ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರಿಗೆ ದೂಕುಡು ಸಿನಿಮಾದಲ್ಲಿ ಹೊಡೆದದ್ದಕ್ಕೆ ಬಾಲಕ ಸಿಟ್ಟಿನಿಂದ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿರುವ ಘಟನೆ ನಡೆದಿದೆ.
ತೆರೆಯ ಮೇಲಿನ ವಿಲನ್ ನಿಜ ಜೀವನದಲ್ಲಿ ಹೀರೋ ಆಗಿದ್ದನ್ನು ಗಮನಿಸಿದ್ದ ಬಾಲಕನಿಗೆ ಚಿತ್ರ ನೋಡುವಾಗ ತಲೆಬಿಸಿಯಾಗಿದೆ. ಅಷ್ಟೆಲ್ಲಾ ಜನಕ್ಕೆ ಸಹಾಯ ಮಾಡುವ ಅಷ್ಟು ಒಳ್ಳೆಯವರಿಗೇ ಈ ಹೀರೋ ಹೊಡೆಯುತ್ತಿದ್ದಾನಲ್ಲಾ ಎಂದು ಕೋಪಗೊಂಡ ಆ ಪೋರ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ.
ಸಂಗರೆಡ್ಡಿ ಊರಿನ ಏಳು ವರ್ಷದ ಬಾಲಕ ವಿರಾಟ್ನಿಗೆ ಸಿನಿಮಾವೆಂದರೆ ಪ್ರಾಣ. ಹಾಗೆಯೇ ಆತ ಕೊರೊನಾ ಸಂದರ್ಭದಲ್ಲಿ ನಟ ಸೋನುಸೂದ್ ಸಹಾಯ ಬಯಸಿ ಬಂದವರಿಗೆ ನೆರವಾಗುವುದನ್ನು ಆತ ನೋಡಿದ್ದಾನೆ. ಆತನ ಮನಸ್ಸಿನಲ್ಲಿ ಸೋನು ಸೂದ್ ಆದರ್ಶ ವ್ಯಕ್ತಿಯಾಗಿ ಕೂತುಬಿಟ್ಟಿದ್ದಾನೆ. ಆದರೆ ಬಾಲಕ ವಿರಾಟ್‍ಗೆ ದೂಕುಡು ಚಿತ್ರ ನೋಡುವಾಗ ಕಕ್ಕಾಬಿಕ್ಕಿಯಾಗಿದೆ. ಮಹೇಶ್ ಬಾಬು ಅಭಿನಯದ ಆ ಚಿತ್ರದಲ್ಲಿ ಸೋನು ಸೂದ್ ಖಳನಾಯಕನಾಗಿ ಅಭಿನಯಿಸಿದ್ದಾರೆ. ಅದರಲ್ಲಿ ಮಹೇಶ್ ಬಾಬು ಸೋನು ಸೂದ್‍ರನ್ನು ಸದೆಬಡಿಯುವದನ್ನು ನೋಡಿದ ಬಾಲಕನಿಗೆ ಕೋಪ ಬಂದಿದೆ. ಸೋನು ಸೂದ್ ಅವರಿಗೆ ಹೊಡೆತುತ್ತಿದ್ದಾರಲ್ಲ ಎಂದು ಬಾಲಕ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ.
ಬಾಲಕ ವಿರಾಟ್ ಟಿವಿ ಪುಡಿ ಮಾಡಿದ ವೀಡಿಯೋವನ್ನು ಸೋನು ಸೂದ್ ಟ್ವೀಟ್‍ನಲ್ಲಿ ಹಂಚಿಕೊಂಡು, ಅರೆ, ಟಿವಿ ಪುಡಿ ಮಾಡಬೇಡ ಮಾರಾಯ. ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳುತ್ತಾರೆ ಎಂದು ಸೋನು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸದ್ಯ ಅವರ ಈ ಟ್ವೀಟ್ ವೈರಲ್ ಆಗಿದೆ.
ಸೋನು ಸೂದ್ ಅವರು ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವುದು ಅವರ ಅಭಿಮಾನಿ ಬಳಗವನ್ನು ಹೆಚ್ಚಿಸಿದೆ. ಈ ಹಿಂದೆ ಹೈದರಾಬಾದ್‍ನಿಂದ ಒಬ್ಬ ವ್ಯಕ್ತಿ ಸೋನು ಅವರನ್ನು ಭೇಟಿಯಾಗಲು ಕಾಲ್ನಡಿಗೆಯಲ್ಲಿ ಮುಂಬೈಗೆ ಪ್ರಯಾಣಿಸಿರುವುದು ಸಖತ್ ಸುದ್ದಿಯಾಗಿತ್ತು.