ಬೆಂಗಳೂರು: ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೋಗುವ ವೇಳೆ ಯುವತಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡು ಮೂಲದ ಮುಕೇಶ್ವರನ್ ಆರೋಪಿಯಾಗಿದ್ದು, ಈ ಕೇಸ್ ಸಂಬಂಧ ಪೊಲೀಸರು ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯು ನಗರದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದನು. ಕೃತ್ಯದ ಬಳಿಕ ಆಡುಗೋಡಿಯ ಚಂದ್ರಪ್ಪ ನಗರದಲ್ಲಿರುವ ತನ್ನ ಮನೆಯಲ್ಲಿದ್ದ.
ಶನಿವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಕೋರಮಂಗಲದ ಪಬ್ಗೆ ಪಾರ್ಟಿಗೆ ಬಂದಿದ್ದ ಯುವತಿ, ಮನೆಗೆ ತೆರಳುವಾಗ ಆರೋಪಿಯ ಬಳಿ ಲಿಫ್ಟ್ ಕೇಳಿದ್ದಳು. ಲಿಫ್ಟ್ ಕೊಡುವ ನೆಪದಲ್ಲಿ ಆಕೆಯನ್ನು ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿ, ಯುವತಿಯ ಬಟ್ಟೆ ಹರಿದು ದುಷ್ಕೃತ್ಯಕ್ಕೆ ಯತ್ನಿಸಿದ್ದ. ಈ ವೇಳೆ ಯುವತಿಯೂ ಸಹ ಪ್ರತಿರೋಧವೊಡ್ಡಿದ್ದು, ಆತನ ಬಟ್ಟೆ ಹರಿದು, ಮುಖಕ್ಕೆ ಪರಚಿದ್ದಳು. ಇದೇ ವೇಳೆ ಎಸ್ಓಎಸ್ ಅಲರ್ಟ್ ಆಧರಿಸಿ ಯುವತಿಯ ಸ್ನೇಹಿತರು ಸ್ಥಳಕ್ಕೆ ಬರುತ್ತಿದ್ದಂತೆ, ಆರೋಪಿ ಓಡಿ ಹೋಗಿದ್ದ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.