ದರ್ಶನ್ ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಗೆ ಹಾಕುವುದು ಸಾಮಾನ್ಯ. ದರ್ಶನ್ ಮನೆಯ ಮುಂದೆ, ಚಿತ್ರೀಕರಣದ ಸೆಟ್‌ನಲ್ಲಿ, ಯಾವುದಾದರೂ ಕಾರ್ಯಕ್ರಮಗಳಿಗೆ ಹೋದಾ ಎಲ್ಲೆಡೆ ಅವರನ್ನು ನೋಡಲು ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ದರ್ಶನ್ ರಸ್ತೆಯಲ್ಲಿ ಓಡಾಡುವಾಗಲೂ ಅಭಿಮಾನಿಗಳು ಬಿಡುವುದಿಲ್ಲ.
ತಾವು ರಸ್ತೆಯಲ್ಲಿ ಓಡಾಡುವಾಗ ಅಭಿಮಾನಿಗಳು ತಮ್ಮನ್ನು ಫಾಲೋ ಮಾಡಬಾರದು ಎಂದು ಈಗಾಗಲೇ ಹಲವು ಬಾರಿ ದರ್ಶನ್ ಎಚ್ಚರಿಕೆ ನೀಡಿದ್ದಾರೆ. ಆದರೂ ಕೆಲವು ಅಭಿಮಾನಿಗಳು ಈ ಹುಚ್ಚಾಟ ಬಿಟ್ಟಿಲ್ಲ.
ದರ್ಶನ್ ತಮ್ಮ ಕುಟುಂಬದೊಂದಿಗೆ ತಮ್ಮ ಕಾರಿನಲ್ಲಿ ಎಲ್ಲಿಗೋ ತೆರಳುತ್ತಿರಬೇಕಾದರೆ ಕೆಲವು ಅಭಿಮಾನಿಗಳು ಬೈಕ್‌ಗಳಲ್ಲಿ ದರ್ಶನ್ ಅವರನ್ನು ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳಿಗೆ ಬೈದು ಬುದ್ದಿ ಹೇಳಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಜೀಪ್ ಡ್ರೈವಿಂಗ್ ಮಾಡುತ್ತಿದ್ದ ದರ್ಶನ್, ಅಭಿಮಾನಿಗಳ ಹುಚ್ಚಾಟ ಗಮನಿಸಿ ಗಾಡಿಯ ವೇಗ ತಗ್ಗಿಸಿ, ”ಏನೋ ಆಟ ಆಡ್ತಾ ಇದ್ದೀಯೇನೊ? ಮೊಬೈಲ್ ಇಡೊ ಕೆಳಗೆ, ನಿಮಗೆಲ್ಲ ಎಷ್ಟು ಬುದ್ಧಿ ಹೇಳಿದ್ರೂ ಗೊತ್ತಾಗಲ್ವೇನೋ” ಎಂದು ಬೈದಿದ್ದಾರೆ. ದರ್ಶನ್ ಅವರಿಂದ ಬೈಸಿಕೊಂಡ ಬಳಿಕ ಆ ಅಭಿಮಾನಿ ಹಿಂದೆ ಬಂದಿದ್ದಾನೆ. ಆದರೂ ‘ಜೈ ಡೀ ಬಾಸ್’ ಎನ್ನುತ್ತಾ ಕಿರುಚಾಡಿದ್ದಾನೆ. ಅಭಿಮಾನಿ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ವಿಡಿಯೋದಲ್ಲಿ ದರ್ಶನ್ ಜೀಪ್ ಚಲಾಯಿಸುತ್ತಿದ್ದರೆ, ಪಕ್ಕದಲ್ಲಿಯೇ ಪತ್ನಿ ವಿಜಯಲಕ್ಷ್ಮಿ ಕುಳಿತಿದ್ದಾರೆ. ಹಿಂಬದಿಯ ಸೀಟ್‌ನಲ್ಲಿ ಮಗ ಕುಳಿತಿದ್ದಾನೆ. ಸಹಾಯಕರೊಬ್ಬರು ಸಹ ಜೊತೆಗೆ ಇದ್ದಾರೆ. ಅವರೂ ಸಹ ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಯುವಕರನ್ನು ತಡೆಯಲು ಯತ್ನಿಸಿದ್ದಾರೆ.