ಸುಮಾರು 20 ಸಾವಿರಕ್ಕೂ ಹೆಚ್ಚು ಡೋಸ್ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯನ್ನು ಹೊಂದಿರುವ ಜಯನಗರದ ಯುನೈಟೆಡ್ ಆಸ್ಪತ್ರೆ, ಸರ್ಕಾರ ನಿಗದಿಪಡಿಸಿರುವ ದರದಲ್ಲಿ (ಕೋವಿನ್ ಆಪ್‌ನಲ್ಲಿ ನಮೂದಿಸಿರುವಂತೆ 1410 ರೂ -210 ರೂ=1200 ರೂ) 210 ರೂಪಾಯಿ ರಿಯಾಯಿತಿ ನೀಡಲಿರುವುದಾಗಿ ತಿಳಿಸಿದೆ.
ಸಾಮಾಜಿಕ ಕಾಳಜಿ ಹಾಗೂ ಕೊರೊನಾ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ.
“ಬೆಂಗಳೂರು ನಗರದಲ್ಲೆಡೆ ಲಸಿಕೆಗಳ ಕೊರತೆ ಕಂಡುಬರುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್ ರೂಪಾಂತರ ವಿರುದ್ಧ ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್ ಲಸಿಕೆ ಕೊರತೆ ಹೆಚ್ಚಾಗಿದೆ. ನಮ್ಮ ಆಸ್ಪತ್ರೆಯ ಮಂಡಳಿ ವತಿಯಿಂದ ಎರಡು ತಿಂಗಳ ಹಿಂದೆ ಕೋವ್ಯಾಕ್ಸಿನ್ ಹಾಗೂ ಇತರೆ ಲಸಿಕೆಗಳಿಗೆ ಮುಂಗಡ ಹಣ ನೀಡಿ ಖರೀದಿಸಿದ್ದೆವು. ಈಚೆಗೆ ನಮ್ಮ ಆಸ್ಪತ್ರೆಗೆ 20,000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಿದೆ. ಇದರಲ್ಲಿ 5000 ಡೋಸ್ ಗಳನ್ನು ಕೊರೊನಾ ಎರಡನೇ ಅಲೆಯಲ್ಲಿ ಅತ್ಯುತ್ತಮ ಸೇವೆ ಒದಗಿಸಿದ ನಮ್ಮ ಕಲಬುರ್ಗಿ ಆಸ್ಪತ್ರೆಯಲ್ಲಿ ಬಳಸಲಿದ್ದೇವೆ” ಎಂದು ಮಾಹಿತಿ ನೀಡಿದರು