ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಲಿದ್ದಾರೆ. ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ 99 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 100 ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಭವಿ ಕ್ರಿಕೆಟಿಗ ರೋಹಿತ್ ಶರ್ಮಾ ಇಶಾಂತ್ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
“ಇಶಾಂತ್ ಶರ್ಮಾ ತಮ್ಮ ವೃತ್ತಿ ಜೀವನದಲ್ಲಿ ಏನು ಸಾಧಿಸಿದ್ದಾರೋ ಅದು ಅಸಾಮಾನ್ಯ. 100 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸುವುದು ಸಾಮಾನ್ಯ ಸಾಧನೆಯಲ್ಲ” ಎಂದು ರೋಹಿತ್ ಶರ್ಮಾ ಇಶಾಂತ್ ಶರ್ಮಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಇನ್ನು ನಾಯಕ ವಿರಾಟ್ ಕೊಹ್ಲಿ ಕೂಡ ಇಶಾಂತ್ ಶರ್ಮಾ ಅವರ ಮೈಲಿಗಲ್ಲಿನ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಾವಿಬ್ಬರೂ ಬಹಳ ಕಾಲದಿಂದ ಜೊತೆಯಾಗಿ ಕ್ರಿಕೆಟ್ ಆಡಿಕೊಂಡು ಬಂದಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಇಬ್ಬರು ಕ್ರಿಕೆಟಿಗರು ದಿಲ್ಲಿ ರಣಜಿ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದರು.
ಇಶಾಂತ್ ದೇಶೀಯ ಕ್ರಿಕೆಟ್‌ಅನ್ನು ನನ್ನ ಜೊತೆಯಲ್ಲೇ ಆಡಲು ಆರಂಭಿಸಿದ್ದರು. ಆತ ಭಾರತ ತಂಡಕ್ಕೆ ಅವಕಾಶ ಪಡೆದಾಗ ಆತ ನಿದ್ರಿಸುತ್ತಿದ್ದ. ಆತನಿಗೆ ಬಾರಿಸಿ ಆ ಸುದ್ದಿಯನ್ನು ಆತನಿಗೆ ತಿಳಿಸಿದ್ದೆ. ಹೀಗೆ ನಾವು ಸುದೀರ್ಘ ಕಾಲದಿಂದ ಜೊತೆಯಾಗಿದ್ದೇವೆ. ನಮ್ಮಿಬ್ಬರ ಮಧ್ಯೆ ಅತ್ಯುತ್ತಮವಾದ ವಿಶ್ವಾಸವಿದೆ. ಬಹಳ ಕಾಲದಿಂದ ತನ್ನ ಬೌಲಿಂಗ್‌ನಲ್ಲಿ ಆತ ಯಶಸ್ಸನ್ನು ಸಾಧಿಸುತ್ತಿರುವುದನ್ನು ನಾನು ಆನಂದಿಸುತ್ತಿದ್ದೇನೆ” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಶಾಂತ್ ಶರ್ಮಾ ಭಾರತೀಯ ವೇಗಿಗಳ ಪೈಕಿ 100ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಕೇವಲ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಈವರೆಗೆ ಭಾರತದ ಪರವಾಗಿ ವೇಗಿಗಳಲ್ಲಿ ಮಾಜಿ ನಾಯಕ ಕಪಿಲ್‌ದೇವ್ ಮಾತ್ರವೇ 100 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.