ಡಿಕೆಶಿಗೆ ಕಾಂಗ್ರೆಸ್ ಸಾರಥ್ಯ..! ಇದು ಬರೀ ಒಕ್ಕಲಿಗರನ್ನು ಸೆಳೆಯುವ ತಂತ್ರವಲ್ಲ..!

Date:

 

raaaಮೊದಲು ಬಿಜೆಪಿ ವಿಚಾರಕ್ಕೆ ಬನ್ನಿ. ದಕ್ಷಿಣ ಭಾರತದಲ್ಲಿ ಅದು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಹೆಣಗುತ್ತಲೇ ಇದೆ. ಆಂಧ್ರ, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿ ಮಿಕ್ಕವರು ಕೆಮ್ಮುವುದಕ್ಕೂ ಸಾಧ್ಯವಿಲ್ಲ. ಇನ್ನು ಆಡಳಿತ ನಡೆಸುವುದು ದೂರದ ಮಾತು. ಹೀಗಿರುವಾಗ ಬಿಜೆಪಿಗೆ ತಕ್ಕಮಟ್ಟಿಗೆ ಬೆಲೆ ಅಂತ ಸಿಕ್ಕರೇ ಅದು ಕರ್ನಾಟಕದಲ್ಲಿ ಮಾತ್ರ. ದಕ್ಷಿಣ ಭಾರತದ ರಾಜಕಾರಣದಲ್ಲಿ ಕರ್ನಾಟಕದ ರಾಜಕಾರಣ ಮಾತ್ರ ರಾಷ್ಟ್ರೀಯ ಪಕ್ಷಗಳ ತಳಪಾಯದಲ್ಲಿ ನಿರ್ಮಾಣವಾಗುತ್ತದೆ. ಇಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್, ಆಗಾಗ್ಗೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಿಕ್ಕಂತೆ ರಾಷ್ಟ್ರೀಯ ಪಕ್ಷಗಳೇ ಇಲ್ಲಿ ಸರ್ಕಾರ ರಚಿಸುತ್ತದೆ.

ಕಾಂಗ್ರೆಸ್ ಆಡಳಿತಕ್ಕೆ ಬರುವ ಮುನ್ನ ಬಿಜೆಪಿ ಈ ರಾಜ್ಯವನ್ನು ಆಳಿತ್ತು. ಐದು ವರ್ಷ ಪೂರೈಸುವಾಗ ಮೂರು ಮೂರು ಮುಖ್ಯಮಂತ್ರಿಗಳು ಈ ರಾಜ್ಯವನ್ನು ಆಳಿದ್ದರು. ಕೋಪಗೊಂಡಿದ್ದ ಯಡಿಯೂರಪ್ಪ ಕೆಜೆಪಿ ಅಂತ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿದರು. ಇದರ ಪರಿಣಾಮ ಲಾಡು ಬಂದು ನೇರವಾಗಿ ಸಿದ್ದರಾಮಯ್ಯನವರ ಬಾಯಿಗೆ ಬಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂತು. ಇದಾದ ಮೇಲೆ ಬಿಜೆಪಿ ದಿನದಿಂದ ದಿನಕ್ಕೆ ಸೂಕ್ತ ನಾಯಕರಿಲ್ಲದೇ ಸೊರಗತೊಡಗಿತು. ಪ್ರಲ್ಹಾದ್ ಜೋಷಿ, ಅಶೋಕ್- ಅವರಿಂದ ಬಿಜೆಪಿ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಲಿಲ್ಲ. ಹಿರಿಯರು, ಅನುಭವಿ ಅಂತ ಈಶ್ವರಪ್ಪನವರಿಗೆ ಮಣೆ ಹಾಕಿದರೇ ಅವರ ನಾಲಿಗೆಯೇ ಬಿಜೆಪಿಗೆ ಮುಜುಗರವುಂಟುಮಾಡುತ್ತಿತ್ತು. ಊರೆಲ್ಲಾ ಸುತ್ತಿದ ನಂತರ, ಇಲ್ಲಾ ಕಣ್ರೀ- ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು. ಪ್ರಬಲ ಸಮುದಾಯದ ನಾಯಕರಾದ ಅವರಿಗಿದ್ದ ಗೈರತ್ತು ಕೂಡ ಅಂಥದ್ದೆ..!!

