ಮುಂಬರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಈಗಾಗಲೇ 20 ಸದಸ್ಯರ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಟೀಮ್ ಇಂಡಿಯಾ ಪ್ರಕಟಿಸಿರುವ ಈ ತಂಡದಲ್ಲಿ ಯುವ ಆಟಗಾರ ಪೃಥ್ವಿ ಶಾ ಅವರಿಗೆ ಅವಕಾಶವನ್ನು ನೀಡಿಲ್ಲ. ಇದೀಗ ಈ ಕುರಿತು ಮಾಜಿ ಆಯ್ಕೆಗಾರ ಸರಂದೀಪ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು ಪೃಥ್ವಿ ಶಾಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ನೀಡದೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾಗೆ ಈ ಹಿಂದೆ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಯಾವ ರೀತಿಯ ಕೊಡುಗೆಗಳನ್ನು ನೀಡಿದ್ದಾರೋ ಅದೇ ರೀತಿಯ ಆಟವನ್ನು ಆಡುವ ಸಾಮರ್ಥ್ಯ ಪೃಥ್ವಿ ಶಾನಲ್ಲಿದೆ. ಹೀಗಾಗಿ ಆತನನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದಿತ್ತು ಎಂದಿದ್ದಾರೆ ಸರಂದೀಪ್ ಸಿಂಗ್. ವಿರೇಂದ್ರ ಸೆಹ್ವಾಗ್ ಹೇಗೆ ಆರಂಭಿಕ ಆಟಗಾರನಾಗಿ ಟೀಮ್ ಇಂಡಿಯಾ ಪರ ದೊಡ್ಡ ರನ್ ಗಳಿಸುತ್ತಿದ್ದರೋ ಅದೇ ರೀತಿಯ ರನ್‌ಗಳನ್ನು ಗಳಿಸುವ ಸಾಮರ್ಥ್ಯ ಪೃಥ್ವಿ ಶಾನಲ್ಲಿದೆ ಎಂದು ಸರಂದೀಪ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಪೃಥ್ವಿ ಶಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದರು ಹಾಗೂ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಸಹ ಪೃಥ್ವಿ ಶಾ ಅಬ್ಬರಿಸಿದ್ದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿದ್ದ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದರು ಎಂದು ಸರಂದೀಪ್ ಸಿಂಗ್ ಹೇಳಿದರು. ಹೀಗೆ ಹೇಳುವ ಮೂಲಕ ಪೃಥ್ವಿ ಶಾ ಅವರಿಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವನ್ನು ಕೊಡಬೇಕು ಎಂದು ಸರಂದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.