ದುಬೈ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಬೋಳಂತೂರು ನಾರ್ಶ ಮೂಲದ ಮುತ್ತಲಿಬ್ ಎಂಬವರು ದುಬೈನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಸಿಕ್ಕಿದ ಅವರ ಪಾಸ್‌ಪೋರ್ಟ್ ಆಧಾರದಲ್ಲಿ ಅವರನ್ನು ಭಾರತೀಯ ಪ್ರಜೆ ಎಂದು ಖಚಿತ ಪಡಿಸಿಕೊಂಡ ದುಬೈ ಪೊಲೀಸರು ಭಾರತೀಯ ದೂತವಾಸ ಕಚೇರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಲ್ಲದೇ ಅವರ ಬಗ್ಗೆ ಈ ವರೆಗೂ ಯಾವುದೇ ಕುಟುಂಬಸ್ಥರು ಮಾಹಿತಿ ನೀಡಿಲ್ಲ ಎಂದು ದುಬೈ ಪೊಲೀಸರು ರಾಯಭಾರಿ ಕಚೇರಿಗೆ ನೀಡಿದ ಮಾಹಿತಿಯಲ್ಲಿ ಹೇಳಿದ್ದಾರೆ.
ರಾಶಿದ್ ಹಾಸ್ಪಿಟಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇನ್ನು ಐದು ದಿನದಲ್ಲಿ ಮೃತ ದೇಹವನ್ನು ವಾರಿಸುದಾರರಿಗೆ ಒಪ್ಪಿಸಲು ವ್ಯವಸ್ಥೆ ಮಾಡಿ ಎಂದು ದುಬೈ ಪೊಲೀಸರು ಕೋರಿಕೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು. ಇದೀಗ ಅವರ ಮೃತ ಪಟ್ಟಿರುವುದನ್ನು ದುಬೈ ಪೊಲೀಸರು ಖಚಿತ ಪಡಿಸಿದ್ದಾರೆ.
ಅವರ ಮೃತ ದೇಹ ರವಾನೆಗೆ ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಪೋರಂ ( ಕೆಸಿಎಫ್) ಪರಿಶ್ರಮಿಸಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಬಂಟ್ವಾಳ ತಹಶೀಲ್ದಾರರ ಮೂಲಕ ಮೃತ ವ್ಯಕ್ತಿಯ ವಿಳಾಸ ಪತ್ತೆ ಹಚ್ಚಲಾಗಿದೆ.
ವಿವಿಧ ಸಾಮಾಜಿಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಉತ್ತಮ ಬರಹಗಾರರೂ ಆಗಿದ್ದರು. ಕರಾವಳಿಯ ಹಲವು ಪತ್ರಿಕೆಗಳಿಗೆ ಅಂಕಣ ಕೂಡ ಬರೆಯುತ್ತಿದ್ದರು.
ಇದೀಗ ಅವರ ಸಾವು ಹಲವು ಅವರ ಕಟುಂಬ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳನ್ನು ಆಘಾತಕ್ಕೆ ತಳ್ಳಿದೆ.