ಕೆಲವರಿಗೆ ಏನೇನೋ ಹವ್ಯಾಸಗಳಿರುತ್ತವೆ. ಅದೂ ಕೆಟ್ಟದೂ ಆಗಿರಬಹುದು ಅಥವಾ ಒಳ್ಳೆಯದೇ ಆಗಿರಬಹುದು. ಕೆಲ ಹವ್ಯಾಸಗಳು ಅದೆಷ್ಟು ವಿಚಿತ್ರವಾಗಿರುತ್ತವೆ ಎಂದರೆ ಕೇಳೋಕೂ ಮಜವಾಗಿರುತ್ತವೆ. ಕೆಲ ಹವ್ಯಾಸಗಳು ಅನಾವಶ್ಯಕ. ಅದರಿಂದ ವ್ಯಕ್ತಿಗಳಿಗೆ ಏನನ್ನೂ ಸಿಗುವುದಿಲ್ಲ. ಆದರೂ ಅವರು ಅದು ಮುಂದುವರಿಸಿಕೊಂಡು ಹೋಗುತ್ತಾರೆ. ಅಂಥಹದ್ದೇ ಒಂದು ಹವ್ಯಾಸ ಮುಂಬೈ ನಗರದಲ್ಲಿರುವ ಬರಹಗಾರ ಹಾಗೂ ವ್ಯಂಗಚಿತ್ರಕಾರ. ಇವರು ಸುಮಾರು 80ಕ್ಕೂ ಹೆಚ್ಚು ಪುಸ್ತಕ ಹಾಗೂ ಲೆಕ್ಕವಿಲ್ಲದಷ್ಟು ವ್ಯಂಗ್ಯ ಚಿತ್ರಗಳನ್ನು ಬರೆದಿದ್ದಾರೆ. ಇವರ ಅನೇಕ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಆದರೆ, ಯಾರೂ ಕೇಳರಿಯದ ವಿಚಿತ್ರ ಹವ್ಯಾಸವೊಂದಿದೆ. ಇದರಿಂದ ಆವರಿಗೆ ಏನೂ ಪ್ರಯೋಜನವಿಲ್ಲ ಆದರೆ ಲಕ್ಷಾಂತರ ಮನ ಗೆದ್ದಿದ್ದಾರೆ.
ಇವರ ಹೆಸರು `ಆಬಿದ್ ಸುರ್ತಿ’. ಪ್ರತಿ ಭಾನುವಾರ ಬಂತೆಂದರೇ ಸಾಕು. ನಗರದ ಮನೆ ಮನೆಗಳಿಗೆ ತೆರಳಿ ನಿಮ್ಮ ಮನೆಯಲ್ಲಿರುವ ನಲ್ಲಿಯಿಂದ (ನಳ) ನೀರು ತೊಟಕುತ್ತಿದೆಯಾ ಎಂದು ವಿಚಾರಿಸುತ್ತಾರೆ. ಇಲ್ಲ ಎಂದು ಪ್ರತಿಯುತ್ತರೆ ದೊರೆತ್ತಲ್ಲಿ `ಐ ಯಾಮ್ ಸಾರಿ ಟು ಡಿಸ್ಟರ್ಬ್ ಯು’ ( ನಿಮ್ಮನ್ನು ತೊಂದರೆ ಕೊಟ್ಟಿದ್ದಕ್ಕೆ ದಯವಿಟ್ಟು ಕ್ಷಮಿಸಿ) ಎಂದು ಮತ್ತದೇ ಪ್ರಯತ್ನ ಮುಂದಿನ ಮನೆಗೆ ಮಾಡುತ್ತಾರೆ. ಯಾವ ಮನೆಯಲ್ಲಾದರೂ ಹೌದು ನಮ್ಮ ಮನೆಯಲ್ಲಿ ನಳ ಕೆಟ್ಟು ಹೋಗಿದೆ ಅದರಿಂದ ಹನಿ ಹನಿ ನೀರು ತೊಟಕುತ್ತಿದೆ ಎಂದು ಉತ್ತರ ಬಂದರೆ ಸಾಕು ಅತೀ ಹರುಷದಿಂದ ಹಿಗ್ಗಿ ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಹಾಗೇ ಮನೆಯವರಿಗೆ ನೀರು ಫೋಲಾಗುವುದರಿಂದ ಆಗುವ ತೊಂದರೆಗಳನ್ನು ವಿವರಿಸುತ್ತಾರೆ.
ಪ್ರತಿ ವಾರ ಸುಮಾರು 600 ಮನೆಗಳ ಕದ ತಟ್ಟಿ, `ನಿಮ್ಮ ಮನೆಯಲ್ಲಿರುವ ಯಾವುದಾದರೂ ನಳ ಅಥವಾ ಪೈಪಿನಿಂದ ನೀರು ತೊಟಕುತ್ತಿದಿಯಾ? ದಯವಿಟ್ಟು ಹೇಳಿ ನಾವು ಬಂದಿರುವುದೇ ಆ ಸೇವೆಗಾಗಿ’ ಎಂದು ಕೇಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಇವರು ಸುಮಾರು ಒಂದು ಸಾವಿರ ಮನೆಗಳಿಗೆ ಭೇಟಿ ನೀಡಿದ್ದಾರೆ. ಮನೆ ಮನೆಗೆ ಓಡಾಡುವುದರ ಖರ್ಚು ವೆಚ್ಚವನ್ನೂ ಇವರೇ ನೋಡಿಕೊಳ್ಳುತ್ತಾರೆ ಹೊರತು ಒಂದು ರುಪಾಯಿಯೂ ಜನರಿಂದ ಇವರು ಬೇಡುವುದಿಲ್ಲ!!.
ಇವರ ಈ ವಿಚಿತ್ರ ಹವ್ಯಾಸದಿಂದ ಮುಂಬೈ ಮಹಾನಗರಿಯಲ್ಲಿ ಸುಮಾರು 1.5 ದಶಲಕ್ಷ ಲೀಟರ್ ನೀರು ಪೋಲಾಗುವುದನ್ನು ರಕ್ಷಿಸಿದ್ದಾರೆ ಎಂದರೆ ಎಂಥವರಿಗಾದರೂ ಆಶ್ಚರ್ಯ ತರುತ್ತದೆ.
ಈ ವಿಚಿತ್ರ ಹವ್ಯಾಸ ಇವರ ತಲೆಯಲ್ಲಿ ಹೇಗೆ ಹೊಳೆಯಿತು ಎಂದು ಜನರು ಕೇಳಿದಾಗ ಇವರು ದೊಡ್ಡ ಕತೆಯನ್ನೇ ಬಿಚ್ಚಿಡುತ್ತಾರೆ. ಚಿಕ್ಕವರಿದ್ದಾಗ ಇವರ ತಾಯಿ ಒಂದು ಕೊಡ ನೀರಿಗಾಗಿ ಸುಮಾರು ಉದ್ದದ ಸಾಲಿನಲ್ಲಿ ನಿಂತು ನೀರನ್ನು ತರುವ ಪ್ರಸಂಗ ಅವರ ಮನದಲ್ಲಿದ್ದು, ಎಲ್ಲಾದರೂ ನಳದಿಂದ, ಸಿಂಟೆಕ್ಸ್ ಟ್ಯಾಂಕಿನಿಂದ ಅಥವಾ ಒಡೆದ ಪೈಪ್‍ನಿಂದ ನೀರು ಪೋಲಾಗುತ್ತಿರುವುದನ್ನು ಕಂಡರೆ ಇವರಿಗೆ ತಕ್ಷಣ ಅವರ ತಾಯಿಯ ನೆನಪಾಗುತ್ತಿತ್ತಂತೆ.
ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ವೇಸ್ಟ್ ಆದರೆ ಪ್ರತಿ ತಿಂಗಳಿಗೆ ಸುಮಾರು 1,000 ಲೀಟರ್‍ಗಳಷ್ಟು ನೀರು ಪೋಲಾಗುವುದರ ಮಾಹಿತಿಯನ್ನು ಅರಿತಿದ್ದ ಅವರ ಕಣ್ಮುಂದೆ ಸುಮಾರು 1,000 ಬಿಸ್ಲೆರಿ ನೀರಿನ ಬಾಟಲ್‍ಗಳು ಹಾದು ಹೋದ ಭಾಸವಾಯಿತಂತೆ.
