ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಜಂ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾಬರ್ ಅಜಂ ಈ ಬಾರಿ ಖಚಿತವಾಗಿ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಹೋಗುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದವು. ಅದರಂತೆಯೇ ಇದೀಗ ಅಧಿಕೃತವಾಗಿ ಬಾಬರ್ ಅಜಂ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.
ಹೊಸ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸತತವಾಗಿ 1258 ದಿನಗಳ ಕಾಲ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕೊಹ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. 865 ರೇಟಿಂಗ್ ಹೊಂದಿರುವ ಬಾಬರ್ ಅಜಂ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಪಡೆದುಕೊಂಡಿರುವ ರೇಟಿಂಗ್ 857.
ಉಳಿದಂತೆ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ರೋಹಿತ್ ಶರ್ಮಾ 825 ರೇಟಿಂಗ್ ಪಡೆದುಕೊಳ್ಳುವುದರ ಮೂಲಕ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 801 ರೇಟಿಂಗ್ ಹೊಂದಿರುವ ನ್ಯೂಜಿಲೆಂಡ್‌ನ ರಾಸ್ ಟೇಲರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಆ್ಯರೋನ್ ಫಿಂಚ್ 791 ರೇಟಿಂಗ್ ಪಡೆದುಕೊಂಡು ಐದನೇ ಸ್ಥಾನದಲ್ಲಿದ್ದಾರೆ.