ಗ್ರಾಹಕರೇ ಹುಷಾರ್ …: LIC ಹೆಸರಲ್ಲಿ ಆನ್ ಲೈನ್ ವಂಚನೆ ..!
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಪ್ ಡೇಟ್ , ಬ್ಯಾಂಕ್ ಖಾತೆ ವಿಚಾರದಲ್ಲಿ ಮಾಹಿತಿ ಪಡೆದು ವಂಚಿಸುತ್ತಿದ್ದ ಸೈಬರ್ ವಂಚಕರು ಈಗ LIC ವಿಚಾರದಲ್ಲಿ ವಂಚನೆಗಿಳಿದಿದ್ದಾರೆ .
ಕೊರೋನಾ ಆರ್ಥಿಕ ಸಂಕಷ್ಟದ ವೇಳೆ ಯಾವುದೇ ರೀತಿಯ ಅನುಮಾನ ಬಾರದಂತೆ ಅಮಾಯಕ ಪಾಲಿಸಿದಾರರಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ದಂಧೆ ಆರಂಭಿಸಿದ್ದಾರೆ ..! ಲಕ್ಷಾಂತರ ರೂ. ಡಿವಿಡೆಂಡ್ ಬರುತ್ತದೆ ಎಂಬ ಆಸೆಗೆ ಯಾಮಾರಿದ್ರೆ ಹಣ ಕಳೆದುಕೊಳ್ಳುವುದು ಕನ್ಫರ್ಮ್ ..! ಗ್ರಾಹಕರೇ ಹುಷಾರ್ ಹುಷಾರ್ ಹುಷಾರ್ ..!
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ಮನೆಯ ಸ್ಥಿರ ದೂರವಾಣಿ ಸಂಖ್ಯೆಗೆ ಕರೆಮಾಡಿ ಎಲ್ ಐ ಸಿ ಅಧಿಕಾರಿ ಹೆಸರಲ್ಲಿ ಒಬ್ಬ ಮಹಿಳೆ ಕರೆ ಮಾಡಿದ್ದಾಳೆ. ಕಾಲ್ ರಿಸೀವ್ ಮಾಡಿದಾಕೆ ತನ್ನ ಪತಿ ನಂಬರ್ ಕೊಟ್ಟಿದ್ದಾರೆ .
ಅಧಿಕಾರಿ ಎಂದು ಕರೆ ಮಾಡಿದ್ದ ಮಹಿಳೆ ಆ ನಂಬರ್ ಗೆ ಕರೆ ಮಾಡಿದ್ದಾಳೆ . ಎಲ್‌ಐಸಿಯಿಂದ ಮಾತನಾಡುತ್ತಿದ್ದೇನೆ. ನೀವು ಎಲ್‌ಐಸಿ ಪಾಲಿಸಿ ಹೊಂದಿರುವಿರಿ. ಎಷ್ಟು ಪಾಲಿಸಿಗಳಿವೆ ಮತ್ತು ವರ್ಷಕ್ಕೆ ಎಷ್ಟು ಪ್ರೀಮಿಯಂ ಪಾವತಿ ಮಾಡುತ್ತಿರುವಿರಿ,” ಎಂದು ಕೇಳಿದ್ದಾರೆ. ”ನಾನು 3-4 ಪಾಲಿಸಿ ಹೊಂದಿದ್ದೇನೆ. ನಿರ್ದಿಷ್ಟ ಶುಲ್ಕ ಈಗ ಹೇಳಲಾಗದು ಎಂದು ಹೇಳಿದ್ದಾರೆ .
ನೀವು ನಿಮ್ಮ ಎಲ್‌ಐಸಿಯ ಪ್ರಿಮಿಯಮ್ ಅನ್ನು ಸಮಯಕ್ಕೆ ಸರಿಯಾಗಿ ತಪ್ಪದೆ ಕಟ್ಟಿರುವ ಕಾರಣ ನಿಮಗೆ 1,45,999 ರೂ. ಡಿವಿಡೆಂಡ್ ಬಂದಿದೆ. ಆದರೆ, ನೀವು ಡಿವಿಡೆಂಟ್ ಬೇಡವೆಂದು ಕ್ಯಾನ್ಸಲೇಷನ್‌ಗೆ ಅರ್ಜಿ ಹಾಕಿದ್ದೀರಾ,” ಎಂದಿದ್ದಾಳೆ.
