ಬಾಲ್ಯದಲ್ಲಿನ ನೆನಪುಗಳು ಮಾಸದ ಗಾಯ ಇದ್ದಂತೆ. ಆಗಾಗ ಅದು ಕೆರೆಯುತ್ತಾ ಇರುತ್ತದೆ. ಬಾಲ್ಯದಲ್ಲಿನ ತುಂಟಾಟ, ಒಡೆದಾಟ, ಮನಸ್ತಾಪಗಳು ಸುಲಭಕ್ಕೆ ಬಿಟ್ಟು ಹೋಗುವಂತದ್ದಲ್ಲ. ಅಂತಹ ನೆನಪುಗಳು ಇಂದು ನಮಗೆ ನಗೆ ತರಿಸಬಹುದು. ಆದರೆ ಅಂದು ಮಾತ್ರ ಅದು ನರಕ ಯಾತನೆ. ಅಂತಹದ್ದೇ ಕತೆ ನನ್ನಲ್ಲಿದೆ. ಇವತ್ತು ನಗು ಅವತ್ತು ಅಳು. ಆ ಘಟನೆ ನಾ ಹೇಳಿದ ಒಂದು ಸುಳ್ಳು ಇಂದಿಗೂ ಕಾಡುತ್ತಿದೆ.
ನನ್ನ ಪ್ರೌಢ ಶಾಲೆ ಮುಗಿದದ್ದು ಮಲೆನಾಡಿನ ಒಂದು ಸಣ್ಣ ಹಳ್ಳಿಯಲ್ಲಿ. ಇಡೀ ತರಗತಿಯ ಹುಡುಗರು ನನ್ನ ಬಳಿ ತಲೆ ತಗ್ಗಿಸಿ ನಿಲ್ಲುತ್ತಿದ್ದರು. ಕಾರಣ ಆ ಶಾಲೆಯಲ್ಲಿ ಅತ್ಯಂತ ಕುಳ್ಳ ವ್ಯಕ್ತಿ ಅಂದ್ರೆ ಅದು ನಾನೆ.. ಓದೋದ್ರಲ್ಲಿ ತುಂಬಾ ವೀಕ್ ತರ್ಲೆ ಮಾಡೋದ್ರಲ್ಲಿ ನಾನೇ ಫಸ್ಟ್.. ನನ್ನ ತುಂಟತನಕ್ಕೆ ಇಡೀ ತರಗತಿಯ ಹುಡುಗರೆಲ್ಲರೂ ನನ್ನ ಮೇಲೆ ರೇಗಾಡುತ್ತಿದ್ದರು. ಬೈತಾನೂ ಇದ್ರು. ಆದರೆ ಯಾರೂ ನನ್ನ ಮೈ ಮುಟ್ಟುತ್ತಿರಲಿಲ್ಲ. ಒಣಕಲು ದೇಹಕ್ಕೆ ಯಾರು ತಾನೆ ಕೈ ಮಾಡ್ತಾರೆ ನೀವೇ ಹೇಳಿ..? ಒಂದೇ ಏಟಿಗೆ ಎಲ್ಲಿ ನೆಲ ಕಚ್ಚಿಬಿಡುತ್ತಾನೋ ಎಂಬ ಭಯ. ಅಲ್ಲದೇ ಬರೋ ಶಿಕ್ಷಕರೂ ನನಗೆ ಕೇಳುವ ಏಕೈಕ ಪ್ರಶ್ನೆ, ಲೋ ಮನೆಲಿ ಹೊಟ್ಟೆಗೆ ಅನ್ನ ಹಾಕೊಲ್ವಾ ಮಾರಾಯ ಎಂದು. ಅಷ್ಟೊಂದು ದಡೂತಿ ದೇಹ ನಂದು. ನನ್ನ ತರ್ಲೆಗೆ ಇಡೀ ತರಗತಿಯ ಹುಡುಗರೆಲ್ಲರೂ ಕೆಂಡಾಮಂಡಲವಾದರೆ, ಅದನ್ನು ನೋಡಿ ಮಜಾ ತಗೋಳ್ತಾ ಇದ್ದೋರು ಮಾತ್ರ ಹೆಣ್ಣೈಕ್ಲು. ಆದರೆ ಈ ನನ್ನ ತುಂಟತನಕ್ಕೆಲ್ಲಾ ಬ್ರೇಕ್ ಹಾಕ್ಸಿದ್ದು ರಂಗಣ್ಣ ಮೇಷ್ಟ್ರು. ನೋಡೋದಿಕ್ಕೇನೇ ಭಯ ಹುಟ್ಟಿಸುವಂತಿದ್ದ ಆಸಾಮಿ. ಇವರು ಈ ಹಿಂದೆ ಪೊಲೀಸ್ ವೃತ್ತಿಯಲ್ಲಿದ್ದವರಂತೆ. ಅವರ ನಿಜವಾದ ಲಾಠಿ ರುಚಿ ನೋಡಿದ ಆ ಶಾಲೆಯ ಮೊದಲ ವ್ಯಕ್ತಿ ಅಂದ್ರೆ ಅದು ನಾನೇ ರೀ..
