ರಾಜ್ಯದ ಮೊದಲ ಲೋಕೋ ಪೈಲಟ್ ಈ ಕರಾವಳಿ ಕುವರಿ..!
ಕರಾವಳಿ ಜಿಲ್ಲೆಯ ದಕ್ಷಿಣ ಕನ್ನಡದ ವಿಟ್ಲದ ನಾರಿ ವನಿತಾಶ್ರೀ. ಇವರು ಕರ್ನಾಟಕದ ಮೊದಲ ಮಹಿಳಾ ಲೋಕೋ ಪೈಲಟ್ ಅನ್ನೋ ಗೌರವಕ್ಕೆ ಪಾತ್ರರಾಗಿರುವವರು. ಅಸಾಧ್ಯವಾದುದನ್ನು ಸಾಧಿಸಿ ತೋರಿಸಿರುವ ಸಾಧಕಿ ಈ ನಮ್ಮ ಕನ್ನಡತಿ.
ಕೈತುಂಬಾ ಸಂಬಳ, ವಿಶೇಷ ಭತ್ಯೆ, ಕುಟುಂಬಕ್ಕೆ ಪೂರ್ಣ ಬೆಂಬಲ ಒದಗಿಸುವ ಖಾತ್ರಿ ಇರುವ ರೈಲ್ವೆ ಇಲಾಖೆಯಲ್ಲಿ ನೌಕರಿ ಪಡೆದಿರುವ ಕನ್ನಡಿಗರು ತೀರಾ ವಿರಳ. . ಅದರಲ್ಲೂ ಲೋಕೋ ಪೈಲಟ್ ಹುದ್ದೆ ದೂರದ ಮಾತು. ಇದಕ್ಕೆ ಅಪವಾದ ನಮ್ಮ ವನಿತಾಶ್ರೀ . ರೈಲ್ವೆ ಇಲಾಖೆಯಲ್ಲಿರುವ ಕರಾವಳಿ ಕರ್ನಾಟಕದ ಏಕೈಕ ಮಹಿಳಾ ಲೋಕೋ ಪೈಲಟ್ ಈ ನಾರಿ.
ಲೋಕೋ ಪೈಲಟ್ ಹುದ್ದೆಯಲ್ಲಿರುವ ದಕ್ಷಿಣ ಕನ್ನಡದ ವನಿತಾಶ್ರೀ, ಪ್ರಸ್ತುತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಶಂಟಿಂಗ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಲೋಕೋ ಪೈಲಟ್ ಆಗಿ ದುಡಿಯುವವರು, ಅದೂ ಮುಖ್ಯವಾಗಿ ಹೆಣ್ಣುಮಕ್ಕಳು ವೃತ್ತಿಯನ್ನು ಸವಾಲಾಗಿ ಪರಿಗಣಿಸಲು ಸದಾ ಸಿದ್ಧರಾಗಿರಬೇಕು . ಸಾಮಾನ್ಯವಾಗಿ ನಮ್ಮ ಕರ್ನಾಟಕದ ಹೆಣ್ಣುಮಕ್ಕಳು ಹಾಗೂ ಅವರ ಪಾಲಕರು ಇದಕ್ಕೆ ಸಿದ್ದರಾಗಿರೋದಿಲ್ಲ ಎನ್ನುತ್ತಾರೆ ವನಿತಾಶ್ರೀ.
ಇನ್ನು ವನಿತಾಶ್ರೀ ಅವರ ಕುಟುಂಬದ ಬಗ್ಗೆ ಹೇಳಬೇಕೆಂದರೆ, ಅವರ ಪತಿ ಸತೀಶ್ ಪೊಲೀಸ್ ಇಲಾಖೆ ಉದ್ಯೋಗಿ. ಇಬ್ಬರು ಗಂಡುಮಕ್ಕಳಿದ್ದು, ಓರ್ವ ಐದನೇ ತರಗತಿ, ಮತ್ತೊಬ್ಬ ಒಂದನೇ ತರಗತಿ. ತಂದೆ ವಿಟ್ಲ ನಾರಾಯಣ ನಾಯ್ಕ ಪಶುಸಂಗೋಪನೆ ಇಲಾಖೆಯಲ್ಲಿ ನಿವೃತ್ತ ಕಾಂಪೌಂಡರ್ . ತಾಯಿ ಜಯಶ್ರೀ ಮಂಗಳೂರು ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು , ಬೆಂಗಳೂರು ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.
ವನಿತಾಶ್ರೀ ಅವರಿಗೆ ಈ ವೃತ್ತಿ ಅವರ ಆಯ್ಕೆಯಾಗಿರಲಿಲ್ಲವಂತೆ . ಮಂಗಳೂರು ಕೆ ಪಿ ಟಿಯಲ್ಲಿ ಆಟೋ ಮೊಬೈಲ್ ಡಿಪ್ಲೊಮಾ ಮುಗಿಸಿದ್ರು. ಆ ಸಂದರ್ಭದಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಇರುವ ಬಗ್ಗೆ ಮತ್ತು ಇಲಾಖೆಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಅಪ್ಪ ತಿಳಿಸಿದ್ದರಂತೆ . ಹಾಗಾಗಿ ನಿವತಾಶ್ರೀ ಪ್ರಯತ್ನ ಆರಂಭಿಸಿದ್ರು . ಕೊನೆಗೆ ವೃತ್ತಿಗೆ ಆಯ್ಕೆಯಾದಾಗ ಧೈರ್ಯ ತುಂಬಿದ್ರು . ಜೊತೆಗೆ ಮನೇಲಿ ಅಮ್ಮನ ಬೆಂಬಲವೂ ದೊರೆಯಿತು. ಹಾಗಾಗಿ 2006ರಲ್ಲಿ ಚೆನ್ನೈನಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಿದ್ರು ವನಿತಾಶ್ರೀ.
ಸದ್ಯ ಏಕೈಕ ಕನ್ನಡತಿ ಲೋಕೋ ಪೈಲಟ್ ಎನಿಸಿಕೊಂಡಿರುವ ವನಿತಾಶ್ರೀಯವರ ಛಲ, ಸಾಧನೆ ಮೆಚ್ಚಲೇಬೇಕು. ಸುಮಾರು 116 ರೈಲ್ವೆ ನೌಕರರು ಇರುವ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕನ್ನಡಿಗರು ಮಾತ್ರ ಇದ್ದಾರೆ. ಇವರಲ್ಲಿ ಕನ್ನಡತಿ ಮಹಿಳೆ ಇವರೊಬ್ಬರೇ. ಶಂಟಿಂಗ್ ವಿಭಾಗದಲ್ಲಿ ವೃತ್ತಿ ನಡೆಸುವ ಆರು ಮಂದಿ ನೌಕರರಲ್ಲಿ ವನಿತಾಶ್ರೀ ಹೊರತುಪಡಿಸಿ ಉಳಿದ ಆರು ಮಂದಿ ಉತ್ತರ ಭಾರತದವರು.
ಒಟ್ಟಿನಲ್ಲಿ ಲೋಕೋ ಪೈಲಟ್ ವನಿತಾಶ್ರೀ ಅವರ ಸಾಧನೆ ನಮ್ಮೆಲ್ಲ ಕರ್ನಾಟಕ ರೈಲ್ವೆ ಇಲಾಖೆಯ ಮಹಿಳಾ ನೌಕರರಿಗೂ ಸ್ಫೂರ್ತಿ ಎಂದರೂ ತಪ್ಪಲ್ಲ.