ಪೊಲೀಸ್ ಆಗುವ ಕನಸು ಕಂಡ ಯುವಕ ಪರೀಕ್ಷೆ ಬರೆದರೂ ಉತ್ತೀರ್ಣನಾಗದೇ ಪೊಲೀಸ್ ಧಿರಿಸಿನಲ್ಲಿ ಸುಲಿಗೆಗೆ ಇಳಿದು ಜೈಲುಪಾಲಾಗಿದ್ದಾನೆ. ಈ ನಕಲಿ ಪೊಲೀಸ್ನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೊಪ್ಪಳ ಮೂಲದವನಾದ ಬಾಗಲಗುಂಟೆ ನಿವಾಸಿ ಕೀರಪ್ಪ ಬಂಧಿತ ನಕಲಿ ಪೊಲೀಸ್. ಈತ ಪೊಲೀಸ್ ಕಾನ್‌ಸ್ಟೇಬಲ್ ಆಗಬೇಕೆಂಬ ಆಸೆ ಇಟ್ಟುಕೊಂಡು ಶಿಕ್ಷಣ ಮುಗಿಸಿ ಪರೀಕ್ಷೆ ಬರೆದಿದ್ದ. ಆದರೆ, ಈತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ. ಆದರೆ, ಈತನ ಪಾಲಕರು ಮಗ ಪೊಲೀಸ್ ಆಗಿ ಸಮಾಜ ಸೇವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಇತ್ತ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿಚಾರ ಮನೆಯಲ್ಲಿ ತಿಳಿಸಲು ಮುಜುಗರಗೊಂಡ ಕೀರಪ್ಪ, ತಾನು ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿರುವುದಾಗಿ ಮನೆಯಲ್ಲಿ ಸುಳ್ಳು ಹೇಳಿದ್ದ.
ಕಳೆದ 2 ತಿಂಗಳ ಹಿಂದೆ ಪೊಲೀಸ್ ಧಿರಿಸನ್ನು ಧರಿಸಿ ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ತನ್ನದೇ ಪಲ್ಸರ್ ಬೈಕ್‌ನಲ್ಲಿ ಓಡಾಡುತ್ತಿದ್ದ. ತಾನು ವಾಸವಿದ್ದ ಬಾಡಿಗೆ ಮನೆಯ ಮಾಲೀಕನಿಗೂ ಪೊಲೀಸ್ ಕಾನ್‌ಸ್ಟೇಬಲ್ ಎಂದು ನಂಬಿಸಿದ್ದ. ಜೀವನ ನಿರ್ವಹಣೆಗಾಗಿ ಬೆಳಗ್ಗೆ ಪಿಜಿಗಳು, ಸಣ್ಣ ಅಂಗಡಿ ಮಾಲೀಕರು ಹಾಗೂ ಅಮಾಯಕರನ್ನು ಗುರುತಿಸಿ ಪೊಲೀಸರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.