ನೈಋತ್ಯ ರೈಲ್ವೆ ವಿಜಯಪುರ ಮತ್ತು ಮಂಗಳೂರಿನ ಜನರಿಗೆ ಸಿಹಿಸುದ್ದಿ ಕೊಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು-ವಿಜಯಪುರ ರೈಲು ಸಂಚಾರ ಪುನಃ ಆರಂಭವಾಗಲಿದೆ. ಶೀಘ್ರದಲ್ಲೇ ರೈಲಿನ ವೇಳಾಪಟ್ಟಿ ಅಂತಿಮಗೊಳ್ಳಲಿದೆ. ರೈಲು ಪುನಃ ಆರಂಭಿಸಲು ನೈಋತ್ಯ ರೈಲ್ವೆ ಈಗಾಗಲೇ ಸಿದ್ಧತೆ ಆರಂಭಿಸಿದೆ. ಆದರೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲು ವೇಳಾಪಟ್ಟಿ ಪರಿಷ್ಕರಣೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಮನವಿ ಮಾಡಿದ್ದಾರೆ.
ಸದ್ಯ ಇರುವ ಪ್ರಸ್ತಾವನೆ ಪ್ರಕಾರ ವಿಜಯಪುರದಿಂದ ಹೊರಡುವ ರೈಲು ಮಂಗಳೂರಿಗೆ 12.40ಕ್ಕೆ ಆಗಮಿಸಲಿದೆ. ಸಂಜೆ 4.30ಕ್ಕೆ ಮತ್ತೆ ಹೊರಡಲಿದೆ. ಈ ವೇಳಾಪಟ್ಟಿಯಿಂದ ಕರಾವಳಿ ಜನರಿಗೆ ತೊಂದರೆ ಆಗಲಿದೆ ಎಂದು ಸಂಸದರು ರೈಲ್ವೆ ಸಚಿವರ ಗಮನ ಸೆಳೆದಿದ್ದಾರೆ. ರೈಲು ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು. ಈ ಹಿಂದೆ ಇದ್ದಂತೆ ರೈಲು ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕು. ಸಂಜೆ 5.30ಕ್ಕೆ ಇಲ್ಲಿಂದ ಹೊರಡಬೇಕು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಗಿದೆ.
ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅನಾನುಕೂಲವಾದಲ್ಲಿ ಬಂದರಿನ ಗೂಡ್‌ಶೆಡ್ ಯಾರ್ಡ್, ಉಳ್ಳಾಲ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ಪುನಃ ಜಂಕ್ಷನ್‌ಗೆ ತಂದು ವಿಜಯಪುರಕ್ಕೆ ಸಂಚಾರ ನಡೆಸಬಹುದು ಎಂದು ನಳಿನ್ ಕುಮಾರ್ ಕಟೀಲ್ ಸಲಹೆಯನ್ನು ನೀಡಿದ್ದಾರೆ.