ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಶಿವಮೊಗ್ಗದಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 5 ಮತ್ತು 6ಕ್ಕೆ ಕರಾವಳಿ ಮತ್ತು ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ರಾಜ್ಯ ಕರಾವಳಿಯಲ್ಲಿ ಸೆಪ್ಟೆಂಬರ್ 4ಕ್ಕೆ ಮಿಂಚು, ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸುಳಿ ಗಾಳಿ ಸೃಷ್ಟಿಯಾಗಿ ದಕ್ಷಿಣ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕರಾವಳಿಯತ್ತ ಚಲಿಸುತ್ತಿರುವುದರಿಂದ ರಾಜ್ಯದಲ್ಲಿ ವರುಣನ ಆರ್ಭಟ ಇನ್ನೂ ಕೆಲ ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.






