ಭಾರತದ ಮಾಜಿ ನಾಯಕ, ದಂತಕತೆ ಸಚಿನ್ ತೆಂಡೂಲ್ಕರ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಭಾರತದಲ್ಲಿ ಏರುತ್ತಲೇ ಇರುವ ಮಹಾಮಾರಿ ಕೊರೊನಾ ‘ಕ್ರಿಕೆಟ್ ದೇವರು’ ಸಚಿನ್‌ಗೂ ಸೋಕಿದೆ. ತನಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಸ್ವತಃ ಸಚಿನ್ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಟೂರ್ನಿಯಲ್ಲಿ ಸಚಿನ್ ಭಾಗವಹಿಸಿದ್ದರು.
ಟ್ವಿಟರ್ ಮೂಲಕ ತನಗೆ ಕೋವಿಡ್-19 ಸೋಂಕಿರುವುದನ್ನು ಟ್ವೀಟ್‌ನ ಮೂಲಕ ತಿಳಿಸಿರುವ ಸಚಿನ್ ತೆಂಡೂಲ್ಕರ್, ‘ಕೋವಿಡ್ -19 ಬಗ್ಗೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತ ನಾನು ಪರೀಕ್ಷೆಗೆ ಒಳಗಾಗುತ್ತಿದೆ. ಆದರೂ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾದ ಸಣ್ಣ ಗುಣಲಕ್ಷಣಗಳು ನನ್ನಲ್ಲಿ ಕಾಣಿಸಿಕೊಂಡಿದೆ’ ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ 21ರ ಭಾನುವಾರ ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ, ಭಾರತದ ಮಾಜಿ ಕ್ರಿಕೆಟ್ ದಿಗ್ಗಜರಾದ ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಯೂಸೂಫ್ ಪಠಾಣ್, ಮೊಹಮ್ಮದ್ ಕೈಫ್, ವಿನಯ್ ಕುಮಾರ್, ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ, ಶ್ರೀಲಂಕಾದ ಸನತ್ ಜಯಸೂರ್ಯ, ತಿಲಕತ್ನೆ ದಿಲ್ಶನ್, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಮೊದಲಾದವರೆಲ್ಲ ಪಾಲ್ಗೊಂಡಿದ್ದರು.
ಸಂಪರ್ಕದಲ್ಲಿದ್ದ ಇತರರು ಸದ್ಯ ಮನೆಯಲ್ಲಿದ್ದು, ಅವರ ಕೊರೊನಾ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಸಚಿನ್ ಹೇಳಿದ್ದಾರೆ. ಸದ್ಯ ತಾನು ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವುದಾಗಿ, ವೈದ್ಯರು ಹೇಳಿದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಿರುವುದಾಗಿ ಸಚಿನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯ ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಕಾದಾಡಿದ್ದವು. ಇದರಲ್ಲಿ ಇಂಡಿಯಾ ಲೆಜೆಂಡ್ಸ್ 14 ರನ್‌ಗಳ ರೋಚಕ ಜಯ ದಾಖಲಿಸಿತ್ತು. ನಾಯಕ ಸಚಿನ್ ಈ ಪಂದ್ಯದಲ್ಲಿ 30 ರನ್‌ಗಳ ಕೊಡುಗೆ ನೀಡಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದವರೆಲ್ಲಿ ತೃತೀಯ ಸ್ಥಾನದಲ್ಲಿದ್ದ ಸಚಿನ್ 233 ರನ್ ಗಳಿಸಿದ್ದರೆ, ನಂ.1 ಸ್ಥಾನಿ ತಿಲಕರತ್ನೆ ದಿಲ್ಶನ್ 271 ರನ್ ಬಾರಿಸಿದ್ದರು.