ಇದಾದ ಮೇಲೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಕಸರತ್ತು ಶುರುವಾಯಿತು. ಬಹಳ ಕಷ್ಟದ ಕೆಲಸವಾಗಿರಲಿಲ್ಲ. ಯಡಿಯೂರಪ್ಪ ತುದಿಗಾಲಲ್ಲಿ ನಿಂತಿದ್ದರು. ಯಾರಾದರು ಕರೆಯಲಿ ಎಂದೇ ಕಾಯುತ್ತಿದ್ದರು. ಕರೆಸಿಕೊಳ್ಳಿ ಎಂದು ಕೇಳಿಕೊಳ್ಳಲು ಸ್ವಾಭಿಮಾನದ ಅಡ್ಡಿ. ಹೀಗಾಗಿ ಒಂದು ಶುಭಸಂದರ್ಭದಲ್ಲಿ ಯಡಿಯೂರಪ್ಪನವರು ಬಿಜೆಪಿಗೆ ಪುನಾರಾಗಮನವಾದರು. ಏನೂ ಕಿಸಿಯಲಿಕ್ಕಾಗದವರಿಗೆ ಅವರ ಮರುಪ್ರವೇಶ ಇರಿಸುಮುರಿಸುಂಟಾದರೂ, ಹೈಕಮಾಂಡ್ ಯೋಗ್ಯತೆಯನ್ನು ಪ್ರಶ್ನಿಸಿದರೇ ಕಷ್ಟ ಅಂತ ಯಡಿಯೂರಪ್ಪ ಯಾವತ್ತಿದ್ದರೂ ನಮ್ಮ ಜನನಾಯಕ ಎಂದರು. ಬಿಜೆಪಿಗೆ ಮರುಪ್ರವೇಶವಾದರೂ ಯಡಿಯೂರಪ್ಪನವರಿಗೆ ಆರಂಭದಲ್ಲಿ ತಕ್ಕಮನ್ನಣೆ ಸಿಗಲಿಲ್ಲ. ಇತ್ತೀಚೆಗೆ ಹೈಕಮಾಂಡ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಿ ಎಂದು ವೀಳ್ಯ ಕೊಟ್ಟಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಿರ್ಧರಿಸಿರುವ ಯಡಿಯೂರಪ್ಪ ಕೇದರನಾಥ ದೇವಸ್ಥಾನಕ್ಕೂ ಹೋಗಿಬಂದರು. ಬಿಜೆಪಿಯ ಈ ಬೆಳವಣಿಗೆ ಬದುಕಿರುವಂತೆ ಕಾಣುತ್ತಿರುವ ಕಾಂಗ್ರೆಸ್‍ಗೆ ಹಿನ್ನಡೆಯನ್ನುಂಟು ಮಾಡುವುದ ಖಚಿತವೆನಿಸಿದೆ.