ಅಂದು ನನ್ನ ಗೆಳೆಯ ಆದರ್ಶ್ ಜೊತೆ ಜಗಳವಾಡಿಕೊಂಡಿದ್ದೆ. ಈತನನ್ನು ಏನಾದರೂ ಮಾಡ್ಲೇಬೇಕು ಅನ್ನೋ ಯೋಚನೆ ಮನದಲ್ಲಿ ಕುದೀತಾ ಇತ್ತು. ಆಗ ಒಂದು ಹಾಳೆಯಲ್ಲಿ ಆತನಿಗೆ ಎಷ್ಟು ಬೈಯ್ಯಲು ಸಾಧ್ಯವೋ ಅದೆಲ್ಲವನ್ನು ಬರೆದು ಶಿಕ್ಷಕರಿಲ್ಲದ ಸಮಯದಲ್ಲಿನ ಆ ಹಾಳೆಯನ್ನು ಆತನ ಮೇಲೆಸೆದೆ. ಅದನ್ನು ಓದುತ್ತಿದ್ದಂತೆಯೇ ಆತನ ಕಣ್ಣಲ್ಲಿ ಕಾವೇರಿ ಹರಿಯಲು ಶುರು ಮಾಡಿಬಟ್ಟಿದ್ದಳು. ಬಿಕ್ಕಿ ಬಿಕ್ಕಿ ಅಳುತ್ತಲೇ ಸ್ಟಾಫ್ ರೂಂಗೆ ಕೊಂಡೊಯ್ದ. ಅದನ್ನು ನಾನು ಬರೆದದ್ದು ಅಂತ ಹೇಳದೇ ಮೊದಲ ಬೆಂಚ್‍ನಿಂದ ಬಂದಿದ್ದು ಸಾರ್ ಎಂದು ಹೇಳಿ ವಾಪಾಸ್ಸಾಗುವ ವೇಳೆ ನನ್ನನ್ನೇ ಗುರಾಯಿಸುತ್ತಾ ಪಿಕಿ ಪಿಕಿ ನಗತೊಡಗಿದ್ದ. ಅವನನ್ನು ನೋಡುತ್ತಲೇ ನನ್ನ ಕಣ್ಣಲ್ಲಿ ಅಶ್ರುಧಾರೆ.. ಕೂಡಲೇ ಬ್ಯಾಗ್ ಹಿಡಿದು ತರಗತಿಯಿಂದ ಓಡೊಗೋಣ ಅಂದುಕೊಳ್ಳುವಷ್ಟರಲ್ಲಿ ತರಗತಿಗೆ ಎಂಟ್ರಿ ಕೊಟ್ಟೇ ಬಿಟ್ಟರು ಪಿ.ಸಿ ರಂಗಣ್ಣ ಸರ್…
ಕೈನಲ್ಲಿ ಎರಡು ಬೆತ್ತದ ಕೋಲು ಹಿಡ್ಕೊಂಡು ಯಾವನ್ಲೇ ಅದು ಬರ್ದಿದ್ದು ಬದ್ಮಾಶ್ ಎಂದು ಜೋರಾಗಿ ಅರಚಲು ಶುರು ಮಾಡಿಯೇ ಬಿಟ್ಟರು. ಎಲ್ಲಿ ಬರ್ದಿದ್ದು ನಾನೇ ಎಂದು ಗೊತ್ತಾದರೆ ನನ್ನ ಬಟ್ಟೆ ಒಗೆದ ಹಾಗೆ ಒಗೆದು ಬಿಡುತ್ತಾರೋ ಎಂಬ ಭಯದಿಂದ ಏನೂ ಗೊತ್ತಿಲ್ಲದ ಹಾಗೆ ಸುಮ್ನಿದ್ದೆ. ನಮ್ಮ ಬೆಂಚ್ ಕಡೆ ಮುಖ ಮಾಡಿ ಏಳ್ರೋ ಮೇಲೆ ಎಂದು ಹೇಳಿ ಎಲ್ಲರ ಪುಸ್ತಕದ ಹಾಳೆಗಳನ್ನು ಪರಿಶೀಲಿಸುತ್ತಾ ಬಂದರು.
