ಎಲ್ಲರಿಗೂ ತಮ್ಮ ಸೌಂದರ್ಯ ಕಾಯ್ದುಕೊಳ್ಳುವುದೇ ದೊಡ್ಡ ಕೆಲಸ. ಮೊಗದ ಮೇಲೆ ಸಣ್ಣ ಮೊಡವೆಯಾದರೂ ಆಗೋ ಟೆನ್ಶನ್ ಅಷ್ಟಿಷ್ಟಲ್ಲ. ಹೀಗಾಗಿ ನಾವು ನಮ್ಮ ಸೌಂದರ್ಯವರ್ಧನೆಗೆ ಅನೇಕ ಮದ್ದುಗಳನ್ನು ಮಾಡುತ್ತೇವೆ. ಅದರಲ್ಲೂ ಹೆಚ್ಚಾಗಿ ಎಲ್ಲರೂ ಯಾವುದೇ ಅಡ್ಡ ಪರಿಣಾಮ ಆಗದೆ ಉತ್ತಮವಾಗಿ ಸೌಂದರ್ಯವನ್ನು ಕಾಪಾಡುವುದು ಹೇಗೆ ಅನ್ನೋದನ್ನೇ ನೋಡುತ್ತಾರೆ. ನೀವು ಸಹ ಯಾವುದೇ ಅಡ್ಡಪರಿಣಾಮವಿಲ್ಲದೇ ಸೌಂದರ್ಯ ರಕ್ಷಿಸಿಕೊಳ್ಳಲು ತರಹೇವಾರಿ ಪ್ಯಾಕ್ ಬಳಸಿ ಫೇಲ್ ಆಗಿದ್ದರೆ, ಒಂದು ಬಾರಿ ಎಳನೀರನ್ನು ತಪ್ಪದೇ ಟ್ರೈ ಮಾಡಿ. ಇದರಿಂದಾಗುವ ಪ್ರಯೋಜನ ಅಷ್ಟಿಷ್ಟಲ್ಲ.
ಎಳನೀರು ನಿತ್ಯ ಸೇವನೆಯಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಜೊತೆಗೆ ಸೌಂದರ್ಯವೃದ್ಧಿಸುವಲ್ಲಿ ಎಳನೀರಿನ ಪಾತ್ರ ಹೆಚ್ಚಿದೆ.
ಸ್ಕಿನ್ ಕೇರ್ ಗೆ ಒಳ್ಳೆ ಔಷಧಿ
ಪ್ರತಿದಿನವೂ ಎಳ ನೀರು ಕುಡಿಯುವುದರಿಂದ ಚರ್ಮವು ಸ್ವಚ್ಛವಾಗಿರುತ್ತದೆ. ಮೊಡವೆ, ಬ್ಲೆಮಿಶ್ ಸೇರಿದಂತೆ ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಹೊಳೆಯುವಂತೆ ಮಾಡುವ ಶಕ್ತಿ ಈ ಎಳನೀರಿಗಿದೆ.ಇದನ್ನು ಕುಡಿಯುವುದು ಮಾತ್ರವಲ್ಲ ಮುಖಕ್ಕೆ ಹಚ್ಚಿಕೊಂಡರೂ ಅದು ಮಾಯೆಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ.
ಎಳನೀರು ನೈಸರ್ಗಿಕ ಹಾಗೂ ಅತ್ಯುತ್ತಮವಾದ ತೇವಕಾರಕವಾಗಿದೆ. ಈ ಗುಣ ಮೊಡವೆಗಳನ್ನು ದೂರವಿಡುತ್ತದೆ. ಎಳನೀರಿನಲ್ಲಿರುವ ಸೈಟೋಕಿನಿನ್ ಎಂಬ ಪೋಷಕಾಂಶಕ್ಕೆ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣವಿದ್ದು, ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸಿ ವೃದ್ದಾಪ್ಯವನ್ನು ಮುಂದೂಡುತ್ತದೆ. ಅಲ್ಲದೇ ಎಕ್ಸಿಮಾ ಎಂಬ ಚರ್ಮರೋಗಕ್ಕೆ ಅತ್ಯುತ್ತಮ ಔಷಧಿಯೂ ಹೌದು.
