ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯಿಂದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಿತು.
ಹೀಗೆ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹೆಸರನ್ನು ಖೇಲ್ ರತ್ನ ಪ್ರಶಸ್ತಿಯಿಂದ ತೆರವುಗೊಳಿಸಿದ್ದಕ್ಕೆ ಭಾರೀ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾದವು. ಟೀಕೆಗಳ ಜತೆಗೆ ಕ್ರೀಡಾ ಪಟುಗಳಿಗೆ ನೀಡಲಾಗುವ ಪ್ರಶಸ್ತಿಗೆ ಧ್ಯಾನ್ ಚಂದ್ ಅವರ ಹೆಸರನ್ನು ಇಟ್ಟಿರುವುದು ಸರಿಯಾದ ನಿರ್ಣಯ ಎಂದು ಮೆಚ್ಚುಗೆಗಳು ಸಹ ವ್ಯಕ್ತವಾದವು.
ಇದಾದ ಬೆನ್ನಲ್ಲೇ ಇದೀಗ ಇಂದಿರಾ ಕ್ಯಾಂಟೀನ್ ಹೆಸರನ್ನೂ ಸಹ ಬದಲಾಯಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳಾಗುತ್ತಿವೆ. ಈ ಚರ್ಚೆಯ ಕುರಿತು ಇದೀಗ ಸುಧಾಕರ್ ಅವರು ಪ್ರತಿಕ್ರಿಯಿಸಿದ್ದು ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಿದರೆ ತಪ್ಪೇನು ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಈ ಮೂಲಕ ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸುವ ಸಾಧ್ಯತೆಯಿದೆ ಎಂಬ ಮುನ್ಸೂಚನೆಯನ್ನು ಸುಧಾಕರ್ ನೀಡಿದ್ದಾರೆ..