ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಿದರೆ ಕೆಲವೊಮ್ಮೆ ಖಾಲಿ ಬಾಕ್ಸ್ ಗಳನ್ನು ಕಳುಹಿಸಿ ಪಂಗನಾಮ ಹಾಕುತ್ತಾರೆ ಅಂತ ಕೇಳಿದ್ವಿ. ಆದರೆ ಇಲ್ಲೊಬ್ಬ ಮಹಾಶಯ ಮಾತ್ರ ಈ ಫ್ಲಿಪ್ ಕಾರ್ಟ್ ಗೇ ಪಂಗನಾಮ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಅದೂ ಕೂಡಾ ಬರೋಬ್ಬರಿ 20 ಲಕ್ಷದಷ್ಟು ಮೋಸ ಮಾಡಿದ್ದಾನೆ.
ಹೈದರಾಬಾದ್ ಬಳಿಯಿರುವ ವನಸ್ಥಳಿಪುರಂನ ವೀರಸ್ವಾಮಿ ಎಂಬ ವ್ಯಕ್ತಿಯೇ ಫ್ಲಿಪ್ ಕಾರ್ಟ್ ಗೆ ಪಂಗನಾಮ ಹಾಕಿದ್ದಾನೆ. ಅಲ್ಲದೇ ಮೋಸ ಮಾಡಲು ಆತ ಮಾಡಿಕೊಂಡ ಐಡಿಯಾ ಕೂಡಾ ವಿಚಿತ್ರವಾದದ್ದೇ..! ಅದರಲ್ಲೂ ಫ್ಲಿಪ್ ಕಾರ್ಟ್ ನೀಡಿದ್ದ ಆಫರ್ರೇ ಈ ಘಟನೆಯಿಂದ ತಲೆಕೆಳಗಾಗುವಂತಾಗಿದೆ. ಅದೇನಪ್ಪಾ ಅಂದ್ರೆ, ಫ್ಲಿಪ್ ಕಾರ್ಟ್ ನಲ್ಲಿ ಕೊಂಡ ವಸ್ತುಗಳು ಚೆನ್ನಾಗಿಲ್ಲದಿದ್ದರೆ ಅದನ್ನು 10 ದಿನಗಳ ಒಳಗಾಗಿ ಮರಳಿಸಬಹುದು. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ವೀರಸ್ವಾಮಿ ಬೆಲೆ ಬಾಳುವ ವಸ್ತುಗಳನ್ನು ಫ್ಲಿಪ್ ಕಾರ್ಟ್ ನಿಂದ ಖರೀದಿಸಿ ಅವುಗಳನ್ನು ಎಗರಿಸಿ ಪಾರ್ಸಲ್ ಒಳಗೆ ಕಳಪೆ ವಸ್ತುಗಳನ್ನು ತುಂಬಿ `ಡೆಲಿವರಿ ಆಗಿರುವ ವಸ್ತುಗಳ ಗುಣಮಟ್ಟ ಕಳಪೆಯಾಗಿದೆ’ ಎಂದು ದೂರಿ ಅವುಗಳನ್ನು ಕಂಪನಿಗೆ ಮರಳಿಸುತ್ತಿದ್ದ. ಹಾಗೆಯೇ ಪಾರ್ಸಲ್ ನ್ನು ಪಡೆಯುವ ನೀಡಿದ್ದ ಹಣವನ್ನೂ ಮರಳಿ ಪಡೆಯುತ್ತಿದ್ದ. ಇದು ಲಭದಾಯಕವೆಂದು ತಿಳಿದ ಮೇಲೆ ದೊಡ್ಡ ಮಟ್ಟದಲ್ಲಿ ಚೀಟಿಂಗ್ ಮಾಡಲಾರಂಬಿಸಿದ. ಹೀಗಾಗಿ ನೋಡನೋಡುತ್ತಿದ್ದಂತೆ ಫ್ಲಿಪ್ ಕಾರ್ಟ್ ಗೆ ಸುಮಾರು 20 ಲಕ್ಷ ರೂಪಾಯಿಯಷ್ಟು ಪಂಗನಾಮ ಹಾಕಿದ.
ಇಲ್ಲಿಯವರೆಗೆ ವೀರಸ್ವಾಮಿ 20 ತಿಂಗಳಲ್ಲಿ ಸುಮಾರು 200 ಬಾರಿ ವಸ್ತುಗಳನ್ನು ಖರೀದಿಸಿದ್ದ. ಇದರಿಂದ ಫ್ಲಿಪ್ ಕಾರ್ಟ್ ನ ಹೈದರಾಬಾದ್ ಬ್ರಾಂಚ್ ಗೆ 20 ಲಕ್ಷ ರೂಪಾಯಿ ಲಾಸ್ ಆಗಿತ್ತು. ಆದ್ದರಿಂದ ಅವರು ವನಸ್ಥಲಿಪುರಂನ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆಗಲೇ ಹೊರಬಿದ್ದಿದ್ದು ವೀರಸ್ವಾಮಿ ಮಾಡಿದ ವೀರಪ್ರತಾಪ. ಸಧ್ಯಕ್ಕೆ ವೀರಸ್ವಾಮಿಯನ್ನು ಪೊಲೀಸರು ಸರಿಯಾಗಿ ಬೆಂಡೆತ್ತುತ್ತಿದ್ದು, ಆತನಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ತಾನೇ ತೋಡಿದ ಗುಂಡಿಯಲ್ಲಿ ತಾನೇ ಬಿದ್ದ ಎಂಬ ಮಾತು ನೆನಪಿಗೆ ಬರುತ್ತದಲ್ಲವೇ..?
- ರಾಜಶೇಖರ ಜೆ
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com