2007ರಲ್ಲಿ ಅಂತಾರಾಷ್ಟ್ರೀಯ ನೀರಿನ ವರ್ಷ (ಇಂಟರ್‍ನ್ಯಾಷನಲ್ ವಾಟರ್ ಇಯರ್ ) ವಿಶ್ವದದ್ಯಾಂತ ಆಚರಿಸುತ್ತಿದ್ದ ಸಂದರ್ಭದಲ್ಲಿ ಇವರ ಕೃತಿಯೊಂದಕ್ಕೆ ಹಿಂದಿ ಸಾಹಿತ್ಯ ಸಂಸ್ಥೆ ಬಹುಮಾನ ನೀಡಿದ್ದ 1 ಲಕ್ಷದ ಹಣವನ್ನು `ಡ್ರಾಪ್ ಡೆಡ್ ಫೌಂಡೇಷನ್’ ಹೆಸರಿನಲ್ಲಿ ಎನ್‍ಜಿಓ ಸ್ಥಾಪಸಿ, `ಸೇವ್ ಎವರಿ ಡ್ರಾಪ್ ಆರ್ ಡ್ರಾಪ್ ಡೆಡ್’ ( ಪ್ರತಿ ನೀರಿನ ಹನಿಯನ್ನು ಉಳಿಸಿ ಅಥವಾ ಸಾಯಲು ಸಿದ್ಧವಾಗಿ) ಎಂಬ ಘೋಷವಾಕ್ಯದೊಂದಿಗೆ ನೀರು ಉಳಿಸುವ ಅಭಿಯಾನವನ್ನು ಚಾಲ್ತಿ ನೀಡಿದರು ಮತ್ತು ತೊಟಕುತ್ತಿರುವ ನಳವನ್ನು ಸರಿಪಡಿಸಲು ಕೊಳಾಯಿಗಾರನನ್ನು( ಪ್ಲಂಬರ್) ನೇಮಿಸಿಕೊಂಡರು.
ಈ ಸಮಾಜ ಸೇವಕದ ಕಾಯಕಕ್ಕೆ ಮೊದಲ ಹೆಜ್ಜೆಯನ್ನಿಟ್ಟಾಗ ತಮಗಾಗಿರುವ ವಿಜ್ಞವನ್ನು ಅವರು ಎಂದಿಗೂ ಮರೆಯುವುದಿಲ್ಲ. ಇವರು ಅಂದುಕೊಂಡಂತೆ ಆ ಸಂಸ್ಥೆಯನ್ನು ನಡೆಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಇವರು ಭೇಟಿ ನೀಡಿದ ಮೊದಲ ಮನೆಯಲ್ಲಿ ಇಬ್ಬರು ಮಹಿಳೆಯರಿದ್ದು, ಅವರಿಂದ ಚೆನ್ನಾಗಿ ಉಗಿಸಿಕೊಂಡ ಪ್ರಸಂಗವಿದೆ. ಈ ಸಮಸ್ಯೆಯನ್ನು ಮನಗಂಡ ಅವರು ಒರ್ವ ಮಹಿಳೆಯನ್ನು ತಮ್ಮ ಜತೆ ತೆರಳಲು ನೇಮಿಸಿಕೊಂಡರು.
ಈ ವಿಚಿತ್ರ ಕಾಯಕದಿಂದ ಕುಟುಂಬದವರು, ಬಂಧು ಬಳಗದವರು ಹಾಗೂ ಸ್ನೇಹಿತರು ರೋಸಿಹೋದ ಪ್ರಸಂಗವೂ ಇದೆ. `ನೀನೇನು ಗಂಗೆಯನ್ನು ರಕ್ಷಿಸುತ್ತಿಲ್ಲ. ಕೇವಲ ನಳದ ನೀರಷ್ಟೇ’ ಎಂದು ಚುಡಾಯಿಸಿದ್ದಿದೆ. ಕೇವಲ ಈ ಕಾಯಕದಿಂದ ನಿನಗೇನೂ ದೊರಕಲಾರದು. ಸುಮ್ಮನೆ ಕಾಲಹರಣ ಮಾಡಬೇಡ ಎಂದು ಬುದ್ಧವಾದ ಹೇಳಿದ್ದವರೂ ಇದ್ದಾರೆ. ಸುಮ್ಮನೆ ಕುಳಿತು ನೀನು ನಿನ್ನ ಪೇಂಟಿಂಗ್ ಹವ್ಯಾಸವನ್ನು ಮುಂದುವರೆಸಬಾರದೇ ಎಂದು ಬೈದವರೂ ಇದ್ದಾರೆ. ಈ ಕಾಯಕದಿಂದ ನಿನಗೆ ಹಣ ಎಲ್ಲಿಂದ ಬರುತ್ತದೆ ನೀನು ನೇಮಿಸಿಕೊಂಡಿರುವ ಕೊಳಾಯಿಗಾರ ಮತ್ತು ಸ್ವಯಂ ಸೇವಕಿಗೆ ಹಣ ಎಲ್ಲಿಂದ ಕೊಡುತ್ತೀಯಾ ಎಂದು ಅವರ ಬಂಧು ಮಿತ್ರರು ಚಿಂತೆಗೊಳಗಾದವರೂ ಇದ್ದಾರೆ.