ಈಗಾಗಲೇ ಕಾಂಗ್ರೆಸ್ ದೇಶದಲ್ಲಿ ಇಪ್ಪತ್ತು ರಾಜ್ಯಗಳನ್ನು ಕಳೆದುಕೊಂಡಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೈ ಮುರಿದುಕೊಂಡಿದೆ. ಆದರೂ ಬುದ್ಧಿ ಕಲಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅದೇ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟಿಲ್ಲ. ಜನರು ಉಲ್ಟಾ ಹೊಡೆಯುತ್ತಿರುವುದು ಸ್ಪಷ್ಟವಾಗುತ್ತಿದ್ದರೂ ಇವರು ಮಾತ್ರ ಆಡಳಿತದಲ್ಲಿ ಚುರುಕುಮುಟ್ಟಿಸುವ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಬಗ್ಗೆ ಖುದ್ದು ಕಾಂಗ್ರೆಸ್ ಶಾಸಕ ರಮೇಶ್‍ಕುಮಾರ್ ಅಸಮಾಧಾನವ್ಯಕ್ತಪಡಿಸಿದ್ದರು. ಅವರ ಅಕ್ಕನ ಮನೆಯ ಎಮ್ಮೆಗೆ ಮನೆಯೊಳಗೆ ಬರುವುದಕ್ಕೆ ಮನೆ ಬಾಗಿಲು ಅಡ್ಡಿಯಾಗುತ್ತಂತೆ. ಹಾಗಿದೂ ಕೋಡನ್ನು ಸೈಡಿಂದ ತೂರಿ ಒಳಗೆ ಬರುವ ಬುದ್ದಿವಂತಿಕೆಯನ್ನು ಪ್ರದರ್ಶಿಸುತ್ತಿತ್ತಂತೆ. ಆ ಎಮ್ಮೆಗೆ ಇರುವಷ್ಟು ಬುದ್ಧಿ ಕಾಂಗ್ರೆಸ್‍ಗೆ ಇಲ್ಲ ಎಂದು ರಮೇಶ್‍ಕುಮಾರ್ ಕಾಂಗ್ರೆಸ್ ನಾಯಕರನ್ನು ಹೀಯಾಳಿಸಿರುವುದರಲ್ಲಿ ಯಾವ ತಪ್ಪು ಕಾಣಿಸಲಿಲ್ಲ. ನಮ್ಮ ಮನೆಯ ಸಂಗತಿ ಮೊದಲು ಅರ್ಥವಾಗಬೇಕಾಗಿದ್ದು ನಮ್ಮ ಮನೆಯವರಿಗೇ ಅಲ್ವೇ..!? ಕಾಂಗ್ರೆಸ್ ನಿಧಾನಗತಿ ಮುಂದಿನ ಅವಧಿಯಲ್ಲಿ ಕೈ ಚೆಲ್ಲಾಬೇಕಾಗಿರುವುದರ ಸೂಚನೆ ಎನ್ನಲಾಗುತ್ತಿದೆ. ಹಾಗಾಗಿಯೇ ಈಗ ಕಾಂಗ್ರೆಸ್ ಹೈಕಮಾಂಡ್ ಮೇಜರ್ ಸರ್ಜರಿಗೆ ಮುಂದಾಗಿದೆ.

ಬಿಜೆಪಿ ಲಿಂಗಾಯಿತ ಸಮುದಾಯದ ಪ್ರಭಾವಿ ಮುಖಂಡ ಯಡಿಯೂರಪ್ಪನವರಿಗೆ ಮಣೆ ಹಾಕಿರುವುದರಿಂದ, ಕಾಂಗ್ರೆಸ್ ಒಕ್ಕಲಿಗೆ ಸಮುದಾಯದ ಪ್ರಭಾವಿ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಪಟ್ಟದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ಸುದ್ಧಿಯಿದೆ. ಸಧ್ಯಕ್ಕೆ ರಾಜ್ಯ ಕಾಂಗ್ರೆಸ್‍ನಲ್ಲಿ ಆರೋಪವಿದ್ದರೂ ಖದರ್ರು ಉಳಿಸಿಕೊಂಡಿರುವ ಡಿಕೆಶಿಗೆ ಮಣೆ ಹಾಕುವಂತೆ ಕೃಷ್ಣಬಳಗ ಹೈಕಮಾಂಡ್‍ಗೆ ಸೂಚಿಸಿರುವುದರಿಂದ, ಕೈ ಪಾಳಯದಲ್ಲಿ ಒಕ್ಕಲಿಗೆ ನಾಯಕತ್ವದ ಲಕ್ಷಣಗಳು ಕಾಣಿಸಿವೆ. ಅತ್ತ ಒಕ್ಕಲಿಗ ಸಮುದಾಯದ ಪ್ರಭಾವಿಗಳಾದ ದೇವೇಗೌಡ ಅಂಡ್ ಸನ್ಸ್ ಕೋಟೆಯನ್ನು ಡಿಕೆಶಿ ಕೆಡವುತ್ತಾರಾ..? ಎಂಬ ಪ್ರಶ್ನೆಗಿಂತ ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಾರಾ..? ಎಂಬ ಪ್ರಶ್ನೆ ಸಾಂಧರ್ಭಿಕವೆನಿಸಿದೆ.

