ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. 43 ಸಚಿವರು ಇಂದು ಸಂಜೆ ಸಂಪುಟ ಸೇರಲಿದ್ದಾರೆ. ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಹ ನೀಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ಬುಧವಾರ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡರ ರಾಜೀನಾಮೆ ಕರ್ನಾಟಕದ ರಾಜಕೀಯದಲ್ಲಿ ಹೊಸ ಲೆಕ್ಕಾಚಾರವನ್ನು ಹುಟ್ಟು ಹಾಕಿದೆ.
ಸದಾನಂದ ಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವರು. ಈಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುವಾಗಲೇ ಸದಾನಂದ ಗೌಡರ ರಾಜೀನಾಮೆ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಒಂದು ವೇಳೆ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬದಲಾವಣೆ ಮಾಡಿದರೆ ಡಿ. ವಿ. ಸದಾನಂದ ಗೌಡ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬುದು ಸದ್ಯ ಹುಟ್ಟಿರುವ ಪ್ರಶ್ನೆ.
ರಾಮನಗರದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಬುಧವಾರ ಸದಾನಂದ ಗೌಡರ ರಾಜೀನಾಮೆ ಬಗ್ಗೆ ಹೇಳಿಕೆ ನೀಡಿದ್ದಾರೆ. “ಅವರು ಬೇರೆಯವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆದರೆ ಮುಂದೆ ರಾಜ್ಯದಲ್ಲಿ ದೊಡ್ಡ ಸ್ಥಾನ ಸಿಗಬಹುದು. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು” ಎಂದು ಹೇಳಿದರು.
ಎರಡು ಬಾರಿ ಸಚಿವರು; ಡಿ. ವಿ. ಸದಾನಂದ ಗೌಡರು 2014ರಲ್ಲಿ ಮೊದಲ ಬಾರಿ ನರೇಂದ್ರ ಮೋದಿ ಪ್ರಧಾನಿಯಾದಾಗ ರೈಲ್ವೆ ಖಾತೆ ಸಚಿವರಾದರು. ಒಮ್ಮೆ ರೈಲ್ವೆ ಬಜೆಟ್ ಸಹ ಮಂಡನೆ ಮಾಡಿದ ಹೆಗ್ಗಳಿಗೆ ಅವರದ್ದು. ಬಳಿಕ ಕಾನೂನು ಸಚಿವರಾಗಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಗಳನ್ನು ನಿರ್ವಹಣೆ ಮಾಡಿದರು.
ಅನಂತ್ ಕುಮಾರ್ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜವಾಬ್ದಾರಿಯೂ ಸದಾನಂದ ಗೌಡರ ಹೆಗಲೇರಿತು. 2019ರಲ್ಲಿ ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಸದಾನಂದ ಗೌಡರು ಮತ್ತೊಮ್ಮೆ ಪ್ರಧಾನಿ ಮೋದಿ ಸಂಪುಟ ಸೇರಿದರು.