”ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ, ಪಟ್ಟಭದ್ರ ಹಿತಾಸಕ್ತಿಗಳ, ಅರಾಜಕತೆ ಸೃಷ್ಟಿಸುವ, ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತ ಸಂಘಟನೆ ಹೆಸರಿನಲ್ಲಿ 3 ಪ್ರಮುಖ ಕೃಷಿ ಮಸೂದೆಗಳನ್ನು ವಿರೋಧಿಸಿ 19ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 100ಕ್ಕೂ ಹೆಚ್ಚು ಸಂಘಟನೆಗಳು ದೇಶದ ಉದ್ದಗಲಕ್ಕೆ ಕರೆ ಕೊಟ್ಟಿದ್ದ ಭಾರತ ಬಂದ್‌ಗೆ ರೈತರ ಬೆಂಬಲ ಸಿಕ್ಕಿಲ್ಲ” ಎಂದರು.
“ಜೊತೆಗೆ ರೈತರು ಬಂದ್ ವಿಫಲಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿ ಸುಧಾರಣಾ ಕ್ರಮಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಾಮಾಣಿಕತೆ ಮತ್ತು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕೆಂಬ ಅವರ ಹಂಬಲವನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಸಿ.ಟಿ. ರವಿ ಹೇಳಿದರು.