ಖಾಸಗಿ ಕಾರಿನ ಚಾಲಕ ಸಮವಸ್ತ್ರ ಧರಿಸಿಲ್ಲ ಎಂಬ ನೆಪದಲ್ಲಿ ಬಂಟ್ವಾಳ ಪೊಲೀಸರು 500 ರೂ. ದಂಡ ವಿಧಿಸಿದ್ದು, ಈ ವಿಷಯ ಪೊಲೀಸ್ ಅಧೀಕ್ಷಕರ ಸೂಚನೆ ಗಮನಕ್ಕೆ ಬರುತ್ತಿದ್ದಂತೆ ವಾಪಸ್ ನೀಡಲು ಸೂಚಿಸಿದ ಘಟನೆ ನಡೆದಿದೆ.
ಸಾಮಾನ್ಯವಾಗಿ ಖಾಸಗಿ ವಾಹನ(ಬಿಳಿ ಬೋರ್ಡ್)ದ ಚಾಲಕರಿಗೆ ಸಮವಸ್ತ್ರ ಹಾಕುವ ನಿಯಮವಿಲ್ಲ. ಈ ನಿಯಮ ಯಲ್ಲೋ ಬೋರ್ಡ್ ನಂಬರ್ ಪ್ಲೇಟ್‌ನ ವಾಹನಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಮಾ.23ರಂದು ರಾಮಲ್‌ಕಟ್ಟೆ ಎಂಬಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಸಮವಸ್ತ್ರ ಧರಿಸದ ಕಾರಣಕ್ಕೆ ಪಾಣೆಮಂಗಳೂರು ಮೂಲದ ಕಾರು ಚಾಲಕರೊಬ್ಬರಿಗೆ 500 ರೂ.ಗಳ ದಂಡ ವಿಧಿಸಿದ್ದರು.
ಮಾ. 25ರಂದು ಪೊಲೀಸ್ ನೀಡಿದ ದಂಡದ ರಶೀದಿಯನ್ನು ನೋಡಿದ ಕಾರಿನ ಚಾಲಕರ ಪುತ್ರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು. ಈ ವೇಳೆ ಎಸ್ಪಿಯವರು ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಗುರುವಾರ ದಂಡ ಹಾಕಿದ ಪೊಲೀಸರ ಮೂಲಕ ಕಾರು ಚಾಲಕನಿಗೆ 500 ರೂ. ಹಿಂತಿರುಗಿಸಲಾಯಿತು. ಎಸ್ಪಿಯವರ ಕ್ರಮಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.