ನೀರಿನಾಸರೆಯೇ ಇಲ್ಲದ ಬೋಳುಗುಡ್ಡವೊಂದು ಇಂದು ಹಚ್ಚ ಹಸುರಿನಿಂದ ನಳನಳಿಸುತ್ತಿದೆ. ಎತ್ತರದ ಬೆಟ್ಟ ಸಮತಟ್ಟಾಗಿ, ಭತ್ತದ ಗದ್ದೆ, ಅಡಕೆ, ತೆಂಗು, ಬಾಳೆಯೇ ತೋಟಗಳಿಂದ ಕಂಗೊಳಿಸತ್ತಿದೆ. ಏನಿದು ನೀರಿಲ್ಲದ ಬೋಳುಗುಡ್ಡದಲ್ಲಿ ತೋಟ- ಗದ್ದೆಯೇ ಎಂದು ಹುಬ್ಬೇರಿಸಬೇಡಿ. ಇದು ಅಚ್ಚರಿ ಎನಿಸಿದರೂ ಸತ್ಯ. ಆ ಅಚ್ಚರಿಯ ಸಾಧಕ ಯಾರು?
ಇವರು ಗುಡ್ಡಕ್ಕೆ ಸುರಂಗ ತೋಡಿ ಜಲಧಾರೆ ಹರಿಸಿದ ಆಧುನಿಕ ಭಗೀರಥ ಅಮೈ ಮಹಾಲಿಂಗ ನಾಯ್ಕ. ಬರಡು ಬಂಜರು ಭೂಮಿಯಲ್ಲಿ ಬಂಗಾರದಂತಹ ಬೆಳೆ ಬೆಳೆಯುವವರು. ನೀರಿನಾಸರೆಯೇ ಇಲ್ಲದ ಬೋಳುಗುಡ್ಡದ ಮೇಲೆ ಒಂದರ ಮಲ್ಲೊಂದು ಸುರಂಗ ಕೊರೆಯುತ್ತಾ ಕೊನೆಗೂ ಜಲಸಿರಿಯನ್ನು ಸಿದ್ಧಿಸಿಕೊಂಡು ಹಸಿರು ತೋಟದ ಸೃಷ್ಟಿಸಿದ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರ ಜೀವನವೇ ಒಂದು ಯಶೋಗಾಥೆ.
ಶಾಲೆಯ ಮೆಟ್ಟಿಲೇರದ, ಅಂಕಿತ ಹಾಕಲು ಹೆಬ್ಬಟ್ಟು ಒತ್ತುವ ಮಹಾಲಿಂಗ ನಾಯ್ಕ ಅವರು ಬಂಗಾರದ ಬೆಳೆ ತೆಗೆಯುತ್ತಿರುವ ಗುಡ್ಡ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ. ವಿಟ್ಲದ ಕುದ್ದುಪದವು ಬಳಿ ಕಾಸರಗೋಡಿಗೆ ಹೋಗುವ ರಾಜ್ಯ ಹೆದ್ದಾರಿಯ ಎಡಕ್ಕೆ ಸಾಗುವ ಮಣ್ಣಿನ ದಾರಿಯಲ್ಲಿ ಒಂದು ಕಿಲೋಮೀಟರ್ ಸಾಗಿದರೆ ಅಮೈ ಅನ್ನುವ ಕಾಡಂಚಿನ ಪ್ರದೇಶವಿದೆ. ಇಲ್ಲಿ ನಾಯ್ಕರ ಜಮೀನಿದೆ.
ಅಡಕೆ, ತೆಂಗಿನ ಮರ ಹತ್ತುವುದರಲ್ಲಿ ನಿಸ್ಸಿಮರಾಗಿದ್ದ ಮಹಾಲಿಂಗ ನಾಯ್ಕ, 40 ವರ್ಷದ ಹಿಂದೆ ಕೂಲಿ ಕಾರ್ಮಿಕರಾಗಿದ್ದರು. ಇವರ ಕರ್ತವ್ಯ ಪರತೆ ಕಂಡು ಭೂಮಾಲೀಕ ಅಮೈ ಮಹಾಬಲ ಭಟ್ಟರು 1978ರಲ್ಲಿ ಮಹಾಲಿಂಗ ನಾಯ್ಕರಿಗೆ ತಮ್ಮ 2 ಎಕರೆ ಗುಡ್ಡದ ಮೇಲಿನ ಜಮೀನು ನೀಡಿದರು. ಹೀಗೆ ಭೂ ಮಾಲೀಕರಾದ ಮಹಾಲಿಂಗ ನಾಯ್ಕ, ಚಲ ಬಿಡದ ತ್ರಿವಿಕ್ರಮನಂತೆ, ಗುಡ್ಡವನ್ನೇ ಕಡಿದು, ಮಟ್ಟ ಮಾಡಿ, ಅಲ್ಲಿಯೇ ಒಂದು ಮನೆ ಕಟ್ಟಿ, ಕೃಷಿ ಕಾರ್ಯದಲ್ಲಿ ತೊಡಗಿದರು.
