ಈ ಪ್ರೀತಿ ಪ್ರೇಮ ಎಂಬ ಥಿಯೇಟರ್ನಲ್ಲಿ ಚೆನ್ನಾಗಿ ಕಾಣುವ ಮಾಟಗಾತಿ, ನಿಜ ಜೀವನದಲ್ಲಿ ಹೆಚ್ಚಾಗಿ ಫೇಲ್ಯೂರ್ ಆಗಿದ್ದೇ ಹೆಚ್ಚು. ಅಂಥದ್ದೇ ಒಂದು ಘಟನೆ ತಮಿಳು ನಾಡಿನಲ್ಲಿ 2013ರಲ್ಲಿ ನಡೆದುಹೋಗಿತ್ತು. ಒಂದು ಹುಡುಗಿಯ ಪ್ರೇಮ ಪಾಶಕ್ಕೆ ಸಿಲುಕಿದ ಹುಡುಗ ಏನಾದ ಗೊತ್ತಾ..?
ಇಳವರಸನ್, ತಮಿಳುನಾಡಿನ ಚೆನ್ನೈನಲ್ಲಿ ವಾಸಿಸುತ್ತಿದ್ದ ದಲಿತ ಯುವಕ. ಅದೂ ಇದೂ ಅಂತ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ. ಆದರೆ ದಿವ್ಯ ಎಂಬ ಬಿಳಿ ಚರ್ಮದ ಹಾಗೂ ಎರಡು ವರ್ಷ ದೊಡ್ಡವಳ ಪ್ರೇಮ ಪಾಶಕ್ಕೆ ಸಿಲುಕಿದ್ದ. ಅವಳೂ ಕೂಡಾ ಇಳವರಸನ್ ಪ್ರೀತಿಗೆ ಫಿದಾ ಆಗಿದ್ದಳು.
ಕದ್ದು ಮುಚ್ಚಿ ಸಿನಿಮಾ ಥಿಯೇಟರ್, ದೊಡ್ಡ ಹೋಟೆಲ್ ಗಳನ್ನು ಕಂಡಿದ್ದರು. ಆದರೆ, ಈ ವಿಷಯ ದಿವ್ಯಾಳ ಅಪ್ಪ ನಾಗರಾಜನ್ ಗೆ ತಿಳಿದು ದೊಡ್ಡ ರಂಪವೇ ಆಗಿ ಹೋಗಿತ್ತು. ಆದರೂ ಧೃತಿಗೆಡದ ಪ್ರೇಮಿಗಳು ಓಡಿ ಹೋಗಿ ಮದುವೆಯನ್ನೂ ಆದರು. ಆದರೆ ಸಮಾಜ ಒಪ್ಪಬೇಕಲ್ಲ. ಅಲ್ಲಿಯೂ ಜಾತಿ ಅಡ್ಡ ಬಂದಿತ್ತು. ಒಬ್ಬ ದಲಿತ ಮೇಲು ಜಾತಿಯ ಹುಡುಗಿಯನ್ನು ಮದುವೆಯಾಗುವುದು ಅಂದರೆ ಏನು ಎಂದು ಮಾತನಾಡಿಕೊಳ್ಳತೊಡಗಿತು. ಆ ಮಾತುಗಳನ್ನು ಕೇಳಿ ನೊಂದಿದ್ದ ದಿವ್ಯಾಳ ತಂದೆ ನಾಗರಾಜನ್ ಆತ್ಮಹತ್ಯೆಗೆ ಶರಣಾಗಿದ್ದ. ಅಲ್ಲಿಗೆ ಇಳವರಸನ್-ದಿವ್ಯಳ ಪ್ರೀತಿ ಮೊದಲ ಬಲಿ ಪಡೆದಿತ್ತು.
