ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮೊದಲ ಸಿನಿಮಾ ಸ್ಪರ್ಷ. ಈ ಸಿನಿಮಾ ಅವರಿಗೆ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತಾದರೂ, ಅದೇ ಸಮಯದಲ್ಲಿ ನಡೆದ ರಾಜ್‌ಕುಮಾರ್ ಅಪಹರಣದಿಂದಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಳ್ಳಲಿಲ್ಲ. ಸ್ಪರ್ಷ ಸಿನಿಮಾ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಸುದೀಪ್ ನಟನೆ ಬಗ್ಗೆ ಸಹ ಮೆಚ್ಚುಗೆ ವ್ಯಕ್ತವಾಗಿದ್ದವು. ಆದರೆ ಸ್ಪರ್ಷ ಸಿನಿಮಾ ಅಂದುಕೊಂಡ ಮಟ್ಟಿಗೆ ಓಡಲಿಲ್ಲ. ಅದಕ್ಕೆ ದುರಾದೃಷ್ಟವೊಂದೇ ಕಾರಣವಾಗಿತ್ತು. ಇಂತಹ ಸಮಯದಲ್ಲಿ ಸುದೀಪ್‌ಗೆ ಮಾಸ್ ಹೀರೋ ಲುಕ್ ಜೊತೆಗೆ ಸುದೀಪ್ ಎಲ್ಲ ರೀತಿಯ ಪಾತ್ರಗಳನ್ನೂ ಸಹ ನಿರ್ವಹಿಸಬಲ್ಲ ನಟ ಎಂದು ಚಿತ್ರರಂಗಕ್ಕೆ ತೋರಿಸಿಕೊಟ್ಟ ಸಿನಿಮಾ ಹುಚ್ಚ.
ಆ ಸಿನಿಮಾದ ಕ್ರೇಜ್ ಈಗಲೂ ಚಾಲ್ತಿಯಲ್ಲಿದೆ. ಆ ಸಿನಿಮಾದ ಮೂಲಕವೇ ಸುದೀಪ್ ಹೆಸರಿನ ಮುಂದೆ ‘ಕಿಚ್ಚ’ ಎಂಬ ಉಪನಾಮ ಸೇರಿಕೊಂಡಿದ್ದು. ಸುದೀಪ್ ಸಿನಿಮಾ ಜೀವನವನ್ನೇ ಬದಲಾಯಿಸಿದ ಹುಚ್ಚ ಸಿನಿಮಾದ ನಾಯಕನ ಪಾತ್ರಕ್ಕೆ ಸುದೀಪ್ ಮೊದಲ ಆಯ್ಕೆ ಆಗಿರಲಿಲ್ಲವೆಂದರೆ ನೀವು ನಂಬಲೇಬೇಕು. ಮೂವರು ಹೀರೋಗಳನ್ನು ದಾಟಿ ಆ ಸಿನಿಮಾ ಸುದೀಪ್ ಕೈಗೆ ಬಂತು.
ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರು ತಮಿಳಿನ ಸೇತು ಸಿನಿಮಾದ ಹಕ್ಕುಗಳನ್ನು ಖರೀದಿಸಿದ್ದರು. ತಾವೇ ನಾಯಕರಾಗಿ ನಟಿಸಲು ಸಹ ನಿರ್ಧರಿಸಿ ತಲೆ ಬೋಡು ಹೊಡೆಸಿ ಫೋಟೋ ಶೂಟ್ ಸಹ ಮಾಡಿಬಿಟ್ಟಿದ್ದರು. ಆದರೆ ಅವರಿಗೆ ಆಪ್ತರಾಗಿದ್ದ ನಿರ್ಮಾಪಕ ರೆಹಮಾನ್, ಹಕ್ಕುಗಳನ್ನು ಖರೀದಿಸಿದರು.
ಹಕ್ಕು ಖರೀದಿಸಿದ ರೆಹಮಾನ್, ಮೊದಲಿಗೆ ಭೇಟಿ ಕೊಟ್ಟಿದ್ದು ಶಿವರಾಜ್ ಕುಮಾರ್ ಮನೆಗೆ. ತಮಿಳು ಸಿನಿಮಾವನ್ನು ನೋಡಿದ ಗೀತಾ ಶಿವರಾಜ್ ಕುಮಾರ್. ನಮ್ಮವರ ಮೇಲೆ ನಿಮಗೆ ಸಿಟ್ಟೇ ಎಂದು ಬೈದರಂತೆ ನಿರ್ಮಾಪಕ ರೆಹಮಾನ್‌ಗೆ. ಅರ್ಧ ಸಿನಿಮಾ ಆದಮೇಲೆ ಶಿವಣ್ಣ ಗುಂಡು ಹೊಡೆಸಿಕೊಂಡು ಹುಚ್ಚನಂತಾದರೆ ಅಭಿಮಾನಿಗಳು ಸುಮ್ಮನಿರ್ತಾರಾ ಎಂದು ಸಿನಿಮಾವನ್ನು ನಿರಾಕರಿಸಿದರಂತೆ ಗೀತಾ ಶಿವರಾಜ್‌ಕುಮಾರ್.