ನೀನೇನೋ ಕುಳ್ಳಾ ಎಂದಾಗ ನನ್ನ ಎದೆ ನಡುಗತೊಡಗಿತು. ಆದರೂ ಇಲ್ಲಾ ಸಾರ್ ಎಂದೆ. ನೀನೆಲ್ಲಿ ಮಾಡ್ತಿಯಾ ಬಿಡು ಎಂದು ಹೇಳುತ್ತಾ ನನ್ನ ಪುಸ್ತಕದ ಕೊನೇ ಹಾಳೆಯನ್ನು ತೆಗೆದರು. ಅಲ್ಲಿ ಅರ್ಧ ಹಾಳೆ ನಾಪತ್ತೆಯಾಗಿತ್ತು. ರಂಗಣ್ಣ ಸರ್ ನನ್ನನ್ನೇ ಗುರಾಯಿಸುತ್ತಾ, ಕಳ್ಳ ಯಾರೆಂದು ಪತ್ತೆ ಹಚ್ಚಿದ್ದರು.
ನಾನಲ್ಲಾ ಸಾರ್ ಯಾರು ಮಾಡಿದ್ದೋ ನನಗೆ ಗೊತ್ತಿಲ್ಲ ಸಾರ್ ಎಂದು ಬೇಡಿಕೊಂಡಿದ್ದರೂ, ಬಿಡಲಿಲ್ಲ. ಚೋಟುದ್ದ ಇಲ್ಲ ಈಗ್ಲೇ ಸುಳ್ಳು ಬೊಗಳ್ತಿಯಾ ಕತ್ತೆ ಬಡವ ಅನ್ನುತ್ತಲೇ ನನ್ನನ್ನು ಹಣ್ಣಗಾಯಿ ನೀರುಗಾಯಿ ಮಾಡಿಬಿಟಿದ್ದರು. ಒಡೆತದ ಶಬ್ದಕ್ಕೆ ಹುಡುಗಿಯರ ಕಣ್ಣುಗಳು ಒದ್ದೆ ಯಾಗಿದ್ದರೆ, ಇಲ್ಲಿ ನನ್ನ ಇಡೀ ದೇಹವೇ ಬಸವಳಿದು ಒದ್ದೆಯಾಗಿತ್ತು. ಅವರಿಗೂ ಚಾರ್ಜ್ ತೆಗೆದು ಸುಸ್ತಾಗಿ ಈಗೆಲ್ಲಾ ಮಾಡಬಾರದು ಎಂದು ಬುದ್ದಿವಾದ ಹೇಳುವಾಗ ನನ್ನ ಅಳು ಬಿಕ್ಕಳಿಸತೊಡಗಿತು. ಮತ್ತೆ ನಾನಲ್ಲಾ ಸಾರ್ ಎಂದು ಜೋರಾಗಿ ಅಳ ತೊಡಗಿದೆ. ಅಳಬೇಡ ಬಿಡು ಎಂದು ಸಮಧಾನ ಮಾಡುತ್ತಾ ನನ್ನ ಜೇಬಿಗೆ ಇಪ್ಪತ್ತು ರುಪಾಯಿ ಲಂಚವನ್ನಿಟ್ಟು ನನ್ನ ಅಪ್ಪಿಕೊಂಡು ಸಮಾಧಾನ ಮಾಡಿದರು. ಅಂದೇ ಕೊನೆ ಅಲ್ಲಿಂದ ನನ್ನೆಲ್ಲಾ ತುಂಟಾಟಗಳಿಗೆ ಫುಲ್‍ಸ್ಟಾಪ್ ಹಾಕಿದೆ.
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!