ಆದರೆ, ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಸುರ್ತಿ ತನ್ನ ಕಾಯಕವನ್ನು ಮುಂದುವರೆಸುತ್ತಾ ಅವರು ಹೀಗೆ ಹೇಳುತ್ತಾರೆ `ಮನುಷ್ಯರು ನಿಷ್ಠೆಯಿಂದ ಒಳ್ಳೆಯ ಕರ್ತವ್ಯ ಮಾಡಿದಾಗ, ಇಡೀ ವಿಶ್ವವೇ ನಿನ್ನ ಹಿಂದೆ ಬರುತ್ತದೆ. ಅದಷ್ಟೇ ಅಲ್ಲದೇ ದೇವರು ನಿಮಗೆ ಹಣದ ಸಹಾಯ ಮಾಡುತ್ತಾನೆ’. ಆಶ್ಚರ್ಯವೆಂಬಂತೆ ಈ ನಂಬಿಕೆ ಅವರಿಗೆ ಕೈ ಕೊಟ್ಟಿಲ್ಲ.
ಹಣದ ನಿರ್ವಹಣೆಯನ್ನು ಚೆನ್ನಾಗಿ ಅರಿತಿರುವ ಇವರು, ಸುಖಾಸುಮ್ಮನೆ ಹಣವನ್ನು ಖರ್ಚು ಮಾಡುವುದಿಲ್ಲ. ಪ್ರತಿ ಬಾರಿ ಕೆಲಸ ನಿರ್ವಹಣೆ ಮಾಡಿದಾಗ ಇವರು ಕೊಳಾಯಿಗಾರ ಮತ್ತು ಸ್ವಯಂ ಸೇವಕಿಗೆ ತಲಾ 500 ರುಪಾಯಿ ನೀಡುತ್ತಿದ್ದು, ಉಳಿದ ಹಣವನ್ನು ಇತರೆ ವಸ್ತುಗಳ ಖರ್ಚಿಗೆ ಉಪಯೋಗಿಸುತ್ತಿದ್ದಾರೆ. ಕಷ್ಟದ ಪರಿಸ್ಥಿತಿ ಎದುರಾದಾಗ ಆ ದೇವರು ಯೋಗ್ಯವಾದ ಜನರನ್ನು ಕಳುಹಿಸಿ ಅವರಿಂದ ಹಣದ ಸಹಾಯ ಕೊಡಿಸುತ್ತಾನೆ. ನಾನು ಒಂದು ರುಪಾಯಿಯನ್ನು ಕೇಳದಿದ್ದರೂ, ಅವರಿಂದ ಚೆಕ್‍ಗಳು ಬರುತ್ತವೆ ಎಂದು ಹೇಳುತ್ತಾರೆ. ಈಗೀಗಂತೂ ನನ್ನ ಸಹಾಯಕರು ನನ್ನಿಂದ ಹಣವನ್ನು ಪಡೆಯುತ್ತಿಲ್ಲ. ಹೀಗಾಗಿ ಆ ಹಣವನ್ನು ನಾವು ಉಳಿಸುತ್ತಿದ್ದೇವೆ ಜತೆಗೆ ಈ ಹಣದಿಂದ ಕೊಳಚೆ ಪ್ರದೇಶಗಳಲ್ಲಿ ನೀರಿನ ಸೌಲಭ್ಯ ದೊರಕಿಸಿಕೊಡುವಂತೆ ಮಾಡುತ್ತಿದ್ದೇವೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಾರೆ.
