ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಮೂವರು ಮಕ್ಕಳಿಗೆ ವಿಷ ಉಣಿಸಿ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮದ್ದೂರಿನ ಹೊಳೆಬೀದಿಯಲ್ಲಿ ನಡೆದಿದೆ. ಉಸ್ನಾ ಕೌಸರ್ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಹಾರಿಸ್, ಆಲಿಸಾ, ಅನಮ್ ಫಾತಿಮಾ ಮೃತ ಮಕ್ಕಳಾಗಿದ್ದಾರೆ.
ಗಂಡ ಅಖಿಲ್ ಅಹಮದ್ ಅಕ್ರಮ ಸಂಬಂಧಕ್ಕೆ ಬೇಸತ್ತ ಕೌಸರ್ ಈ ಕೃತ್ಯವೆಸಗಿದ್ದಾರೆ. ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ ಅಖಿಲ್ ಅಹಮದ್ ಪರ ಸ್ತ್ರೀ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.
ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದಿದ್ದು, ಕೌಸರ್-ಅಖಿಲ್ ಇಬ್ಬರನ್ನ ಪೋಷಕರು ರಾಜಿ ಮಾಡಿದ್ರು. ನಿನ್ನೆ ಬೇಗ ಮನೆಗೆ ಬರುತ್ತೇನೆ ಎಂದು ಕೆಲಸಕ್ಕೆ ಹೋಗಿದ್ದ ಅಖಿಲ್ ಸಂಜೆಯಾದ್ರು ಮನೆಗೆ ಬಾರದ ಹಿನ್ನೆಲೆ ಫೋನ್‌ನಲ್ಲಿ ಜಗಳವಾಗಿತ್ತು.
ಇದರಿಂದ ಬೇಸತ್ತ ಉಸ್ನಾ ಕೌಸರ್ ಮಕ್ಕಳಿಗೆ ವಿಷ ಹಾಕಿ, ನೇಣಿಗೆ ಶರಣಾಗಿದ್ದಾರೆ. ಇನ್ನ ಅಖಿಲ್ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪಿಸಿದ್ದು, ಸದ್ಯ ಅಖಿಲ್ ಅಹಮದ್ ಹಾಗೂ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ.
ಈ ಸಂಬಂಧ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .