ಚೀನಾದ ಪ್ರಜೆಗಳು ಮೊದಲು ಬಡ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ, ನಂತರ ಅವರನ್ನು ಮದುವೆಯಾಗಿ ಚೀನಾದಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಾರೆ ಎಂಬ ಅಂಶ ಬಹಿರಂಗಗೊಂಡಿದೆ. ಯುರೇಷಿಯನ್ ಟೈಮ್ಸ್ ವರದಿಯ ಪ್ರಕಾರ, ಜುಲೈ 1, 2023 ರಂದು, ಬಡ ವಿಧವೆ ಮಹಿಳೆ ತನ್ನ 19 ವರ್ಷದ ಮಗಳನ್ನು ಚೀನಾದ ಪ್ರಜೆ ಕುಯಿ ಪೊ ವೀ ಎಂಬಾತನಿಗೆ ಬಾಂಗ್ಲಾದೇಶದ ಉತ್ತರ ಜಿಲ್ಲೆಯ ಚುಡಂಗಾದಲ್ಲಿ ಮದುವೆ ಮಾಡಿಕೊಟ್ಟಿದ್ದರು. ಸುಮಾರು 6 ತಿಂಗಳ ನಂತರ, ಕುಯಿ ಪೊ ವೀ ತನ್ನ ಹೆಂಡತಿಯನ್ನು ಚೀನಾಕ್ಕೆ ಕರೆದೊಯ್ದು ವೇಶ್ಯಾವಾಟಿಕೆಗೆ ಹೋಗುವಂತೆ ಒತ್ತಾಯಿಸಿದ್ದಾನೆ. ಸಂತ್ರಸ್ತೆಯ ತಾಯಿ ಮಾರ್ಚ್ 31, 2024 ರಂದು ಢಾಕಾ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಾಯಿ, ತನ್ನ ಮಗಳು ಮಾರ್ಚ್ 11, 2024 ರಂದು ಕರೆ ಮಾಡಿ ತನ್ನ ಚೀನಾದ ಪತಿ ಮತ್ತು ಅವನ ಸಹಚರರು ತನಗೆ ಸಾಕಷ್ಟು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಪ್ರತಿದಿನ 10-15 ಗ್ರಾಹಕರ ಮುಂದೆ ತನ್ನನ್ನು ಹಾಜರುಪಡಿಸಿ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಸೆಕ್ಸ್‌ಗೆ ಒಪ್ಪಿಗೆ ಸೂಚಿಸದಿದ್ದರೆ ದೇಹದ ಅಂಗಾಂಗಗಳನ್ನು ಮಾರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ತನ್ನ ಮಗಳು ಮಾತ್ರವಲ್ಲದೇ ಇತರ 4 ಬಡ ಮಹಿಳೆಯರಿಗೂ ಇದೇ ರೀತಿಯಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.