ಈಗಾಗಲೇ ದಲಿತ ಸಿಎಂ ಕೂಗು ಕೇಳಿಬರುತ್ತಿದೆ. ಆ ಬಗ್ಗೆ ಹೈಕಮಾಂಡ್ ಅಷ್ಟಾಗಿ ಆಸ್ಥೆವಹಿಸುತ್ತಿಲ್ಲ. ಇದೀಗ ಪರಮೇಶ್ವರ್ ಅವರನ್ನು ಪಕ್ಕಕ್ಕಿಟ್ಟು ಮೇಲ್ವರ್ಗಕ್ಕೆ ಕೆಪಿಸಿಸಿ ಪಟ್ಟಕಟ್ಟುವ ತೆರೆಮರೆಯ ಕಸರತ್ತು ಆರಂಭವಾಗಿದೆ. ಇದು ಕಾಂಗ್ರೆಸ್‍ನಲ್ಲಿ ಆಂತರ್ಯ ಕಲಹಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಆದರೆ ಇಂತಹ ಹಲವು ಕ್ಲಿಷ್ಠ ಸಂಧರ್ಭಗಳನ್ನು ನಿಭಾಯಿಸಿರುವ ಕಾಂಗ್ರೆಸ್ ಹೈಕಮಾಂಡ್ ಹುಷಾರಾದ ಹೆಜ್ಜೆಯನ್ನಿಡಬಹುದು. ಏಕೆಂದರೇ ದೇಶದಲ್ಲಿ ಖಾಲಿಯಾಗುತ್ತಿರುವ ಅದು ರಾಜ್ಯದಲ್ಲಿ ಗಬ್ಬೆಬ್ಬೆಸಿಕೊಳ್ಳುವ ಸಾಧ್ಯತೆ ಕಡಿಮೆ. ಸಧ್ಯದ ಕಾಂಗ್ರೆಸ್ ಮಟ್ಟಿಗೆ ಡಿಕೆ ಶಿವಕುಮಾರ್ ಬಲಾಢ್ಯ ನಾಯಕ. ಅವರನ್ನು ಹೊರತುಪಡಿಸಿ ಆರ್ಥಿಕವಾಗಿ, ಸಂಘಟನಾತ್ಮಕವಾಗಿ ಬಲಾಢ್ಯವಾಗಿರುವ ನಾಯಕರು ಕಾಣಿಸುವುದಿಲ್ಲ. ಕಾಂಗ್ರೆಸ್‍ನಲ್ಲಿ ಎಸ್ಸೆಂ ಕೃಷ್ಣ ನಂತರ ಪ್ರಭಾವ ಹೊಂದಿರುವ ಒಕ್ಕಲಿಗ ನಾಯಕರಿರಲಿಲ್ಲ. ಆ ಜಾಗಕ್ಕೆ ಸಧ್ಯಕ್ಕೆ ಡಿಕೆಶಿ ಸೂಟೆಬಲ್ ಎನ್ನಲಾಗುತ್ತಿದೆ. ದೊಡ್ಡವರೆಲ್ಲರಿಗೂ ವಯಸ್ಸಾಗಿತ್ತು. ಇರುವವರಲ್ಲಿ ಕಚ್ಛಾಟಗಳು ಮಿತಿಮೀರಿವೆ. ಪದವಿ, ಜಾತಿ, ಅಧಿಕಾರದ ಅಮಲು ಆವರಿಸಿಕೊಂಡಿದೆ. ಖುದ್ದಾಗಿ ವಿವಾದ ಮಾಡಿಕೊಂಡಿರುವ ಸಿದ್ರಾಮಯ್ಯನವರನ್ನು ಕಂಡರೇ ಆಲ್‍ಮೋಸ್ಟ್ ಮೂಲ ಕಾಂಗ್ರೆಸ್ ನಾಯಕರಿಗೆ ಆಗುವುದಿಲ್ಲ. ಆಕಡೆ ಸಿದ್ದಣ್ಣನೂ ಬೇಡ, ಈ ಕಡೆ ಪರಮಣ್ಣನೂ ಬೇಡ ಅಂತ ಡಿಕೆಶಿಗೆ ಹೈಕಮಾಂಡ್ ಮಣೆ ಹಾಕಿದೆ.

