ಬೆಂಗಳೂರು : ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷೆ ಅಥವಾ ಸಿಎಂ ಆಗಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಖಂಡಿತಾ ಇಲ್ಲ ಎಂದಿದ್ದಾರೆ. ನಾನು ಮೊನ್ನೆ ಮೊನ್ನೆ ಸಚಿವೆ ಆಗಿದ್ದೇನೆ.
ಬೇರೆ ಬೇರೆ ಕಡೆ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬರೋದೆಲ್ಲ ಕೇವಲ ಊಹಾಪೋಹ ಮಾತ್ರ. ದೇಶದಲ್ಲಿ ರೈತರಿಗೆ ಸಹಾಯವಾಗುವ ಕೆಲಸ ಮಾಡಲು ಬಯಸುತ್ತಿದ್ದೇನೆ. ಸದ್ಯ ಆ ರೀತಿಯ ಯಾವುದೇ ಚಿಂತನೆ ಇಲ್ಲ ಎಂದು ರಾಜ್ಯ ರಾಜಕಾರಣ ಪ್ರವೇಶ ವಿಷಯವನ್ನು ತಳ್ಳಿ ಹಾಕಿದರು. ಪಠ್ಯ ಪುಸ್ತಕ ವಿಚಾರದಲ್ಲಿ ಕುವೆಂಪು, ಬಸವಣ್ಣ ಅವರನ್ನು ಅವಹೇಳನ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಸವಣ್ಣ, ಕುವೆಂಪು ಇಬ್ಬರಿಗೂ ಅವಮಾನ ಮಾಡುವ ವಿಚಾರವೇ ಇಲ್ಲ. ಸರ್ಕಾರ ಕುವೆಂಪು ಅವರಿಗೆ ಗೌರವ ಕೊಡುತ್ತಿದೆ. ಬಸವಣ್ಣ ಅಂದರೆ ವಿಶೇಷ ಗೌರವ ಇದೆ. ಪ್ರತೀ ಕಾರ್ಯಕ್ರಮದಲ್ಲಿ ಅವರನ್ನು ಪೂಜಿಸಲಾಗುತ್ತಿದೆ. ಪ್ರತಿ ಭಾರಿಯೂ ಅವರನ್ನು ಬಸವಣ್ಣ ಎಂದು ಕರೆಯುವ ಕೆಲಸ ಮಾಡೋಣ ಎಂದರು.