ವಿರಾಟ್ ಕೊಹ್ಲಿ ಪ್ರಸ್ತುತ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಐಪಿಎಲ್ ಶುರುವಾದದಾಗಿನಿಂದ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದಿಲ್ಲವೆಂಬ ಬೇಸರ ಒಂದೆಡೆಯಾದರೆ, ಇದೇ ವೇಳೆ 1258 ದಿನಗಳಿಂದ ಕಾಪಾಡಿಕೊಂಡು ಬಂದಿದ್ದ ನಂಬರ್ ಒನ್ ಏಕದಿನ ಬ್ಯಾಟ್ಸ್‌ಮನ್ ಸ್ಥಾನ ಕೂಡ ಕೊಹ್ಲಿ ಕೈ ತಪ್ಪಿ ಹೋಗಿದೆ. ವಿರಾಟ್ ಕೊಹ್ಲಿ ತಮ್ಮ ನಂಬರ್ ಒನ್ ಸ್ಥಾನ ಬಿಟ್ಟುಕೊಡುವಷ್ಟು ಮಂಕಾಗಿ ಹೋಗಿದ್ದಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ.
ವಿರಾಟ್ ಕೊಹ್ಲಿ ಅವರು 3 ಪ್ರಮುಖ ಅಂಶಗಳನ್ನು ಕಳೆದುಕೊಂಡು ಹತಾಶರಾಗಿದ್ದಾರೆ ಮತ್ತು ಒತ್ತಡದಲ್ಲಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ವಿರಾಟ್ ಕೊಹ್ಲಿ ಕುಸಿದದ್ದು, 2019ರಿಂದ ಇಲ್ಲಿಯವರೆಗೂ ಸಹ ಶತಕ ಬಾರಿಸದೇ ಇರುವುದು ಹಾಗೂ ಇದೀಗ ಅಂತಾರಾಷ್ಟ್ರೀಯ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿರುವುದು, ಈ 3 ಅಂಶಗಳು ವಿರಾಟ್ ಕೊಹ್ಲಿಯನ್ನು ಒತ್ತಡಕ್ಕೆ ತಳ್ಳಿವೆ ಎಂಬುದು ನೆಟ್ಟಿಗರ ಅಭಿಪ್ರಾಯ. ಈ ಅಂಶಗಳನ್ನು ಗಮನಿಸಿದರೆ ವಿರಾಟ್ ಕೊಹ್ಲಿ ಅವರ ಪಾಲಿಗೆ ಎಲ್ಲವೂ ಸರಿಯಿಲ್ಲ ಎನಿಸದೇ ಇರಲಾರದು.