ನನಗೆ ಡಿವಿಡೆಂಡ್ ಬಂದಿರುವುದು ಗೊತ್ತಿಲ್ಲ. ಅಲ್ಲದೆ, ಡಿವಿಡೆಂಡ್ ಕ್ಯಾನ್ಸಲೇಷನ್‌ಗೆ ಯಾವುದೇ ಅರ್ಜಿ ಹಾಕಿಲ್ಲ, ಎಂದು ಅವರು ಆಕೆಗೆ ಉತ್ತರಿಸಿದ್ದಾರೆ.
ನಿಮ್ಮ ಎಲ್‌ಐಸಿ ಏಜೆಂಟ್ ಕಮಿಷನ್ ಆಸೆಗೆ ನಿಮಗೆ ಗೊತ್ತಿಲ್ಲದಂತೆ ವಂಚಿಸುತ್ತಿದ್ದಾರೆ. ಇದರಿಂದ ಏಜೆಂಟ್‌ಗೆ 47 ಪರ್ಸೆಂಟ್ ಕಮಿಷನ್ ಸಿಗುತ್ತದೆ. ನಿಮ್ಮ ಉಳಿದ ಹಣವನ್ನು ಎಲ್‌ಐಸಿ ಬೇರೆ ಕಡೆ ಹೂಡಿಕೆ ಮಾಡುತ್ತದೆ. ಇದನ್ನು ತಪ್ಪಿಸಿ ನಿಮ್ಮ ಹಣ ಪಡೆಯಬಹುದು ಎಂದು ವಂಚಕಿ ಮಹಿಳೆ ಹೇಳಿದ್ದಾಳೆ.
ಅದಕ್ಕೆ, ಸರಿ ನಾನೀಗ ಏನು ಮಾಡಬೇಕು ಎಂದಾಗ , ನಿಮ್ಮ ಹಣ ನಿಮಗೆ ಬರಲು ಒಂದು ಫೈಲ್ ಕ್ರಿಯೇಟ್ ಮಾಡುತ್ತೇನೆ. ನಿಮಗೆ ಡಿಒಟಿ ಮತ್ತು ಎನ್‌ಒಸಿ ನಂಬರ್ ನೀಡುತ್ತೇನೆ. ನೇರವಾಗಿ ಹಣ ಟ್ರಾನ್ಸ್‌ಫರ್ ಮಾಡುತ್ತೇವೆ. ನಿಮಗೆ ವಂಚಿಸುತ್ತಿರುವ ಏಜೆಂಟ್‌ನನ್ನು ಬ್ಲಾಕ್ ಲೀಸ್ಟ್‌ಗೆ ಹಾಕಿ ಡಿಲಿಂಕ್ ಮಾಡುತ್ತೇವೆ. ಇನ್ನು ಮುಂದೆ ಅವರಿಗೆ ಹೋಗುವ ಕಮಿಷನ್ ನಿಮಗೆ ಬರುವಂತೆ ಮಾಡುತ್ತೇವೆ. ನಾನು ನೀಡುವ ಕೋಡ್ ನಂಬರ್ ಬರೆದಿಟ್ಟುಕೊಳ್ಳಿ. ನಮ್ಮ ಫಂಡ್ ಮ್ಯಾನೇಜರ್‌ಗೆ ಕನೆಕ್ಟ್ ಮಾಡುತ್ತೇನೆ. ಅವರಿಗೆ ವಿವರ ನೀಡಿ ಡಿವಿಡೆಂಡ್ ಪಡೆಯುವುದು ಹೇಗೆ ಎಂದು ತಿಳಿಸುತ್ತಾರೆ,” ಎಂದು ಹೇಳಿ ಆಂತರಿಕವಾಗಿ ಮತ್ತೊಂದು ವ್ಯಕ್ತಿಗೆ ಫೋನ್ ಕನೆಕ್ಟ್ ಮಾಡಿದ್ದಾಳೆ ಆ ವಂಚಕಿ..!
ಆಗ ಮತ್ತೊಬ್ಬ ವ್ಯಕ್ತಿ ಎಲ್‌ಐ ಸಿ ಮ್ಯಾನೇಜರ್ ವಿಷಯದಲ್ಲಿ ಮಾತನಾಡಿದ್ದಾನೆ .
