ನಮ್ಮ ಉತ್ತರ ಕರ್ನಾಟಕದ ಕಡೆ ಯಾರನ್ನಾದರೂ ಬೈಯ್ಯುವಾಗ ಧಾರವಾಡ ಎಮ್ಮಿ ಇದ್ದಂಗೆ ಇದೆಯಲ್ಲ ಎಂದು ಹೇಳುವುದುಂಟು. ಆದರೆ, ಇದೀಗ ಈ ಧಾರವಾಡದ ಎಮ್ಮೆಗೆ ರಾಷ್ಟ್ರಮಟ್ಟದಲ್ಲಿ ದೇಸಿಯ ತಳಿ ಸ್ಥಾನಮಾನ ದೊರೆತಿದ್ದು, ಧಾರವಾಡಿ ಎಮ್ಮೆ ದೇಶದ 18ನೇ ತಳಿಯಾಗಿ ಘೋಷಣೆ ಮಾಡಲಾಗಿದೆ.
ಸಾಮಾನ್ಯವಾಗಿ ಧಾರವಾಡ ಎಂದಾಗ ಒಮ್ಮೆಲೇ ಪೇಢಾ ನೆನಪಿಗೆ ಬರುತ್ತದೆ. ಇನ್ನು ಮುಂದೆ ಧಾರವಾಡ ಪೇಢಾ ಮಾತ್ರ ಫೇಮಸ್ ಅಲ್ಲ, ಧಾರವಾಡ ಎಮ್ಮೆ ಕೂಡಾ ಅಷ್ಟೇ ಫೇಮಸ್ ಆಗಿದೆ. ಧಾರವಾಡದ ಪೇಡಾ ತಿಂದು ಅದರ ರುಚಿ ಇಷ್ಟಪಟ್ಟವರೇ ಜಾಸ್ತಿ. ಧಾರವಾಡ ಪೇಢೆಗೆ ಅಷ್ಟೊಂದು ರುಚಿ ಬರಲು ಇದೇ ಎಮ್ಮೆಯ ಹಾಲು ಕಾರಣವಾಗಿದೆ. ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ರಾಷ್ಟ್ರಮಟ್ಟದಲ್ಲಿ ದೇಸಿ ತಳಿಯ ಸ್ಥಾನಮಾನ ನೀಡಲಾಗಿದೆ.
ದೇಶದಲ್ಲಿ ಈವರೆಗೆ 17 ದೇಸಿ ಎಮ್ಮೆ ತಳಿಗಳನ್ನು ಗುರುತಿಸಲಾಗಿತ್ತು. ಇವೆಲ್ಲವೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ವಿಶ್ವಮಟ್ಟದಲ್ಲಿಯೂ ಹೆಸರು ಮಾಡಿದ್ದವು. ಇವುಗಳ ಪೈಕಿ ಕರ್ನಾಟಕದ ಒಂದೂ ತಳಿ ಇರಲಿಲ್ಲ. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸೂಚನೆ ಮೇರೆಗೆ ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಧಾನ ಬ್ಯೂರೋ ಕಳೆದ ಸೆ. 3ರಂದು ಧಾರವಾಡ ಎಮ್ಮೆ ತಳಿಗೆ ಇಂಡಿಯಾ ಬಫೆಲೊ 0800 ಧಾರವಾಡಿ ಎಮ್ಮೆ 01018 ಎಂಬ ನೋಂದಣಿ ಸಂಖ್ಯೆ ನೀಡಿದೆ.
ಈ ನೋಂದಣಿ ಸಂಖ್ಯೆಯ ಮೂಲಕ ಇನ್ನು ಮುಂದೆ ಧಾರವಾಡದ ಎಮ್ಮೆ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ವಿಶ್ವಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗಿದೆ. ಇದು ಧಾರವಾಡ ಎಮ್ಮೆ ತಳಿಯ ಅಭಿವೃದ್ಧಿ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ನಾಂದಿ ಆಗಲಿದೆ ಎಂದು ಪಶುವೈದ್ಯ ತಜ್ಞರು ಅಭಿಪ್ರಾಯಿಸುತ್ತಾರೆ.