ಟೀಮ್ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆಯಾಗಬೇಕು ಎಂಬ ಚರ್ಚೆ ಆಗೀಗ ಆಗುತ್ತಲೇಯಿದೆ. ಆದರೆ ಈಗ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಉತ್ತಮ ರೀತಿಯಲ್ಲಿ ನಾಯಕತ್ವ ನಿಭಾಯಿಸುತ್ತಿದ್ದಾರೆ. ಟೆಸ್ಟ್‌ನಲ್ಲಿ 33 ಪಂದ್ಯಗಳನ್ನು ನಾಯಕರಾಗಿ ಗೆದ್ದಿರುವ ಕೊಹ್ಲಿಯ ವಿನ್ನಿಂಗ್ ಪರ್ಸೆಂಟೇಜ್ ಚೆನ್ನಾಗಿದೆ.
ಏಕದಿನದಲ್ಲಿ 70ಕ್ಕೂ ಹೆಚ್ಚು ಮತ್ತು ಟಿ20 ಕ್ರಿಕೆಟ್‌ನಲ್ಲಿ 65ಕ್ಕೂ ಹೆಚ್ಚು ವಿಜಯದ ಶೇಕಡಾವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಆದರೂ ಕೆಲ ಪ್ರಮುಖ ಪಂದ್ಯಗಳಲ್ಲಿ ಭಾರತ ತೋತಾಗ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿರುತ್ತವೆ.
ಕೊಹ್ಲಿಯ ನಾಯಕತ್ವದಲ್ಲಿ ಭಾರತ ಪ್ರಮುಖ ಐಸಿಸಿ ಟ್ರೋಫಿ ಪಂದ್ಯಗಳನ್ನು ಗೆದ್ದಿದ್ದಿಲ್ಲ. ಆ ಹಿರಿಮೆ ಮಾಜಿ ನಾಯಕ ಎಂಎಸ್ ಧೋನಿಗೆ ಹೋಗುತ್ತದೆ. ಧೋನಿ ನಾಯಕತ್ವದಲ್ಲಿ ಭಾರತ ಎರಡು ವಿಶ್ವಕಪ್ ಅಲ್ಲದೆ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಭಾರತ ತಂಡದ ಭವಿಷ್ಯದ ನಾಯಕತ್ವದ ಬಗ್ಗೆ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕೂಡ ಮಾತನಾಡಿದ್ದಾರೆ.
“ಭಾರತಕ್ಕೆ ಭವಿಷ್ಯದಲ್ಲಿ ನಾಯಕನಾಗುವ ಸಾಮರ್ಥ್ಯ ರಿಷಭ್ ಪಂತ್‌ನಲ್ಲೂ ಇರುವುದನ್ನು ನಾನು ನೋಡುತ್ತಿದ್ದೇನೆ. ಯಾಕೆಂದರೆ ಆತ ಜಿಗಿದಾಡುತ್ತಾನೆ, ಚಿಯರ್ ಮಾಡ್ತಾನೆ, ಸುತ್ತಮುತ್ತ ಮಾತನಾಡುತ್ತಿರುತ್ತಾನೆ. ಅಷ್ಟೇ ಅಲ್ಲ, ಆತನಿಗೆ ಚತುರ ತಲೆ ಇರುವುದನ್ನು ನಾನು ಐಪಿಎಲ್‌ನಲ್ಲಿ ಆತ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕ್ಯಾಪ್ಟನ್ಸಿ ಮಾಡುವಾಗ ನೋಡಿದ್ದೇನೆ,” ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಯುವಿ ಹೇಳಿದ್ದಾರೆ.