ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ರಾತ್ರಿ ತೆರೆ ಬೀಳಲಿದೆ. ಪ್ಯಾರಿಸ್‌ನ ಹೃದಯ ಭಾಗವಾದ “ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂ’ನಲ್ಲಿ, ಭಾರತೀಯ ಕಾಲಮಾನದಂತೆ ರಾತ್ರಿ 12.30ಕ್ಕೆ ಸಮಾರೋಪ ಸಮಾರಂಭ ಆರಂಭವಾಗಲಿದೆ.
ಸ್ಟೇಟ್ ಡಿ ಫ್ರಾನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಲ್ಲಾ ದೇಶಗಳ ಆಯ್ದ ಕ್ರೀಡಾಪಟುಗಳು ಕಾಣಿಸಿಕೊಳ್ಳಲಿದ್ದಾರೆ.
ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಹಾಗೂ ಶೂಟರ್ ಮನು ಭಾಕರ್ ಕಾಣಿಸಿಕೊಳ್ಳಲಿದ್ದಾರೆ.
ಸಮಾರಂಭದಲ್ಲಿ “ನೂರಕ್ಕೂ ಹೆಚ್ಚು ಪ್ರದರ್ಶಕರು, ಅಕ್ರೋಬ್ಯಾಟ್‌ಗಳು, ನೃತ್ಯಗಾರರು ಮತ್ತು ಸರ್ಕಸ್ ಕಲಾವಿದರು” ಭಾಗವಹಿಸಲಿದ್ದಾರೆ ಎಂದು ಸಂಘಟಕರ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶನಿವಾರದ ಪಂದ್ಯಗಳೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಈ ಬಾರಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿರುವುದು ಭಾರತದ ಸರ್ವಶ್ರೇಷ್ಠ ಸಾಧನೆ. ಹಾಗೆಯೇ ಶೂಟಿಂಗ್ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಒಟ್ಟು 6 ಪದಕಗಳೊಂದಿಗೆ ಭಾರತ ತಂಡವು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಅಂತ್ಯಗೊಳಿಸಿದೆ.