ನಿಮಗೆ ಹಣ ತಲುಪಿಸಲು ಕೆಲವು ಫಾರ್ಮ್ ತುಂಬಬೇಕು. ಅದಕ್ಕಾಗಿ ಬೆಂಗಳೂರಿನಲ್ಲಿ ನಾವು ಕೆಲವು ವಿಮಾ ಕಂಪನಿಗಳಿಗೆ ಔಟ್‌ಸೋರ್ಸಿಂಗ್ ನೀಡಿದ್ದೇವೆ. ನೀವು ಅವರಿಗೆ ನಿಮ್ಮ ಐಡಿ, ಪ್ಯಾನ್ ಕಾರ್ಡ್ ಪ್ರತಿ, ಆಧಾರ್ ಸಂಖ್ಯೆ ಮತ್ತು ನಾಮಿನಿ ಆಗಿರುವ ಪತ್ನಿಯ ವಿವರಗಳನ್ನು ನೀಡಿ. ನಿಮ್ಮ ಹಣವನ್ನು ಔಟ್‌ಸೋರ್ಸಿಂಗ್ ಪಡೆದ ಕಂಪನಿ ಮೂಲಕ ನಿಮಗೆ ಪಾವತಿ ಮಾಡುತ್ತೇವೆ. ಡಿಟಿಸಿ ಮತ್ತು ಎನ್‌ಒಸಿ ಫಾರ್ಮ್ ಗೆ 24 ಸಾವಿರ ರೂ. ಪಾವತಿಸಬೇಕು. ನಿಮಗೆ ಬರಲಿರುವ ಡಿವಿಡೆಂಡ್ ಫಂಡ್ ಜೊತೆಗೆ ನೀವು ಈಗ ಪಾವತಿ ಮಾಡುವ 24,000 ರೂ.ಗಳಲ್ಲಿ 23,000 ರೂ. ವಾಪಸ್ ಮಾಡುತ್ತೇವೆ. ಒಟ್ಟಿಗೆ ಎಲ್ಲ ಹಣ ಕಳುಹಿಸುತ್ತೇವೆ. 1 ಸಾವಿರ ರೂ. ಪ್ರೊಸೆಸಿಂಗ್ ಶುಲ್ಕ ಕಡಿತಗೊಳ್ಳಲಿದೆ. ದಾಖಲೆ ಸಂಗ್ರಹಿಸಲು ಪಿಎನ್‌ಬಿಯಿಂದ ಏಜೆಂಟ್ ಮನೆಗೆ ಬರುತ್ತಾರೆ ಎಂದು ಬೊಗಳೆ ಬಿಟ್ಟಿದ್ದಾನೆ..!
ಆಮೇಲೆ ಕೊವಿಡ್ ಕಾರಣದಿಂದ ಪಿಎನ್ ಬಿ ಯವರು ಮನೆಗೆ ಬರಲು ಆಗಲ್ಲ . ಅವರು 15 ನಿಮಿಷಕ್ಕೆ ಕಾಲ್ ಮಾಡ್ತಾರೆ . ಆನ್ ಲೈನ್ ನಲ್ಲಿಯೇ ಪ್ರಕ್ರಿಯೆ ಪೂರೈಸಿ ಎಂದಿದ್ದಾನೆ . ಆಮೇಲೆ ಪಿಎನ್ ಬಿ ಅವನೆಂದು ಒಬ್ಬ ಕರೆ ಮಾಡಿದ್ದಾನೆ . ಅಷ್ಟರಲ್ಲಾಗಲೇ ಖಾಸಗಿ ಕಂಪನಿ ಉದ್ಯೋಗಿಗೆ ಇವರು LIC ಅವರಲ್ಲ ಎಂದು ಗೊತ್ತಾಗಿತ್ತು .ಅವರಿಗೆ ರೆಸ್ಪಾನ್ಸ್ ಮಾಡೋದನ್ನು ಬಿಟ್ಟಿದ್ದಾರೆ ಎಂದು ಪ್ರತಿಷ್ಠಿತ ವಿಜಯ ಕರ್ನಾಟಕ ದಿನಪತ್ರಿಕೆ ಮುಖಪುಟ ವಿಶೇಷ ವರದಿ ಮಾಡಿದೆ .