ತೂಕ ಇಳಿಕೆ ಮಾಡಲು ಸಹಕಾರಿ
ಈ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವಿಲ್ಲ. ಅದೇನೆಂದರೆ ಎಳನೀರು ಸೇವನೆ ಮಾಡುತ್ತಾ ಬಂದರೆ ತೂಕ ಸುಲಭವಾಗಿ ಇಳಿಸಬಹುದು ಅಲ್ಲದೇ ಫಿಟ್ ಆ್ಯಂಡ್ ಸ್ಲಿಮ್ ಆಗಿರಬಹುದು.ತೂಕ ಕಳೆದುಕೊಳ್ಳಲು ಇದು ಆರೋಗ್ಯಯುತ ವಿಧಾನ ಕೂಡ ಹೌದು.
ಹೇರ್ ಕಂಡೀಶನರ್ ಎಳನೀರು
ಹತ್ತು ಹಲವು ಲಾಭಗಳ ಜೊತೆಗೆ ಎಳನೀರು ಕೂದಲಿಗೆ ಕೂಡ ಅತ್ಯಂತ ಉಪಯುಕ್ತ. ಎಳನೀರು ಕುಡಿದರೆ ಮತ್ತು ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕೂದಲ ಕಂಡೀಶನರ್‌ನಂತೆ ಇದು ಕೆಲಸ ಮಾಡುತ್ತದೆ. ಜೊತೆಗೆ ಕೂದಲು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ.
ಗರ್ಭಿಣಿ ಮಹಿಳೆಯರಿಗೂ ಉತ್ತಮ
ವೈದ್ಯರು ಗರ್ಭಿಣಿ ಮಹಿಳೆಯರಿಗೆ ಹೆಚ್ಚಾಗಿ ಎಳನೀರು ಸೇವನೆ ಮಾಡಲು ತಿಳಿಸುತ್ತಾರೆ. ಯಾಕೆಂದರೆ ಇದರಿಂದ ಎದೆ ಉರಿ, ಹಾರ್ಟ್ ಬರ್ನ್ ಮತ್ತು ನಿಧಾನವಾದ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ.
ರಾತ್ರಿಯ ಹ್ಯಾಂಗೋವರ್ ಪರಾರಿ
ಕಳೆದ ರಾತ್ರಿ ಒಂದರೆಡು ಪೆಗ್ ಹೆಚ್ಚಿಗೆ ಮದ್ಯಪಾನ ಮಾಡಿ ಬೆಳಗ್ಗೆ ತಲೆ ಹಿಡಿದುಕೊಂಡು ಕುಳಿತುಕೊಳ್ಳುವವರಿಗೆ ಎಳೆ ನೀರು ದಿವ್ಯೌಷಧ. ಇಂತಹವರು ಬೆಳಗ್ಗೆ ಎದ್ದು ಎಳನೀರು ಕುಡಿದರೆ ಹ್ಯಾಂಗೋವರ್ ಮಟಾ ಮಾಯ. ಕುಡಿತದಿಂದ ದೇಹ ಕಳೆದುಕೊಂಡ ಎಲೆಕ್ಟ್ರೋಲೈಟ್‌ಗಳನ್ನು ಇದು ಭರ್ತಿ ಮಾಡುವಲ್ಲಿ ನೆರವಾಗುತ್ತದೆ.
ಸ್ನಾಯು ಸೆಳೆತ ನಿವಾರಣೆ
ಮಾಂಸ ಖಂಡ, ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಯಿಂದಲೂ ಎಳನೀರು ನಿಮ್ಮನ್ನು ದೂರ ಇಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಂ ಮಾಂಸ ಖಂಡಗಳನ್ನು ಶಕ್ತಿಯುತಗೊಳಿಸುತ್ತದೆ.