ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ನಮ್ಮ ಕೆಲಸದ ಬಗ್ಗೆ ಶ್ರದ್ಧೆ, ಗೌರವವಿರಬೇಕು. ಆಗಿದ್ದಾಗಲೇ ಯಶಸ್ಸು ನಮ್ಮದಾಗೋದು.. ಇದಕ್ಕೆ ಸಾಕ್ಷಿ ಮಹಾರಾಷ್ಟ್ರ ಐಎಎಸ್ ಅಧಿಕಾರಿಯ ಜೀವನ..
ಪರಿಸ್ಥಿತಿ ಹೇಗೆ ಇರಲಿ ಅದೆಲ್ಲವನ್ನೂ ಕಡೆಗಣಿಸಿ ಇದ್ದುದರಲ್ಲೇ ಹೊಸ ಮಾರ್ಗವನ್ನು ಹುಡುಕಿ ಮುಂದೆ ಸಾಗಿ ಇನ್ನೊಬ್ಬರಿಗೆ ದಾರಿದೀಪವಾಗಬೇಕು. ಈ ಮಾತನ್ನು ಅರ್ಥೈಸಿಕೊಂಡವರು ಐಎಎಸ್ ಅಧಿಕಾರಿ ರಮೇಶ್ ಘೋಲಪ್.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಮಹಾಗಾಂವ್ ಊರಿನಲ್ಲಿ ಜನ್ಮಿಸಿದ ರಮೇಶ್ ಘೋಲಪ್ ಬಡತನದಲ್ಲಿ ಬೆಂದು ಕಷ್ಟವನ್ನು ಸಹಿಸಿ ಮೇಲೆ ಬಂದು ಇಂದು IAS ಆಫೀಸರ್ ಆಗಿ, ಉನ್ನತ ಮಟ್ಟಕ್ಕೇರಿದ್ದಾರೆ. ಇವರ ಸಾಧನೆಯ ಹಿಂದಿರೋ ದೊಡ್ಡ ಶಕ್ತಿ ಅಂದರೆ ತಾಯಿ ದೇವರು.
ತಾಯಿ ಕುಟುಂಬ ನಿರ್ವಹಣೆಗಾಗಿ ಊರೂರು ಸುತ್ತಿ ಬಳೆಗಳನ್ನು ಮಾರುತ್ತಿದ್ದರು. ಹೀಗಾಗಿ ಜೀವನವೆಂದರೆ ಏನು? ಕಷ್ಟವೆಂದರೆ ಏನು? ಇವೆಲ್ಲವನ್ನೂ ರಮೇಶ್ ಚಿಕ್ಕಂದಿನಿಂದಲೇ ತಿಳಿದುಕೊಂಡು ಬಂದರು.
10 ವರ್ಷದವರಿಂದಲೇ ತಾಯಿಯ ಕೆಲಸದಲ್ಲಿ ಸಹಾಯ ಮಾಡುತ್ತ ತಾಯಿಯ ಜೊತೆಗೆ ಕಷ್ಟಗಳನ್ನು ಅನುಭವಿಸಿದವರು ಕೂಡ.
ಬಳೆಗಳನ್ನು ಮಾರಿ ಬಂದ ಹಣ ಸ್ವಲ್ಪ ಉಳಿತಾಯವಾಗಿದೆ ಎನ್ನುವಷ್ಟರಲ್ಲಿ ತಂದೆಯ ಕುಡಿತದ ಚಟಕ್ಕೆ ಎಲ್ಲವೂ ಬರಿದಾಗುತ್ತಿತ್ತು. ಹೀಗಾಗಿ ಪ್ರತಿನಿತ್ಯವೂ ದುಡಿಮೆ ಸಾಗಬೇಕಿತ್ತು. ಹೀಗಾಗಿ ರಮೇಶ್ ಅವರು ತಾಯಿಯ ಕಷ್ಟಕ್ಕೆ ಜೊತೆಯಾಗಿ ನಿಂತರು.
ಹತ್ತನೇ ತರಗತಿ ಪರೀಕ್ಷೆ ಬರೆಯುವ ವೇಳೆಗೆ ರಮೇಶ್ ತಂದೆಯನ್ನು ಕಳೆದುಕೊಂಡರು. ಆದರೂ ಎದೆಗುಂದದೆ ಪರೀಕ್ಷೆ ಬರೆದು, 88.50 ಪ್ರತಿಶತ ಅಂಕಗಳನ್ನು ಪಡೆದು ತಾಯಿಗೆ ಖುಷಿ ತಂದುಕೊಟ್ಟರು. ಮುಂದಿನ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಆದರೆ ಮುಂದಿನ ದಾರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ವ್ಯಾಸಂಗಕ್ಕೆ ಬೇಕಾಗಿದ್ದ ಹಣ ಹೊಂದಿಸಲು ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ.