ಇಷ್ಟಕ್ಕೂ ನಾಗರಾಜನ್ ಸಾಯುವ ಮುನ್ನ ಒಂದು ಫಿಟಿಂಗ್ ಇಟ್ಟು ಹೋಗಿದ್ದ. ಅದೇನೆಂದರೆ ಮದ್ರಾಸ್ ಹೈಕೋರ್ಟ್ ನಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದ. ಅದು ಕಡೆಯಾದರೆ ಇನ್ನೊಂದು ಕಡೆ ಎರಡೂ ಗುಂಪುಗಳ ಮಧ್ಯೆ ಸಂಘರ್ಷ ಜೋರಾಗಿ ನಡೆದಿತ್ತು. ಅದೇ ವೇಳೆ ದಿವ್ಯಾಳ ಕುಟುಂಬಸ್ಥರು ಚೆನ್ನೈ ಸಮೀಪದ ಮರಕ್ಕಾನಮ್ ದಲಿತರ 200ಕ್ಕೂ ಹೆಚ್ಚು ಗುಡಿಸಲುಗಳಿಗೆ ಬೆಂಕಿಯಿಟ್ಟರು. ಆಗ ಸಾವಿರಾರು ಜನರು ಬೀದಿಗೆ ಬಂದರು. ಇವರ ಪ್ರೀತಿಗೆ ಮೊದಲೇ ಬೆಂಕಿ ಬೀಳಬಾರದಿತ್ತೆ ಎಂದು ಗೋಗರೆದರು. ಆದರೆ ಏನು ಮಾಡುವುದು, ಕಾಲ ಅದಾಗಲೇ ಮಿಂಚಿ ಹೋಗಿತ್ತು.
ಇತ್ತ ಜಾತಿ ಸಂಘರ್ಷ ಮತ್ತು ಹೈಕೋರ್ಟ್ ವಿಚಾರಣೆ ಮುಗಿದಿತ್ತು. ತನ್ನ ಪತ್ನಿ ಮನೆಗೆ ಬರುತ್ತಾಳೆ ಎಂದು ಇಳವರಸನ್ ಕಾಯುತ್ತಲೇ ಇದ್ದ. ಆದರೆ ಅವನ ನಿರೀಕ್ಷೆ ಹುಸಿಯಾಗಿತ್ತು. ದಿವ್ಯಾಳ ಮನಸ್ಸು ಬದಲಾಗಿ ಹೋಗಿತ್ತು. ದಿವ್ಯ ಇಳವರಸನ್ ಮನೆಗೆ ಬರಲೇ ಇಲ್ಲ. ಬದಲಿಗೆ ತವರು ಮನೆಯತ್ತ ಹೆಜ್ಜೆ ಹಾಕಿದ್ದಳು. ಹಾಗೆ ಹೋಗುವಾಗ, ಮಾಧ್ಯಮಗಳ ಮುಂದೆ ಒಂದು ಹೇಳಿಕೆ ನೀಡಿದ್ದಳು. ಅದರಲ್ಲಿ `ನಾನು ಇನ್ನು ನಿನ್ನನ್ನು ನೋಡಲು ಬರುವುದಿಲ್ಲ. ನಿನ್ನೊಂದಿಗೆ ಸಂಸಾರ ನಡೆಸುವುದೂ ಇಲ್ಲ’ ಎಂದು ಬಡಬಡಾಯಿಸಿದ್ದಳು. ಅಷ್ಟೇ ಸಾಕಿತ್ತು ಈ ಹುಚ್ಚು ಪ್ರೇಮಿಗೆ, ನೇರವಾಗಿ ಹೋದವನೇ ವೇಗವಾಗಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟಿದ್ದ. ಅಲ್ಲಿಗೆ ಅವರಿಬ್ಬರ ಪ್ರೇಮ ದುರಂತ ಅಂತ್ಯ ಕಂಡಿತ್ತು.
ವಿಚಿತ್ರ ಹೇಗಿತ್ತು ಅಂದರೆ ನಿಜ ಜೀವನದಲ್ಲಿ ಫೇಲ್ಯೂರ್ ಆಗಿದ್ದ ಈ ಪ್ರೇಮ ಕಥೆ, ತಮಿಳಿನಲ್ಲಿ ಸಿದ್ಧವಾದ ಇಳಕಾನಮ್ ಇಲ್ಲ ಕಾದಲ್ ಎಂಬ ಹೆಸರಿನಲ್ಲಿ ತೆರೆ ಕಂಡು ದೊಡ್ಡ ಹಿಟ್ ಆಗಿದ್ದು ವಿಪರ್ಯಾಸ.