ಪ್ರೋತ್ಸಾಹ ಯೋಜನೆಯ ಅಡಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಈಗಾಗಲೇ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
ಪಟ್ಟಣದಲ್ಲಿರುವ ಪ್ರಾದೇಶಿಕ ಅರಣ್ಯ ವಲಯ ಕಚೇರಿಯಿಂದ 2020-21ನೇ ಸಾಲಿನಲ್ಲಿ 100ಕ್ಕೂ ಅಧಿಕ ರೈತರಿಗೆ ಸುಮಾರು 40ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗಿದೆ. ಅರಣ್ಯ ಇಲಾಖೆವತಿಯಿಂದ ₹ 1ರಿಂದ ₹ 3ರವರೆಗೆ ರಿಯಾಯಿತಿ ದರದಲ್ಲಿ ರೈತರಿಗೆ ಸಸಿಗಳನ್ನು ವಿತರಿಸಲಾಗಿದೆ. ತಾಲೂಕಿನಲ್ಲಿ ಗೋವಿನದೊಡ್ಡಿ-ಚಿಮ್ಲಾಪುರ ಸಸ್ಯಕ್ಷೇತ್ರ ಹಾಗೂ ಕವಿತಾಳ ಸಸ್ಯಕ್ಷೇತ್ರಗಳಿಂದ ರೈತರಿಗೆ ಸಸಿಗಳನ್ನು ಪೂರೈಸಲಾಗುತ್ತಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ರೈತರು ಪಟ್ಟಣದ ಪ್ರಾದೇಶಿಕ ಅರಣ್ಯವಲಯ ಕಚೇರಿಗೆ ಅರ್ಜಿ ಸಲ್ಲಿಸಿ ವಿವಿಧ ಜಾತಿಯ ಸಸಿಗಳನ್ನು ಪಡೆಯುತ್ತಿದ್ದಾರೆ. ಮಹಾಗನಿ, ಹೆಬ್ಬೇವು, ಸಾಗುವಾನಿ, ಶ್ರೀಗಂಧ, ರಕ್ತಚಂದನ, ಹುಣಸೆ, ಬೇವು, ಹೊಂಗೆ, ಪೇರಲ, ಕರಿಬೇವು, ನಿಂಬೆ, ಮಾವು, ಹಲಸು ಹಾಗೂ ವಿವಿಧ ಜಾತಿಯ ಸಸಿಗಳನ್ನು ರೈತರಿಗೆ ನೀಡಲಾಗಿದೆ. ಮುಂದಿನ ಮಳೆಗಾಲದ ನಂತರವೂ ನಾಟಿ ಮಾಡಲು ಬಯಸುವ ಸಸಿಗಳಿಗಾಗಿ ಅರ್ಜಿ ಸಲ್ಲಿಸಲು ರೈತರಿಗೆ ಅವಕಾಶವನ್ನ ಕೂಡ ಕಲ್ಪಿಸಲಾಗಿದೆ.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ 2017-18ನೇ ಸಾಲಿನಿಂದ ಜಾರಿಯಲ್ಲಿದ್ದರೂ ಕೂಡ ಈ ಯೋಜನೆ ಕುರಿತು ಪ್ರಸಕ್ತ ಸಾಲಿನಲ್ಲಿ ರೈತರಲ್ಲಿ ಹೆಚ್ಚಿನ ಆಸಕ್ತಿ ಉಂಟಾಗಿದೆ. ಸರ್ಕಾರ ರೈತರಿಗೆ ನೀಡುವ ಪ್ರೋತ್ಸಾಹ ಧನದ ಪರಿಷ್ಕರಣೆಯೂ ಕಾರಣವಾಗಿದೆ. 2017-18ನೇ ಸಾಲಿನಿಂದ ಮೂರು ವರ್ಷಗಳ ಅವಧಿಗೆ ಉಳಿಯುವ ಪ್ರತಿ ಸಸಿಗೆ ₹ 100 ಪ್ರೋತ್ಸಾಹ ನೀಡಲಾಗುತ್ತಿತ್ತು.
2020-21ನೇ ಸಾಲಿನಿಂದ ಪ್ರತಿ ಸಸಿಗೆ ₹125 ಪ್ರೋತ್ಸಾಹ ಧನ ಹೆಚ್ಚಿಸಲಾಗಿದ್ದು, 100 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ. ಇದರಿಂದ ಇನ್ನು ಹೆಚ್ಚು ಹೆಚ್ಚು ರೈತರು ಸಸಿ ನೆಡುವಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಸೌಲಭ್ಯ ಪಡೆದು ಸಸಿಗಳನ್ನ ನೆಟ್ಟರೇ ನಮ್ಮ ಪರಿಸರ ಸುದ್ದ ಗಾಳಿ ಹಾಗೂ ನೈಸರ್ಗಿಕ ಮಳೆ ಬೆಳೆ ಸಮೃದ್ಧವಾಗಿರಲು ಅನುಮಾನವೇ ಇಲ್ಲ. ವರ್ಷದಿಂದ ವರ್ಷಕ್ಕೆ ಇನ್ನು ಹೆಚ್ಚು ಹೆಚ್ಚು ರೈತರು ಈ ಯೋಜನೆಯ ಉಪಯೋಗವನ್ನ ಪಡೆದುಕೊಳ್ಳೋದ್ರಿಂದ ಸಾಕಷ್ಟು ಉಪಯುಕ್ತತೆಗಳಿವೆ.