ಅತ್ತ ಅವರ ತಾಯಿ ಸರ್ಕಾರದ ಯೋಜನೆಯಡಿಯಲ್ಲಿ 18 ಸಾವಿರ ರೂಪಾಯಿಗಳನ್ನು ಸಾಲ ಮಾಡಿ ಹೊಂದಿಸಿದಳು. ಇತ್ತ ಮಗ ದಿನಬೆಳಿಗ್ಗೆ ದಾರಿಯಲ್ಲಿ ವಿವಿಧ ರೀತಿಯ ಚೀಟಿಗಳನ್ನು ಹಂಚಿ ಮತ್ತು ಗೋಡೆಯ ಮೇಲೆ ಪೇಂಟಿಂಗ್ ಮಾಡುತ್ತಿದ್ದರು. ಜೊತೆಗೆ ಯಾವುದೇ ಕೆಲಸ ಸಿಕ್ಕರು ಮಾಡಿ, ಹಣಗಳಿಸುತ್ತಿದ್ದರು. ಪ್ರತಿದಿನ ದುಡಿಯುತ್ತಿದ್ದವರು
ರಾತ್ರಿ ಮಾತ್ರ IAS ಸ್ಟಡಿಗೆ ಮೀಸಲಿಡುತ್ತಿದ್ದರು.
ಮೊದಮೊದಲು ರಮೇಶ್ ಅವರು ಇದರಲ್ಲಿ ಯಶಸ್ಸು ಕಾಣಲಿಲ್ಲ, ನಂತರ ಮಾತ್ರ 2011 ರಲ್ಲಿ ಜಿದ್ದು ಬಿಡದೆ ಯಶಸ್ಸಿನ ಬೆನ್ನು ಹತ್ತಿಯೇ ಬಿಟ್ಟರು. ಐಎಎಸ್ ಅಧಿಕಾರಿಯಾಗುವ ಮೂಲಕ ತಮ್ಮ ತಾಯಿಯ ಕನಸನ್ನು ಪೂರೈಸಿದರು.
ಇನ್ನೂ ಮಗ ಐಎಎಸ್ ಅಧಿಕಾರಿಯಾದರು ತಾಯಿ ಮಾತ್ರ ಸರಳತೆಯ ಬಿಟ್ಟಿಲ್ಲ. ಈಗಲೂ ಪ್ರತಿನಿತ್ಯದ ಬಳೆ ಮಾರುವ ಕೆಲಸವನ್ನು ಮಾಡುತ್ತಾರೆ. ನನ್ನ ಮಗ ದೊಡ್ಡ ಅಧಿಕಾರಿಯೆಂಬ ಹುಂಬವಿಲ್ಲದೇ ಮನೆ ಮನೆ ಅಲೆದಾಡಿ ಬಳೆ ವ್ಯಾಪಾರ ಮಾಡುತ್ತಿದ್ದಾರೆ.
ಈ ಬಗ್ಗೆ ರಮೇಶ್ ಘೋಲಪ್ ಅವರಿಗೂ ಯಾವುದೇ ಮುಜುಗರವಿಲ್ಲ. ಅವರೇ ಸ್ವತಃ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ. ‘ನಾನು IAS ಆಗಿ 9 ವರ್ಷಗಳೇ ಆಗಿವೆ, ತಾಯಿ ಇನ್ನುವರೆಗೆ ಬಳೆಗಳನ್ನು ಮಾರುತ್ತಾಳೆ ಯಾಕೆ ಅಂತ ಕೇಳಿದರೆ ಹೇಳ್ತಾಳೆ, ಈ ಬಳೆಗಳಿಂದ ಬಂದ ಹಣದಿಂದಲೇ ನೀನು IAS ಆಗಿರುವೆ ಮಗ, ಅಂತ’. ಎಲ್ಲಿಯವರೆಗೆ ನನ್ನ ಕೈ ಕಾಲುಗಳು ಗಟ್ಟಿಯಾಗಿರುತ್ತವೆ ಅಲ್ಲಿಯವರೆಗೆ ನಾನು ಈ ಕೆಲಸ ಬಿಡುವುದಿಲ್ಲ, ಸಂಕಟ ಸಮಯದಲ್ಲಿ ಯಾರು ನಮ್ಮ ಕೈ ಹಿಡಿದಿರುತ್ತಾರೆ ಅವರನ್ನು ಯಾವತ್ತೂ ಸ್ಮರಿಸುತ್ತಲೇ ಇರಬೇಕು ಅಂತ ಬರೆದುಕೊಂಡಿದ್ದರು. ತನ್ನ ಮಗ ಅತ್ತ ದೀನರ ದುರ್ಬಲರ ಸಂಕಷ್ಟಗಳ ಪರಿಹರಿಸುತ್ತಿದ್ದರೇ, ಅತ್ತ ಅವರ ತಾಯಿ ಸರಳತೆಯ ಜೀವನ ಸಾಗಿಸುತ್ತಿದ್ದಾರೆ.