ಶಿವಣ್ಣನ ಭೇಟಿಯ ನಂತರ ನಿರ್ಮಾಪಕ ರೆಹಮಾನ್ ಹೋಗಿದ್ದು ಉಪೇಂದ್ರ ಅವರ ಬಳಿ. ಹೈದರಾಬಾದ್‌ನಲ್ಲಿದ್ದ ಉಪೇಂದ್ರ ಸೇತು ರೀಮೇಕ್ ಎಂದ ಕೂಡಲೇ ಸಿನಿಮಾ ಮಾಡಲು ಒಪ್ಪಿದರಂತೆ, ಆದರೆ ಹುಚ್ಚ ಟೈಟಲ್ ಬದಲಾಯಿಸಬೇಕು ಎಂಬ ಷರತ್ತು ಹಾಕಿದರಂತೆ. ಇದಕ್ಕೆ ಒಪ್ಪದ ರೆಹಮಾನ್ ಅಲ್ಲಿಂದಲೂ ವಾಪಸ್ ಬಂದು, ಸಿನಿಮಾ ಮಾಡುವುದೇ ಬೇಡವೆಂದು ಸುಮ್ಮನಾಗಿಬಿಟ್ಟಿದ್ದರಂತೆ.
ಆ ವೇಳೆಗೆ ರಾಜ್‌ಕುಮಾರ್ ಅಪಹರಣದ ಸಂದಂರ್ಭ ಸಿನಿಮಾ ನಟ-ನಿರ್ಮಾಪಕರೆಲ್ಲರೂ ಪ್ರತಿಭಟನೆ ಮಾಡುವಾಗ ಸುದೀಪ್ ಅವರ ತಂದೆ ಸಿಕ್ಕಾಗ, ನಿಮ್ಮ ಮಗನನ್ನು ಹಾಕಿಕೊಂಡು ಸಿನಿಮಾ ಮಾಡುತ್ತೇನೆ ಎಂದರಂತೆ ರೆಹಮಾನ್. ಸ್ಪರ್ಷ ಸಿನಿಮಾ ಮೆಚ್ಚಿಕೊಂಡಿದ್ದರಂತೆ ರೆಹಮಾನ್.
ಇನ್ನು ಎಸ್.ಮಹೇಂದರ್ ಹುಚ್ಚ ಸಿನಿಮಾ ನಿರ್ದೇಶಿಸಬೇಕೆಂದು ಅಡ್ವಾನ್ಸ್ ಸಹ ಕೊಟ್ಟಿದ್ದರಂತೆ ನಿರ್ಮಾಪಕ ರೆಹಮಾನ್. ಆದರೆ ಸುದೀಪ್ ಒತ್ತಾಯದ ಮೇರೆಗೆ ಓಂ ಪ್ರಕಾಶ್ ರಾವ್ ಅವರಿಗೆ ನಿರ್ದೇಶನದ ಜವಾಬ್ದಾರಿ ನೀಡಲಾಯಿತು. ತುಂಬಾ ಮಾತುಕಥೆಯ ನಂತರವೇ ಓಂ ಪ್ರಕಾಶ್ ರಾವ್‌ಗೆ ನಿರ್ದೇಶನ ಮಾಡುವ ಅವಕಾಶ ಕೊಡಲಾಯಿತಂತೆ. ಸಿನಿಮಾದ ಎಲ್ಲಾ ನಟ, ನಟಿಯರನ್ನೂ ನಿರ್ಮಾಪಕರೇ ಆಯ್ಕೆ ಮಾಡಿದ್ದರಂತೆ. ಹಲವಾರು ಅಡೆ-ತಡೆಗಳ ನಡುವೆ ಚಿತ್ರೀಕರಣ ಪ್ರಾರಂಭವಾದ ಹುಚ್ಚ ಸಿನಿಮಾ ಖಂಡಿತ ಫ್ಲಾಪ್ ಆಗುತ್ತದೆ ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರಂತೆ. ಆದರೆ ಎಲ್ಲರ ನಿರೀಕ್ಷೆ ಹುಸಿ ಮಾಡಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು.. ಸುದೀಪ್ ಎಂಬ ಹೊಸ ಸೂಪರ್ ಸ್ಟಾರ್ ಕನ್ನಡಕ್ಕೆ ಸಿಕ್ಕಿಬಿಟ್ಟರು. ಅಲ್ಲಿಂದ ಅಭಿನಯ ಚಕ್ರವರ್ತಿಯ ಇಮೇಜ್ ಸ್ಯಾಂಡಲ್‌ವುಡ್ ಅಷ್ಟೇ ಅಲ್ದೆ ಪರಭಾಷೆಯಲ್ಲೂ ಸದ್ದು ಮಾಡುವಂತಾಯಿತು.