ತಾಜ್ ಮಹಲ್ ‌ಪ್ರತಿಕೃತಿಗಳ ಬಗ್ಗೆ ನಿಮಗೆ ಗೊತ್ತಾ..

Date:

ಪ್ರೀತಿಯ ದ್ಯೋತಕ, ಪ್ರೇಮಿಗಳ ಪಾಲಿಗೆ ಸ್ಮಾರಕ, ಒಮ್ಮೆಯಾದರೂ ನೋಡಲೇಬೇಕೆಂಬ ಅದ್ಭುತ. ಆಗ್ರಾದ ಯುಮುನೆಯ ತಟದಲ್ಲಿ ಶತಮಾನಗಳ ಇತಿಹಾಸ ಹೇಳುತ್ತಿರುವ ಭವ್ಯ ಮಹಲ್ ತಾಜ್ ಮಹಲ್. ಈ ಅದ್ಭುತವನ್ನೂ ಎಷ್ಟು ನೋಡಿದರೂ ಕಡಿಮೆ‌. ಇದರ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ. ಜಗತ್ತಿನಲ್ಲಿ ಇಂಥ ಮೇರುಕೃತಿಯನ್ನು ಹೋಲಬಲ್ಲ ಮತ್ತೊಂದು‌ ಕಟ್ಟಡವಿಲ್ಲ. ಆದರೆ ಹೊರಮೇಲ್ಮೈನಲ್ಲಿ ತಾಜ್ ಹಾಗೇ ಕಾಣಬಲ್ಲ ಕಟ್ಟಡಗಳು ನಮ್ಮಲ್ಲಿ ಇವೆ.

ತಾಜ್ ಮಹಲ್ ತರಹ ಇರದಿದ್ದರೂ, ಸ್ವಲ್ಪ ಮಟ್ಟಿಗೆ ಅದನ್ನೇ ಹೋಲುವ ಕೆಲವು ಸ್ಮಾರಕಗಳಂತೂ ನಮ್ಮ ದೇಶದಲ್ಲಿವೆ. ಇವು ಸಹ ಆಕರ್ಷಕವಾಗಿದ್ದೂ ತಾಜ್ ಮಹಲ್ ಸೌಂದರ್ಯ ಸವಿಯಲು ಅವಕಾಶ ಸಿಗದಿದ್ದರೆ, ಇವುಗಳ ಬಳಿ ಹೋಗಿ ಒಂದು ಸಣ್ಣ ಕ್ಲಿಕ್ ತೆಗೆದುಕೊಳ್ಳಬಹುದು.

ಕೋಟಾದ ಸೆವೆನ್ ವಂಡರ್ಸ್ ಪಾರ್ಕ್

ರಾಜಸ್ಥಾನದಲ್ಲಿರುವ ಕೋಟಾದ ಸೆವೆನ್ ವಂಡರ್ಸ್ ಪಾರ್ಕ್ ವಿಶ್ವದ ಆ ಎಲ್ಲಾ ಏಳು ಅದ್ಭುತಗಳನ್ನು ಒಳಗೊಂಡಿದೆ. ತಾಜ್ ಮಹಲ್, ಗ್ರೇಟ್ ಪಿರಮಿಡ್, ಐಫೆಲ್ ಟವರ್, ಲೀನಿಂಗ್ ಟವರ್, ಕ್ರೈಸ್ಟ್ ದಿ ರಿಡೀಮರ್ ಆಫ್ ಬ್ರೆಜಿಲ್, ಕೊಲೊಸಿಯಮ್ ಮತ್ತು ಸ್ಟ್ಯಾಚ್ಯೂ ಆಫ್ ಲಿಬರ್ಟಿಯನ್ನು ನೋಡಬಹುದು. ಈ ಪಾರ್ಕ್ ನಿರ್ಮಿಸಲು 20 ಕೋಟಿ ಖರ್ಚಾಗಿದ್ದು,150 ಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಶ್ರಮಿಸಿದ್ದಾರೆ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಪ್ರಪಂಚದಾದ್ಯಂತ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಚಿಕಣಿಗಳನ್ನು ಕಿಶೋರ್ ಸಾಗರ್ ಸರೋವರದ ದಂಡೆಯ ಮೇಲೆ ನಿರ್ಮಿಸಲಾಗಿದೆ.

ಈ ಸುಂದರವಾದ ಉದ್ಯಾನವನ ನೋಡಲು ಸ್ನೇಹಿತರು ಮತ್ತು ಕುಟುಂಬದವರ ಜೊತೆ ಜನರು ಆಗಮಿಸುತ್ತಾರೆ. ಉದ್ಯಾನವನದಲ್ಲಿ ಕ್ಯಾಮೆರಾಗಳನ್ನು ಅನುಮತಿಸಲಾಗಿದ್ದು, ಸಂತೋಷದ ಕ್ಷಣಗಳನ್ನು ಸೆರೆಹಿಡಿಯಬಹುದು.