ಕಾಂಗ್ರೆಸ್‍ಗೆ ನೇರ ಸವಾಲು ಅಂತಿದ್ದರೇ ಅದು ಬಿಜೆಪಿ. ಆದರೆ ಹೆಚ್ಚಾಗಿ ಇಲ್ಲಿ ಕಾಂಗ್ರೆಸ್, ಬಿಜೆಪಿ ಅಧಿಕಾರಕ್ಕೇರಲು ಜೆಡಿಎಸ್ ಸಾಥ್ ಬೇಕು. ಜೆಡಿಎಸ್ ಸಪೋರ್ಟ್ ಪಕ್ಷ ಆಗಿರುವುದರಿಂದ ಕಾಂಗ್ರೆಸ್ ಡಿಕೆಶಿಗೆ ಪಟ್ಟ ಕೊಡುವುದರ ಹಿಂದಿರುವುದು ಅವರು ಒಕ್ಕಲಿಗರು ಎಂಬ ಕಾರಣಕ್ಕಲ್ಲ. ಸಧ್ಯಕ್ಕೆ ಪ್ರಭಾವ ಇರುವ ನಾಯಕ ಅಂತ ಅವರಿಗೆ ಅವಕಾಶ ಕೊಡಲಾಗುತ್ತಿದೆ. ಕ್ಯಾಬಿನೆಟ್ ಸಚಿವರಾಗಿರುವ ಡಿಕೆಶಿ ಒಕ್ಕಲಿಗರ ಪ್ರಶ್ನಾತೀತ ನಾಯಕ ದೇವೇಗೌಡರ ಕೋಟೆಗೆ ಲಗ್ಗೆಯಿಡುತ್ತಾರೆ ಎನ್ನುವುದು ಊಹಿಸಲಸಾಧ್ಯ..!. ಉಳಿದ ಎರಡುವರ್ಷದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮಾಡಬೇಕಿರುವುದು ಸಣ್ಣ ಮ್ಯಾಜಿಕ್ ಅಲ್ಲ. ಸಿದ್ದರಾಮಯ್ಯನವರ ಮಂದಗಾಮಿ ನಿಲುವು ಬದಲಿಸಿಕೊಂಡು ತೀವ್ರಗಾಮಿಯಾಗಬೇಕು. ಹಾಗಂತ ಕಳೆದ ಮೂರು ವರ್ಷದಿಂದ ಅವರಿಗೆ ಹೈಕಮಾಂಡ್ ಹೇಳುತ್ತಲೇ ಇದೆ. ಆದರೂ ಅದೇಕೋ ಅವರು ಶಾರ್ಪ್ ಎನಿಸುತ್ತಿಲ್ಲ. ಅವರ ಅಹಿಂದ ಸಿದ್ದಾಂತ, ಅನೇಕ ಭಾಗ್ಯಗಳಿಗಿಂತ ಎಲ್ಲ ವರ್ಗದವರನ್ನು ಸೆಳೆಯುವ ನಾಯಕತ್ವ ಬೇಕಿದೆ. ಕಳಂಕಿತರಿಗೆ ಮಂತ್ರಪದವಿ ಕೊಡಬಾರದು ಅಂತ ಡಿಕೆಶಿಯನ್ನು ದೂರವಿಟ್ಟು, ಸಂಪುಟ ಪುನಾರಚನೆಯ ವೇಳೆ ಅವಕಾಶ ಕೊಡಲಾಗಿತ್ತು. ತೀರಾ ಪ್ರತಿಷ್ಠೆಯ ಹೆಬ್ಬಾಳ ವಿಧಾನಸಭಾ ಚುನಾವಣೆಯ ಸಾರಥ್ಯವನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅಲ್ಲಿ ಸಿದ್ರಾಮಣ್ಣ, ಕೃಷ್ಣ ಕಾಳಗದಲ್ಲಿ ಕೈ ಮುರಿದಿತ್ತು.

