ಆಹಾರ ಸೇವನೆ ಬಳಿಕ ತಾಂಬೂಲ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಅನ್ನೋದು ನಮ್ಮ ಹಿರಿಯರ ಮಾತು. ಕೆಲವರು ಇನ್ನೂ ಸಹ ಊಟದ ನಂತರ ಎಲೆ ಅಡಿಕೆ ಸೇವನೆ ಇಟ್ಟುಕೊಂಡಿದ್ದಾರೆ. ಇದು ಜೀರ್ಣಕ್ರಿಯೆಗೆ ಸಹಕಾರಿ.
ಇದೀಗ ಎಲೆ ಅಡಿಕೆ ಸೇವನೆ ಜೊತೆಗೆ ಸೋಂಪು ಕಾಳು ಬಳಕೆ ಹೆಚ್ಚಾಗುತ್ತಿದೆ. ಇದನ್ನು ದಿನನಿತ್ಯ ತಿನ್ನುವುದರಿಂದ ಸೇವಿಸುವ ಆಹಾರ ಜೀರ್ಣವಾಗುವುದರ ಜೊತೆಗೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಾಗೆಯೇ ಇನ್ನೂ ಅನೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಸೋಂಪು.
ಸರಿಯಾಗಿ ಮೂತ್ರ ವಿಸರ್ಜನೆ ಆಗದಿದ್ದಾಗ ಸೋಂಪಿನ ಕಾಳನ್ನು ರುಬ್ಬಿ ಹೊಟ್ಟೆಯ ಮೇಲೆ ಲೇಪಿಸುವುದರಿಂದ ಮೂತ್ರ ಕಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
ಋತು ಸಮಯದಲ್ಲಿ ಹೊಟ್ಟೆ ನೋವು ಇದ್ದಾಗ ಸೋಂಪು ಕಾಳನ್ನು ಐದಾರು ಬಾರಿ ತಿನ್ನುವುದರಿಂದ ಹೊಟ್ಟೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಸೋಂಪಿನ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಮುಟ್ಟಿನ ನೋವು ಕಡಿಮೆಯಾಗುವುದರ ಜೊತೆಗೆ ಮೂತ್ರ ವಿಸರ್ಜನೆ ಯು ಚೆನ್ನಾಗಿ ಆಗುತ್ತದೆ.
ತಲೆಯಲ್ಲಿ ಹೊಟ್ಟು ಮತ್ತು ಹೇನಿನ ಸಮಸ್ಯೆಗೂ ಸೋಂಪು ಕಾಳು ಉತ್ತಮ ಮದ್ದು. ಕೊಬ್ಬರಿ ಎಣ್ಣೆಗೆ ಸೋಂಪು ಕಾಳನ್ನು ಬೆರೆಸಿ ಬಿಸಿ ಮಾಡಿ ಎಣ್ಣೆಯನ್ನು ಲೇಪಿಸುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ ಮತ್ತು ಹೇನಿನ ಸಮಸ್ಯೆಯು ದೂರವಾಗುತ್ತದೆ.
ಸೋಂಪಿನ ಕಾಳನ್ನು ಪ್ರತಿದಿನ ತಿನ್ನುವುದರಿಂದ ಅಲರ್ಜಿ ದಮ್ಮು ದೂರವಾಗುವುದು ಜೊತೆಗೆ ಮೆದುಳನ್ನು ಚುರುಕುಗೊಳಿಸುತ್ತದೆ.ಸೋಂಪು ಕಾಳಿನ ನಿರಂತರ ಸೇವನೆಯಿಂದ ರಕ್ತದಲ್ಲಿನ ಅಧಿಕ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಇರುವ ಕೆಟ್ಟ ಅಂಶವನ್ನು ಹೊರಹಾಕುತ್ತದೆ.
ಬಾಣಂತಿಯರು ಹೆಚ್ಚಾಗಿ ಸೋಂಪಿನ ಕಾಳನ್ನು ತಿನ್ನುವುದರಿಂದ ಹಾಲು ವೃದ್ಧಿಯಾಗುತ್ತದೆ. ಬಾಣಂತಿಯರಿಗೆ ಎಲೆ ಅಡಿಕೆ ಜೊತೆಗೆ ಸೋಂಪನ್ನು ಕೊಡುತ್ತಾರೆ. ಹಾಲಿನಲ್ಲಿ ಸೋಂಪಿನ ಕಷಾಯವನ್ನು ಬೆರೆಸಿ ಮಕ್ಕಳಿಗೆ ಕುಡಿಸಿದರೆ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಅಜೀರ್ಣ ಸಮಸ್ಯೆಯೂ ದೂರವಾಗುತ್ತದೆ.
ಈ ಸೋಂಪು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭ ಮಾತ್ರವಲ್ಲ. ಸೌಂದರ್ಯ ವರ್ಧನೆಗೂ ಸಹ ಸಹಕಾರಿ. ಸೋಂಪು ಜೀರ್ಣಕ್ರೀಯೆ ಸರಾಗವಾಗಿಸುವುದರ ಜತೆಗೆ ತ್ವಚೆಯನ್ನು ಅಂದವಾಗಿಸುತ್ತದೆ.
ಜೀರಿಗೆಯನ್ನು ಹೋಲುವ ಸೋಂಪಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳಿವೆ. ಇದರಿಂದ ತ್ವಚೆಯ ಸೌಂದರ್ಯ ವೃದ್ಧಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದರಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಸಮಸ್ಯೆ ದೂರವಾಗುತ್ತದೆ.
ಸೋಂಪು ಕಾಳನ್ನು ನಯವಾಗಿ ಪುಡಿ ಮಾಡಿ ಸ್ವಲ್ಪ ತಣ್ಣೀರು ಸೇರಿಸಿ ಮುಖ ತೊಳೆಯುವುದರಿಂದ ಕಣ್ಣಿನ ಕೆಳಭಾಗದಲ್ಲಿ ಊದಿಕೊಂಡಿದ್ದರೆ ಅದು ಸರಿಯಾಗುತ್ತದೆ.
ಹದಿಹರೆಯದಲ್ಲಿ ಮೂಡುವ ಮೊಡವೆಗಳಿಗೆ ಇದು ರಾಮಬಾಣ. ಇದನ್ನು ಪುಡಿ ಮಾಡಿ ಮೊಸರು ಹಾಗೂ ಜೇನುತುಪ್ಪ ಬೆರೆಸಿ ಹಚ್ಚಿ. ಒಣಗಿದ ಬಳಿಕ ತೊಳೆಯುವುದರಿಂದ ತ್ವಚೆ ತಂಪಾಗುತ್ತದೆ ಹಾಗು ಕ್ರಮೇಣ ಮೊಡವೆಗಳು ಮಾಯವಾಗುತ್ತವೆ.
ಒರಟಾದ ತ್ವಚೆಯನ್ನು ಮೃದುವಾಗಿಸುವ ಗುಣ ಇದಕ್ಕಿದೆ. ಸತ್ತ ಜೀವಕೋಶಗಳನ್ನು ತೊಲಗಿಸುತ್ತದೆ. ಸೋಂಪನ್ನು ನೀರಿನಲ್ಲಿ ಬೆರೆಸಿ ರುಬ್ಬಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ಬಳಿಕ ತೊಳೆದರೆ ಮುಖ ಹೊಳಪು ಪಡೆಯುತ್ತದೆ.