ಮಹಾಲಿಂಗ ನಾಯ್ಕ ತಮ್ಮ ಜಮೀನಿನಲ್ಲಿ ಬಾಯಿ ತೋಡಿದರೆ ನೀರು ಬರುವುದಿಲ್ಲ ಎಂಬುವುದನ್ನು ಮನಗಂಡು, ಮಣ್ಣಿನ ಗುಡ್ಡಕ್ಕೆ ಸುರಂಗ ಕೊರೆದು ನೀರಿನ ಒರತೆಗಾಗಿ ಹುಡುಕಾಟ ಆರಂಭಿಸಿದರು. ಮಧ್ಯಾಹ್ನದವರೆಗೆ ಬೇರೆಯವರ ತೋಟದಲ್ಲಿ ಅಡಕೆ, ಕಾಯಿ ಕೆಡವಿ ಕೂಲಿ ಮಾಡಿದ ಬಳಿಕ ಸಂಜೆ ನಂತರ ಏಕಾಂಗಿಯಾಗಿ ದೀಪದ ಬೆಳಕಲ್ಲಿ ಗುಡ್ಡ ತೋಡಿ ಸುರಂಗ ಕೊರೆಯುತ್ತಿದ್ದರು. ತಿಂಗಳುಗಟ್ಟಲೇ ನಾಲ್ಕೈದು, ಸುರಂತ ಕೊರೆದರೂ ನೀರು ಬಾರದಿದ್ದಾಗ, ಜನರು ಗೇಲಿ ಮಾಡಿದರು. ಆದರೆ, ಅಡಿಕೊಳ್ಳುವವರ ಮಾತಿಗೆ ಕಿವಿಗೊಡದೆ ತಮ್ಮ ಶಕ್ತಿಯ ಮೇಲೆ ನಂಬಿಕೆಯಿಟ್ಟ ಆರನೇ ಸುರಂಗ ತೋಡಿದಾಗ ಗಂಗಾವತರಣವಾಯಿತು.
ಆದರೆ, 25 ಮೀಟರ್ ಉದ್ದದ ಸುರಂಗದಲ್ಲಿ ಸಿಕ್ಕ ಜಲ ಕೃಷಿಗೆ ಸಾಕಾಗದು ಎಂಬುದನ್ನು ಮನಗಂಡು ಮಹಾಲಿಂಗರು ಆರನೇ ಸುರಂಗ ಪಕ್ಕ ಇನ್ನೊಂದು 75 ಮೀಟರ್ ಸುರಂಗ ಕೊರೆದಾಗ ಯಥೇಚ್ಛವಾಗಿ ನೀರು ಉಕ್ಕಿ ಹರಿದು ಬಂತು. ಹೀಗೆ ಬಂದ ನೀರನ್ನು ಕೊಳವೆಯ ಮೂಲಕ ತಮ್ಮ ಜಮೀನಿನ ಕೃತಕ ಹೊಂಡದಲ್ಲಿ ಶೇಖರಿಸಲು ಸಾಧ್ಯವಾದಾಗ ಅವರ ತೋಟ-ಗದ್ದೆಯ ಕನಸು ಗರಿಗೆದರಿತು. ಬೇಸಿಗೆಯಲ್ಲೂ ಭತ್ತದೆ ನೀರು ಕೊಡುತ್ತಿರುವ ಈ ಸುರಂಗಗಳಿಂದ ಹರಿವ ನೀರನ್ನು ಶೇಖರಿಸಲು ಮುಂದಾದರು.
ನೀರು ಶೇಖರಣೆಗಾಗಿ 15 ಅಡಿ ಉದ್ದ, 30 ಅಗಲ 5 ಅಡಿ ಅಳದ ಮಣ್ಣಿನ ಹೊಂಡ ಹಾಗೂ ಪುಟ್ಟ ಪುಟ್ಟ ಹಲವು ಗುಂಡಿ ನಿರ್ಮಾಣ ಮಾಡಿದರು. ಮತ್ತೆ ಮಹಾಲಿಂಗ ನಾಯ್ಕ ಆ ಗುಂಡಿಯ ನೀರನ್ನು ತಗ್ಗು ಪ್ರದೇಶಕ್ಕೆ ವಿದ್ಯುತ್ ನೆರವಿಲ್ಲದೆ ಸಹಜವಾಗಿ ಹರಿಸುತ್ತಾರೆ. ಈ ಕಾರ್ಯಕ್ಕೆ ಅವರ ಪತ್ನಿ ಲಲಿತಾ, ಮೂವರು ಮಕ್ಕಳು ಬೆಂಬಲವಾಗಿ ನಿಂತಿದ್ದು, ನಾಯ್ಕರು ಅಸಾಧ್ಯವನ್ನು ಸಾಧಿಸಿ ತೋರಿಸಿದ್ದಾರೆ. ಮತ್ತೆ ತಮ್ಮ ತೋಟಕ್ಕೆ ಹಟ್ಟಿ ಗೊಬ್ಬರ, ಕಾಂಪೋಸ್ಟ್ ಹೊರತಾಗಿ ಇನ್ಯಾವುದೇ ರಸಗೊಬ್ಬರ ಬಳಸುವುದಿಲ್ಲ.
ಏಕಾಂಗಿಯಾಗಿ ಹಠ ತೊಟ್ಟು ಛಲದಂಕಮಲ್ಲನಂತೆ ಸಾಧನೆ ಮೆರೆದು ಬರಡು ಬಂಜರು ಭೂಮಿಯನ್ನು ಬಂಗಾರದ ಬೆಳೆ ಬೆಳೆವ ಫಲವತ್ತಾದ ಭೂಮಿ ಮಾಡಿದ್ದಾರೆ. ಅಕ್ಷರ ಕಲಿಯದಿದ್ದರೂ ತಮ್ಮ ಬುದ್ಧಿಶಕ್ತಿ ಮತ್ತು ಇಚ್ಛಾಶಕ್ತಿಯಿಂದ ಭಗೀರಥ ಪ್ರಯತ್ನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.