ಮಂತ್ರಿಯಾದ ನಂತರ ಕರೆಂಟ್ ವಿಚಾರದಲ್ಲಿ ಒಂದೆರಡು ಬಾರಿ ಪವರ್ ಕಟ್ ಆಗಿದ್ದ ಡಿಕೆಶಿ ಅಸಮರ್ಥರಲ್ಲ. ಅವರಿಗೆ ಅವರದ್ದೇ ಆದ ಚಾತಿಯಿದೆ. ಜನಸಂಪರ್ಕವಿದೆ. ಎಲ್ಲಾ ವರ್ಗದವರನ್ನು ಮುಷ್ಠಿಯಲ್ಲಿ ಹಿಡಿದಿಡುವ ಶಕ್ತಿಯಿದೆ. ಎಲ್ಲಕ್ಕಿಂತ ಮಿಗಿಲಾಗಿ ರಾಜಕಾರಣದ ತಳಪಾಯವಾದ ಆರ್ಥಿಕ ಶಕ್ತಿಯಿದೆ. ಸಧ್ಯಕ್ಕೆ ಡಿಕೆಶಿ ಅವರನ್ನು ಹೊರತುಪಡಿಸಿ, ಅವರಿಗೆ ಸಮಾನ ಪ್ರಭಾವವಿರುವ ಬೇರೆ ನಾಯಕರಿಲ್ಲ. ಇದ್ದರೂ ಅವರೆಲ್ಲಾ ಕೇವಲ ಒಂದೇ ವರ್ಗಕ್ಕೆ, ಒಂದೇ ಸಿದ್ದಾಂತಕ್ಕೆ ಮೀಸಲಾದವರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕ ರಾಜಕಾರಣದ ಪ್ರಸ್ತುತ ಪರಿಸ್ಥಿತಿಯಲ್ಲಿ; ರಾಜ್ಯಕ್ಕೆ ಬೇಕಾಗಿರುವುದು ಮೇಲ್ವರ್ಗದ ನಾಯಕತ್ವ. ಹಿಂದುಳಿದವರಿಗೆ ಮಣೆ ಹಾಕುತ್ತಿದ್ದ ಕಾಂಗ್ರೆಸ್ ಮನಃಸ್ಥತಿಯೂ ಅನಿವಾರ್ಯವಾಗಿ ಬದಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕ್ಯಾಬೀ ನಹೀಂ ಎನಿಸಿಕೊಳ್ಳುತ್ತಿರುವುದರಿಂದ ಇಂತಹ ಉಪಾಯಗಳನ್ನು ಮಾಡಲೇಬೇಕಿದೆ. ಕಳೆದ ಚುನಾವಣೆಯಲ್ಲಿ ಸಂಪ್ರದಾಯವಾದರೂ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಅದು ಉಮ್ಮನ್ ಚಾಂಡಿ ಮಾಡಿಕೊಂಡ ಒಂದೆರಡು ಎಡವಟ್ಟುಗಳ ಪ್ರತಿಫಲ. ಇಲ್ಲೂ ಅದೇ ರೀತಿಯಾಗಿ ಸಿದ್ದರಾಮಯ್ಯನವರು ಹೆಸರು ಕೆಡಿಸಿಕೊಂಡಿದ್ದಾರೆ. ಕೇರಳದಂತೆ ಇಲ್ಲೂ ಒಂದೊಂದು ಟರ್ಮ್‍ಗೆ ಒಬ್ಬರು ಎಂಬಂತಹ ಸಂಪ್ರದಾಯವಿದೆ. ಹಾಗಾಗಿ ಮುಂದಿನ ಬಾರಿ ಕೈ ಮುರಿಯಲಿದೆ ಎಂಬುದು ಖಚಿತವಾಗಿದೆ. ಹಾಗಾಗಿ ಅನಿರೀಕ್ಷಿತ, ಅವಶ್ಯವಾದ ತೀರ್ಮಾನವನ್ನು ತೆಗೆದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.