​ಬುಲಂದ್‌ಶಹರ್ ನಗರದ ಮಿನಿ ತಾಜ್ ಮಹಲ್

ತಾಜ್ ಮಹಲ್ ಅನ್ನು 1632 ರಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ನೆಚ್ಚಿನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ಕಟ್ಟಿದ. ವಾಸ್ತುಶಿಲ್ಪಿಗಳಾದ ಅಬ್ದುಲ್-ಕರೀಮ್ ಮಾಮೂರ್ ಖಾನ್, ಮಕ್ರಮಾತ್ ಖಾನ್ ಮತ್ತು ಉಸ್ತಾದ್ ಅಹ್ಮದ್ ಲಾಹೌರಿ ಅವರ ಮೇಲ್ವಿಚಾರಣೆಯಲ್ಲಿ ತಾಜ್ ಮಹಲ್ ಅನ್ನು ನಿರ್ಮಿಸಲಾಯಿತು. 20,000 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ತಾಜ್ ಮಹಲ್ ನಿರ್ಮಾಣಕ್ಕೆ 21 ವರ್ಷಗಳು ಬೇಕಾಯಿತು. ತನ್ನ ಮೃತ ಪತ್ನಿಗೋಸ್ಕರ ತಾಜ್ ಮಹಲ್ ನಿರ್ಮಿಸಲು ಷಹಜಹಾನ್ ಮಾತ್ರವಲ್ಲ, ಉತ್ತರ ಪ್ರದೇಶದ ಬುಲಂದ್‌ಶಹರ್ ನಗರದ ನಿವೃತ್ತ ಪೋಸ್ಟ್ ಮಾಸ್ಟರ್ ಕೂಡ ತನ್ನ ಹೆಂಡತಿಯನ್ನು ಅದೇ ರೀತಿ ಪ್ರೀತಿಸುತ್ತಾರೆ. ಫೈಜುಲ್ ಹಸನ್ ಖಾದ್ರಿ ಅವರು ತಮ್ಮ ಜೀವಿತಾವಧಿಯಲ್ಲಿ ಉಳಿಸಿದ್ದನ್ನು ತಮ್ಮ ಪ್ರೀತಿಯ ಸಂಗಾತಿಯ ನೆನಪಿಗಾಗಿ ತಾಜ್ ಮಹಲ್ ಮಾದರಿ ನಿರ್ಮಿಸಲು ಖರ್ಚು ಮಾಡಿದರು. ಈ ಕಾರಣಕ್ಕಾಗಿ ಈ ಸ್ಮಾರಕವು – ಮಿನಿ ತಾಜ್ ಮಹಲ್ ಎಂಬ ಅಡ್ಡಹೆಸರನ್ನು ಪಡೆದಿದೆ.

​ಲಕ್ನೋದ ಶಹಜಾದಿ ಕಾ ಮಕ್ಬರಾ

ಶಹಜಾದಿ ಕಾ ಮಕ್ಬರಾ ಅಥವಾ ಚೋಟಾ ಇಮಾಂಬರಾ ಜನಪ್ರಿಯ ಸ್ಮಾರಕವಾಗಿದೆ. ಇದು ಸಹ ತಾಜ್ ಮಹಲ್ ತರಹವೇ ಕಾಣುತ್ತದೆ. ಸಮಾಧಿಯ ಒಳಗೆ ಅವಧ್‌ನ ಮೂರನೆಯ ಚಕ್ರವರ್ತಿ ರಾಜ ಮೊಹಮ್ಮದ್ ಅಲಿ ಶಾ ಬಹದ್ದೂರ್ ಅವರ ಪುತ್ರಿ ರಾಜಕುಮಾರಿ ಜಿನತ್ ಆಸಿಯಾ ಅವರ ಸಮಾಧಿ ಅವಶೇಷಗಳಿವೆ. ಚೋಟಾ ಇಮಾಂಬರಾ ಭಾರತದ ಉತ್ತರ ಪ್ರದೇಶದ ಹಳೆಯ ನಗರ ಲಕ್ನೋದಲ್ಲಿನ ಅತ್ಯಂತ ಸುಂದರವಾದ ಮತ್ತು ಆಕರ್ಷಕ ಕಟ್ಟಡಗಳಲ್ಲಿ ಒಂದಾಗಿದೆ. ಈ ಭವ್ಯವಾದ ಸ್ಮಾರಕವು ಬಾರಾ ಇಮಾಂಬಾರಾದ ಪಶ್ಚಿಮದಲ್ಲಿದೆ. ಆರಂಭದಲ್ಲಿ ಇದು ಶಿಯಾ ಮುಸ್ಲಿಮರ ಸಭಾಂಗಣವಾಗಿತ್ತು. ಇದನ್ನು 1838 ರಲ್ಲಿ ಅವಧ್‌ನ ಮೂರನೆಯ ನವಾಬನಾಗಿದ್ದ ಮುಹಮ್ಮದ್ ಅಲಿ ಷಾ ನಿರ್ಮಿಸಿದ. ವಿಶೇಷ ಹಬ್ಬಗಳ ಸಮಯದಲ್ಲಿ, ವಿಶೇಷವಾಗಿ ಮೊಹರಂ ಸಮಯದಲ್ಲಿ ಇಮಾಂಬರಾವನ್ನು ಅಲಂಕರಿಸಲಾಗುತ್ತದೆ. 19 ನೇ ಶತಮಾನದ ಈ ಕಟ್ಟಡವನ್ನು ಯುರೋಪಿಯನ್ ಪ್ರವಾಸಿಗರು ಮತ್ತು ಬರಹಗಾರರು ‘ಪ್ಯಾಲೇಸ್ ಆಫ್ ಲೈಟ್ಸ್’ ಎಂದೂ ಕರೆಯುತ್ತಾರೆ. ಸ್ಮಾರಕದ ಗೋಡೆಗಳ ಮೇಲೆ ಇಸ್ಲಾಮಿಕ್ ಕ್ಯಾಲಿಗ್ರಫಿಯಲ್ಲಿ ಬರೆಯಲ್ಪಟ್ಟ ಕುರಾನ್ ಪದ್ಯಗಳಿವೆ. ಸ್ಮಾರಕದ ಒಳಾಂಗಣಗಳನ್ನು ಸಹ ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ.