ಕೆಲವು ವರ್ಷಗಳ ಹಿಂದೆ ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕರೆಸಿ ಇವರನ್ನು ಒಂದೂವರೆ ಕೋಟಿ ರುಪಾಯಿಯನ್ನು ನೀಡಿದ್ದರು. ಹೀಗಾಗಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇವರನ್ನು ಗುರುತಿಸುತ್ತಿದ್ದು,
ಎಲ್ಲಿಯಾದರೂ ನೀರಿನ ಸಮಸ್ಯೆ ಕಂಡು ಬಂದಲ್ಲಿ ಇವರನ್ನು ಕರೆಯಿಸಿಕೊಳ್ಳುವವರೂ ಇದ್ದಾರೆ.
ಇವರ ವಿಶೇಷ ಕಾಯಕವನ್ನು ಗಮನಿಸಿದ ವಿದೇಶಿಗರೂ ಹಲವಾರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಜರ್ಮನಿಯ ತಂಡವೊಂದು ಇವರನ್ನು ಆ ದೇಶಕ್ಕೆ ಕರೆಸಿ, `ವಾಟರ್ ಶಾರ್ಟೆಜ್ ಇನ್ ಬಾಂಬೆ: ಸ್ಟ್ರಗಲ್ ಫಾರ್ ದಿ ಲಾಸ್ಟ್ ಡ್ರಾಪ್’ ಎಂಬ ಕಿರುಚಿತ್ರ ಮಾಡಿ ಐರೋಪ್ ರಾಷ್ಟ್ರಗಳಲ್ಲಿ ಎಲ್ಲ ಟಿವಿ ಚಾನೆಲ್‍ಗಳಲ್ಲಿ ಬಿತ್ತರಣ ಮಾಡಿದ್ದಾರೆ.
ಇವರು ಯಾರನ್ನೂ ಬೋಧಿಸದಿದ್ದರೂ ಒಂದು ಸಂದೇಶವನ್ನು ಮಾತ್ರ ಇವರು ಕೊಡುವುದಾಗಿ ಹೇಳಿಕೊಂಡಿದ್ದಾರೆ. `ನೀವು ಇರುವ ಸ್ಥಳಗಳಿಂದ ಗಂಗೆಯನ್ನೋ ಅಥವಾ ಯಮುನೆಯನ್ನೋ ಸಂರಕ್ಷಿಸಲು ಸಾಧ್ಯವಿಲ್ಲ. ಆದರೆ, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ನೀರು ಪೋಲಾಗುವುದನ್ನು ತಡೆಯಬಹುದು. ಯಾಕಂದರೆ ಒಂದೊಂದು ನೀರಿನ ಹನಿಯೂ ಯೋಗ್ಯವಾದದ್ದು’.
ಕನ್ನಡದಲ್ಲಿ ಪ್ರಸಿದ್ಧ ಗಾದೆಯೊಂದಿದೆ `ಹನಿ ಹನಿ ನೀರು ಸೇರಿದರೆ ಹಳ್ಳ, ಹಳ್ಳ ಹಳ್ಳ ಸೇರಿದರೆ ಸಮುದ್ರ’. ಈ ಮಾತು ಇವರ ಈ ಸಮಾಜ ಸೇವೆಯಿಂದ ನಿಜವೆನ್ನಿಸುತ್ತದೆ. ಬೇಸಿಗೆ ಬಂತೆಂದರೆ ಸಾಕು ಹನಿ ನೀರಿಗಾಗಿ ಪರಿತಪಿಸುವ ಹಾಗೂ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿರುವ ಈ ಸಂದರ್ಭಗಳಲ್ಲಿ ಇವರಂತಹ ಹವ್ಯಾಸಿ ಕಾರ್ಯಕರ್ತರು ದೇಶದದ್ಯಾಂತ ಹಾಗೂ ಪ್ರತಿ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಒಂದಿಬ್ಬರಾದರೂ ಇದ್ದರೆ, ಎಷ್ಟೊಂದು ನೀರು ಉಳಿಸಬಹುದೆಂದು ಯೋಚಿಸಿ.
- ವಿಶು
POPULAR STORIES :
ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?
ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!
ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!
ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?