ಡಿಕೆಶಿ ಸಾರಥ್ಯದಿಂದ ಕಾಂಗ್ರೆಸ್ ಮ್ಯಾಜಿಕ್ ಮಾಡುತ್ತೆ ಎನ್ನುವುದಿಕ್ಕಾಗುವುದಿಲ್ಲವಾದರೂ, ಕಾಂಗ್ರೆಸ್ ಚುರುಕಾಗುತ್ತದೆ ಎನ್ನಲಾಗುತ್ತಿದೆ. ಅಂದಕಾಲತ್ತಿಲ್ ರಾಜಕಾರಣದಿಂದ ಹೊರಬಂದು, ತಂತ್ರಗಾರಿಕೆಗಳ ಮೂಲಕ ಆಗಿರುವ ತೂತುಗಳನ್ನು ಮುಚ್ಚಿ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯುವ ಪ್ರಯತ್ನ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಡಿಕೆ ಸಾಹೇಬರಿಗೆ ಅಧಿಕಾರ ಕೊಟ್ಟ ನಂತರ ಅವರು ಜವಬ್ಧಾರಿಯನ್ನು ಹೇಗೆ ನಿರ್ವಹಿಸಬಹುದು ಎಂಬುದರ ಮೇಲೆ ಈ ಎಲ್ಲಾ ಪ್ರಶ್ನೆಗಳ ಉತ್ತರ ಅಡಗಿದೆ. ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಕೊಟ್ಟರೇ ಮೂಲ ಕಾಂಗ್ರೆಸ್ಸಿಗರು ಒಂದಾಗುತ್ತಾರೆ. ಹಾಗಂತ ವಲಸೆ ಕಾಂಗ್ರೆಸ್ಸಿಗೆ ಹಿನ್ನಡೆಯಾಗುತ್ತದೆ ಅಂತಲ್ಲ. ಕಾಂಗ್ರೆಸ್ ಉಳಿಯಲು, ಉಳಿಸಲು ಬೇಕಾದ ಕಸರತ್ತನ್ನು ಹೈಕಮಾಂಡ್ ಮಾಡುತ್ತಿದೆ. ಅಧೋಗತಿಗಿಳಿಯುತ್ತಿರುವ ರಾಷ್ಟ್ರೀಯ ಪಕ್ಷಕ್ಕೆ ಚೇತರಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದಂತೂ ಸ್ಪಷ್ಟ.

POPULAR  STORIES :

ಅರ್ಥವಾದರೆ `ಅಪೂರ್ವ..!’

ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..!

ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!

ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...