ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ 2021ನೇ ವರ್ಷದಲ್ಲಿ ಗಣೇಶೋತ್ಸವ ಆಚರಿಸಲು 519 ಮಂಡಲಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಅನುಮತಿ ನೀಡಿದೆ.
ಮುಂಬೈನ 1,273 ಮಂಡಲಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿದ್ದು, ಈ ಪೈಕಿ 519 ಮಂಡಲಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗು ಆರಂಭಕ್ಕೂ ಮೊದಲು ಇದೇ ಮುಂಬೈನಲ್ಲಿ 3,000 ಮಂಡಲಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುತ್ತಿತ್ತು. ಆದರೆ ಇದೀಗ ಚಿತ್ರಣ ಬದಲಾಗಿದೆ.
2021ನೇ ವರ್ಷದಲ್ಲಿ ಸಪ್ಟೆಂಬರ್ 10ರಿಂದ ಆರಂಭವಾಗಲಿರುವ ಗಣೇಶೋತ್ಸವ ಹಬ್ಬ ಆಚರಿಸುವುದಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ನಿಯಮ ಮತ್ತು ಶಿಷ್ಟಾಚಾರಗಳನ್ನು ಜಾರಿಗೊಳಿಸಿದೆ. ಅದ್ಧೂರಿ ಗಣೇಶೋತ್ಸವ ಆಚರಣೆಗೆ ಸಾಕ್ಷಿಯಾಗುತ್ತಿದ ಮುಂಬೈ ಮಹಾನಗರದ ರಸ್ತೆಗಳು ಬಿಕೋ ಎನ್ನುತ್ತಿವೆ.
ಮೊದಲಿದ್ದ ಹಬ್ಬದ ಆಚರಣೆ ಕಳೆ ಈಗಿಲ್ಲ. ಗಣೇಶ ಮೂರ್ತಿಗಳಿಗೆ ಮೊದಲಿನ ರೀತಿಯಲ್ಲಿ ಬೇಡಿಕೆಯೂ ಇಲ್ಲ ಎಂದು ಪಶ್ಚಿಮ ವಿಭಾಗದಲ್ಲಿ ಮೂರ್ತಿ ತಯಾಕರ ಸಂಸ್ಥೆಯನ್ನು ಹೊಂದಿರುವ ವಿನಯ್ ಜಿಲ್ಕಾ ಹೇಳಿದ್ದಾರೆ.