: ಆತಿಥೇಯ ಟೀಮ್ ಇಂಡಿಯಾ ಎದುರು ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ.
ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ 112 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ಪ್ರಥಮ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗಳ ನಷ್ಟದಲ್ಲಿ 99 ರನ್ ಗಳಿಸಿ ದೊಡ್ಡ ಮೊತ್ತವನ್ನು ಎದುರು ನೋಡುತ್ತಿತ್ತು.
ಅಂದಹಾಗೆ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಇಂಗ್ಲೆಂಡ್ ಕೇವಲ ಒಬ್ಬ ಪರಿಣತ ಸ್ಪಿನ್ನರ್‌ನ ಮಾತ್ರ ಕಣಕ್ಕಿಳಿಸಿತ್ತು. ಭಾರತೀಯ ಸ್ಪಿನ್ನರ್‌ಗಳ ಪರಾಕ್ರಮ ಕಂಡು ಸ್ಪಿನ್ ಬೌಲಿಂಗ್‌ನ ಅಗತ್ಯವಿದೆ ಎಂದು ಅರಿತ ಇಂಗ್ಲೆಂಡ್ ನಾಯಕ ಜೋ ರೂಟ್ ಎರಡನೇ ದಿನ ತಾವೇ ಖುದ್ದಾಗಿ ಆಫ್ ಸ್ಪಿನ್ ಬೌಲಿಂಗ್ ಮಾಡಲು ಮುಂದಾದರು.
ಇಂಗ್ಲೆಂಡ್ ನಾಯಕನ ಈ ನಿರ್ಧಾರಕ್ಕೆ ಅದ್ಭುತ ಫಲಿತಾಂಶವೇ ಸಿಕ್ಕಿತ್ತು. ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ಮರ್ಮಾಘಾತ ನೀಡಿದ ರೂಟ್, ಕೇವಲ 8 ರನ್ ನೀಡಿ ತಮ್ಮ ವೃತ್ತಿ ಬದುಕಿನ ಮೊತ್ತ ಮೊದಲ 5 ವಿಕೆಟ್ ಸಾಧನೆ ಮಾಡಿದರು. ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ 5 ವಿಕೆಟ್ ಪಡೆದ ಸಾಧನೆ ಅವರು ಮಾಡಿರಲಿಲ್ಲ. ಇದಕ್ಕೂ ಮುನ್ನ ದಕ್ಷಣ ಆಫ್ರಿಕಾ ಎದುರು 87ಕ್ಕೆ 4 ವಿಕೆಟ್ ಪಡೆದದ್ದು ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿತ್ತು.
ಈಗ ಈ ಅಮೋಘ ಬೌಲಿಂಗ್ ಪ್ರದರ್ಶನದೊಂದಿಗೆ ಕಳೆದ 38 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 5 ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊತ್ತ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಅಲ್ಲದೆ ಏಷ್ಯಾ ಭಾಗದಲ್ಲಿ ಇಂಗ್ಲೆಂಡ್ ತಂಡದ ನಾಯಕನೊಬ್ಬ 5 ವಿಕೆಟ್ ಸಾಧನೆ ಮಾಡಿರುವುದು ಇದೇ ಮೊದಲು. 1983ರಲ್ಲಿ ಬಾಬ್ ವಿಲ್ಲಿಸ್ ನ್ಯೂಜಿಲೆಂಡ್ ಎದುರು 33ಕ್ಕೆ 5 ವಿಕೆಟ್ ಪಡೆದು ಇಂಗ್ಲೆಂಡ್ ಪರ ಇನಿಂಗ್ಸ್ ಒಂದರಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ ನಾಯಕ ಎನಿಸಿಕೊಂಡಿದ್ದರು.
ಪಿಂಕ್ ಬಾಲ್‌ನಲ್ಲಿ 6.2 ಓವರ್‌ಗಳನ್ನು ಎಸೆದ ರೂಟ್ 5 ವಿಕೆಟ್‌ಗಳನ್ನು ಪಡೆಯಲು ಕೇವಲ 8 ರನ್‌ಗಳನ್ನು ಮಾತ್ರವೇ ನೀಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 5 ವಿಕೆಟ್ ಸಾಧನೆ ಸಲುವಾಗಿ ಅತ್ಯಂತ ಕಡಿಮೆ ರನ್‌ಗಳನ್ನು ಬಿಟ್ಟುಕೊಟ್ಟ ವಿಶ್ವ ದಾಖಲೆ ಇಂಗ್ಲೆಂಡ್ ಕಪ್ತಾನನ ಮುಡಿಗೇರಿದೆ.
ಆದರೆ, ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 112 ಮತ್ತು 2ನೇ ಇನಿಂಗ್ಸ್‌ನಲ್ಲಿ 81 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 10 ವಿಕೆಟ್‌ಗಳ ಹೀನಾಯ ಸೋಲುಂಡಿತು. ಭಾರತ ತಂಡದ ಪರ ಯುವ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎರಡೂ ಇನಿಂಗ್ಸ್‌ಗಲ್ಲಿ ಐದು ವಿಕೆಟ್‌ಗಳ ಸಾಧನೆ ಮೆರೆದು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಮೊದಲ ಇನಿಂಗ್ಸ್‌ನಲ್ಲಿ 38ಕ್ಕೆ 6 ವಿಕೆಟ್ ಪಡೆದ ಅಕ್ಷರ್, ಎರಡನೇ ಇನಿಂಗ್ಸ್‌ನಲ್ಲೂ 32ಕ್ಕೆ 5 ವಿಕೆಟ್ ಕಿತ್ತು ಇಂಗ್ಲೆಂಡ್ ತಂಡ ಭುಜಂಗ ಬಲವನ್ನೇ ಅಡಗಿಸಿಬಿಟ್ಟರು.