ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸುವ ಮೈಸೂರು ಜಿಲ್ಲಾಡಳಿತದ ನಡೆಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ದೇವಾಲಯಗಳನ್ನು ಒಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾಡಳಿತ ಮಾತ್ರವಲ್ಲದೇ, ತಮ್ಮ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ತಮ್ಮದೇ ಪಕ್ಷದ ನಾಯಕರಿಗೂ ಟಾಂಗ್ ಕೊಟ್ಟಿದ್ದಾರೆ. ವಕ್ಫ್ ಬೋರ್ಡ್ ಮಾದರಿಯಲ್ಲಿ, ಹಿಂದೂ ದೇವಾಲಯ ರಕ್ಷಣೆಗೆ ಒಂದು ಪ್ರತ್ಯೇಕ ಬೋರ್ಡ್ ಮಾಡಬೇಕು. ಪ್ರತ್ಯೇಕ ಬೋರ್ಡ್ ಸ್ಥಾಪಿಸಿದರೆ ಈ ರೀತಿ ಸಮಸ್ಯೆ ಇರಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸುಪ್ರೀಂ ಕೋರ್ಟ್ ದೇವಾಲಯವನ್ನು ಒಡೆಯಲು ಹೇಳಿಲ್ಲ. ಉಚ್ಚಗನಿ ಮಹದೇವಮ್ಮ ದೇಗುಲ ರಸ್ತೆಗೆ ಅಡ್ಡಿಯಾಗುತ್ತಿರಲಿಲ್ಲ. ಅದು ಐತಿಹಾಸಿಕ ದೇಗುಲ, ಅದನ್ನು ತೆರವು ಮಾಡಿದ್ದಾರೆ. ಮೂಲ ವಿಗ್ರಹ ಸ್ಥಳಾಂತರಿಸದೆ ನೆಲಸಮ ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಸಿಎಂ ಬೊಮ್ಮಾಯಿಗೆ ತಿಳಿಸಿದ್ದೇನೆ. ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕೆಂದು ಸಿಎಂಗೆ ಕೇಳಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೈಸೂರಿನಲ್ಲಿ ದೇಗುಲಗಳ ತೆರವು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸುಪ್ರಿಂ ಕೋರ್ಟ್ ಆದೇಶ ಎಂದು ಅಧಿಕಾರಿಗಳು ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ವಿರುದ್ಧ ಮತ್ತೆ ಕಿಡಿಕಾರಿದರು.