​ಔರಂಗಾಬಾದ್‌ನ ಬೀಬಿ ಕಾ ಮಕ್ಬಾರಾ

ತಾಜ್‌ಮಹಲ್‌ ಹೋಲಿಕೆಯನ್ನೇ ಹೊಂದಿರುವ ‘ಬೀಬಿ ಕಾ ಮಕ್ಬಾರಾ’ ಮೊಘಲ್ ಚಕ್ರವರ್ತಿ ಔರಂಗಜೇಬನ ಪತ್ನಿ ರಬಿಯಾ- ಉಲ್ – ದೌರಾನಿ ಅಲಿಯಾಸ್ ದಿಲ್ರಾಸ್ ಬಾನು ಬೇಗಂ ಅವರ ಸುಂದರವಾದ ಸಮಾಧಿಯಾಗಿದೆ.‌ ಔರಂಗಾಬಾದ್‌ನ ಬೀಬಿ ಕಾ ಮಕ್ಬರಾವನ್ನು ತಾಯಿಯ ನೆನಪಿಗಾಗಿ ಔರಂಗಜೇಬನ ಮಗ ಪ್ರಿನ್ಸ್ ಅಜಮ್ ಖಾನ್ ನಿರ್ಮಿಸಿದ್ದಾನೆ. ಐತಿಹಾಸಿಕ ದಾಖಲೆಗಳ ಪ್ರಕಾರ, ದಿಲ್ರಾಸ್ ಬಾನು ಬೇಗಂ ಔರಂಗಜೇಬನ ಮೊದಲ ಹೆಂಡತಿ. ತಾಜ್‌ಮಹಲ್‌ನ ಮುಖ್ಯ ವಾಸ್ತುಶಿಲ್ಪಿ ಉಸ್ತಾದ್ ಅಹ್ಮದ್ ಲಹೌರಿಯವರ ಪುತ್ರ ಅಟಾ-ಉಲ್ಲಾ ಬೀಬಿ ಕಾ ಮಕ್ಬರಾವನ್ನು ನಿರ್ಮಿಸಿದ. ಆ ಕಾರಣಕ್ಕಾಗಿ ಈ ಸ್ಮಾರಕವು ಪ್ರಸಿದ್ಧ ತಾಜ್ ಮಹಲ್ ಅನ್ನು ಹೋಲುತ್ತದೆ. ಇದನ್ನು ಡೆಕ್ಕನ್ ನ ತಾಜ್ ಎಂದೂ ಕರೆಯಲಾಗುತ್ತದೆ.

​ಬೆಂಗಳೂರಿನ ತಾಜ್‌ಮಹಲ್‌

ಬೆಂಗಳೂರಿನಲ್ಲಿಯೂ ತಾಜ್‌ಮಹಲ್‌ನ ಪ್ರತಿಕೃತಿ ಇದೆ. 2015 ರಲ್ಲಿ ಈ ರಚನೆಯನ್ನು ಚೆನ್ನೈ ಮೂಲದ ಮಲೇಷಿಯಾದ ಕಲಾವಿದ ಶೇಖರ್ ಮತ್ತು ಇತರರು ನಿರ್ಮಿಸಿದರು. 40 ಅಡಿ ಎತ್ತರ ಮತ್ತು 70 x 70 ಅಡಿ ಅಗಲವನ್ನು ಹೊಂದಿರುವ ಇದು ತಾಜ್‌ಮಹಲ್‌ ಹೋಲುತ್ತದೆ. ನೋಡಲು ಅತ್ಯದ್ಭುತವಾಗಿದೆ. ಬೆಂಗಳೂರಿನಲ್ಲಿರುವ ಮೂಲ ಬಿಳಿ ಅಮೃತಶಿಲೆಯ ರಚನೆಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಕೃತಿ ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಯ ಬಳಿಯಿದೆ. ಶೇಖರ್ ಈ ಹಿಂದೆ ಕೆಂಪು ಕೋಟೆ ಮತ್ತು ಶ್ವೇತಭವನದ ಪ್ರತಿಕೃತಿಗಳನ್ನು ರಚಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...